ತಾಲೂಕಿನ ಬೆಳಚಲವಾಡಿ ಗ್ರಾಮದ ಬಳಿ ಗಣಿಗಾರಿಕೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಗಣಿಗಾರಿಕೆ ಸ್ಥಳಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಬೆಳಚಲವಾಡಿ ಗ್ರಾಮದ ಬಳಿ ಗಣಿಗಾರಿಕೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಗಣಿಗಾರಿಕೆ ಸ್ಥಳಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬೇಗೂರು-ಹೆಡಿಯಾಲ ರಸ್ತೆಯ ಬೆಳಚಲವಾಡಿ ಗ್ರಾಮದ ಸುತ್ತ ೬ ಕ್ವಾರಿಗಳಲ್ಲಿ ಗಣಿಗಾರಿಕೆಯಿಂದ ಕೃಷಿ ಬೋರ್‌ಗಳಲ್ಲಿ ನೀರು ಕಡಿಮೆಯಾಗುತ್ತಿದೆ.ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಬೆಳೆ ನಾಶ ವಾಗುತ್ತಿದೆ. ರಸ್ತೆ ಹಾಳಾಗುತ್ತಿವೆ.ಮನೆಗಳ ಗೋಡೆಗಳು,ದೇವಸ್ಥಾನ ಬಿರುಕು ಬಿಡುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದರು.

ಕ್ವಾರಿಯಿಂದ ಸಮೀಪವೇ ಗಣಿಗಾರಿಕೆ ನಡೆಯುತ್ತಿದೆ.ಓವರ್‌ ಲೋಡ್‌ ಟಿಪ್ಪರ್‌ ಸಂಚರಿಸುತ್ತಿವೆ. ಬೋರ್‌ ಕುಳಿ ಬ್ಲಾಸ್‌ ಮಾಡಿದಾಗ ಗ್ರಾಮದ ಸುತ್ತ ನಡುಗುತ್ತದೆ.ಬ್ಲಾಸ್‌ ಸದ್ದಿಗೆ ಭಯವಾಗುತ್ತಿದೆ.ಬ್ಲಾಸ್ಟಿಂಗ್‌ ಮಾಡಿದಾಗ ರೈತರ ಜಮೀನಿಗೆ ಕಲ್ಲು ಬೀಳುತ್ತದೆ ಹಾಗೂ ದೂಳು ಸಹ ಬರುತ್ತದೆ.ದೂಳಿನಿಂದ ಫಸಲು ಕೂಡ ನಾಶವಾಗುತ್ತದೆ ಎಂದು ಆರೋಪಿಸಿದರು.

ಸಂಜೆ ಬಳಿಯ ಸ್ಪೋಟಕ ಬಳಸುವಾಗ ಬೆಳಚಲವಾಡಿ ಏಕೆ ಬೇಗೂರಿಗೂ ಶಬ್ದ ಕೇಳುತ್ತದೆ.ಅಲ್ಲದೆ ಓವರ್‌ ಲೋಡ್‌ ಟಿಪ್ಪರ್‌ ಹಾವಳಿ ಇದೆ. ರಾತ್ರಿ ಸಮಯದಲ್ಲಿ ಮಲಗಲು ಆಗುತ್ತಿಲ್ಲ.ಇದಕ್ಕೆ ಮುಕ್ತಿ ಸಿಗಬೇಕು ಎಂದು ಕ್ವಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕ್ವಾರಿ ಲೀಸ್‌ ದಾರ ಎನ್.ನಂದಕುಮಾರ್‌ ಗ್ರಾಮಸ್ಥರ ಬಳಿಗೆ ಬಂದು ಸಮಸ್ಯೆ ಆಲಿಸಿದರು. ಈ ಸಮಯದಲ್ಲಿ ಗ್ರಾಮಸ್ಥರು ಹಾಗೂ ಲೀಸ್‌ ದಾರರ ನಂದಕುಮಾರ್‌ ಜೊತೆ ಮಾತಿನ ಚಕಮಕಿ ನಡೆಯಿತು.

ಈ ಸಮಯದಲ್ಲಿ ಗ್ರಾಮಸ್ಥರು ಸಮಾದಾನ ಪಡಿಸಿ,ಕ್ವಾರಿ ಕೆಲಸ ನೀವು ಸೇರಿದಂತೆ ಬೆಳಚಲವಾಡಿ ಸುತ್ತಲಿನ ಕ್ವಾರಿ ಕೆಲಸ ನಿಲ್ಲಿಸಿ,ಟಿಪ್ಪರ್‌ ನಿಲ್ಲಿಸಿ ಎಂದು ಹೇಳಿದಾಗ ಆಯಿತು ಕ್ವಾರಿ ಸಮಸ್ಯೆ ಬಗೆಹರಿಯುವ ತನಕ ಕೆಲಸ ನಿಲ್ಲಿಸುತ್ತೇವೆ ಎಂದರು.

ಈ ವೇಳೆ ರೈತರು ಮಾತನಾಡಿ ಕ್ವಾರಿ ಕೆಲಸ ನಿಲ್ಲಬೇಕು.ಬೋರ್‌ ಕುಳಿ ನಿಲ್ಲಬೇಕು.ಒಟ್ಟಾರೆ ಕ್ವಾರಿಯಿಂದ ಗ್ರಾಮಕ್ಕೇನು ಪ್ರಯೋಜನವಿಲ್ಲ.ಆದರೂ ಕ್ವಾರಿಯಿಂದಾಗುವ ತೊಂದರೆಗೆ ಗ್ರಾಮಸ್ಥರೇಕೆ ಸುಮ್ಮನಿರುವುದಿಲ್ಲ ಎಂದರು.

ಗ್ರಾಮದ ಸುತ್ತಮುತ್ತಲಿನ ಕ್ವಾರಿ ನಡೆಸುವ ಲೀಸ್‌ ದಾರರು ಗ್ರಾಮಕ್ಕೆ ಬಂದು ಗ್ರಾಮಸ್ಥರಿಗೆ ಸ್ಪಷ್ಟನೆ ನೀಡುವ ತನಕ ಕ್ವಾರಿ ಕೆಲಸ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರೊಬ್ಬರು ಕನ್ನಡಪ್ರಭಕ್ಕೆ ಸ್ಪಷ್ಟಪಡಿಸಿದ್ದಾರೆ.