ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು: ಬ್ಯಾಳಿ

| Published : Oct 23 2024, 12:35 AM IST

ಸಾರಾಂಶ

ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಜರುಗಿಸುವ ಕುರಿತಾದ ವಾಸ್ತವ ಸ್ಥಿತಿಯ ವರದಿ ಸಲ್ಲಿಸಲು ಡಿವಿಜನಲ್ ಕಮೀಷನ‌ರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ

ಗದಗ: ಪಶ್ಚಿಮ ಘಟ್ಟದಷ್ಟೇ ಮಹತ್ವ ಹೊಂದಿರುವ ಕಪ್ಪತ್ತಗುಡ್ಡ ವನ್ಯ ಸಂಪತ್ತ ರಕ್ಷಣೆ ಅಗತ್ಯವಾಗಿದ್ದು. ಔಷಧೀಯ ಸಂಪತ್ತಿಗೆ ಆಶ್ರಯ ನೀಡುತ್ತ ಬಂದಿರುವ ಕಪ್ಪತ್ತಗುಡ್ಡದಲ್ಲಿ ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಆಗ್ರಹಿಸಿದರು.

ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದ್ರ ಮಟ್ಟದಿಂದ 2700 ಅಡಿ ಎತ್ತರವಿದ್ದು, ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿಯ ಸಿಂಗಟಾಲಕೇರಿವರೆಗೆ 63 ಕಿಮಿ ಉದ್ದ ಹಾಗೂ 3200 ಹೆಕ್ಟೇರ್ ಒಟ್ಟು 17.872 ಹೆಕ್ಟೇರ್ ಪ್ರದೇಶ ಹೊಂದಿದ್ದು ಈ ಗುಡ್ಡದಲ್ಲಿ ಕರಿಯಲಕ್ಕಿ, ಅಶ್ವಗಂಧ, ಚದುರಂಗ, ಅಮೃತ ಬಳ್ಳಿ ಸೇರಿದಂತೆ 300ಕ್ಕೂ ಹೆಚ್ಚು ಜಾತಿಯ ಔಷಧಿ ಸಸ್ಯಗಳ ಆಗರವಾಗಿದೆ. ಅಲ್ಲದೇ ಸುಮಾರು 1000ಕ್ಕೂ ಹೆಚ್ಚು ನವಿಲು, ಹೈನಾ, ಚಿರತೆ, ಕಾಡುಹಂದಿ ಸೇರಿದಂತೆ ಮತ್ತಿತರ ವನ್ಯ ಜೀವಿಗಳ ಆಶ್ರಯ ತಾಣವಾಗಿದೆ. ಕಪ್ಪತ್ತಗುಡ್ಡವನ್ನು ಮೋಡಗಳು ಚುಂಬಿಸಿದರೆ, ಉತ್ತರ ಕರ್ನಾಟಕದಲ್ಲಿ ಮಳೆ ಎಂಬ ವಾಡಿಕೆ. ಬಂಗಾರ, ಮ್ಯಾಂಗನೀಸ್‌, ತಾಮ್ರ, ಕ್ಯಾಲ್ಸಿಯಂ ಹಾಗೂ ಕಬ್ಬಿಣ ಸೇರಿದಂತೆ 60 ಕ್ಕೂ ಹೆಚ್ಚು ಅದಿರನ್ನು ತನ್ನ ಒಡಲೊಳಗೆ ಹೊಂದಿದೆ. ಇಂತಹ ಸುಂದರ ತಾಣದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ಮಾಡಿ ಕೊಡಬಾರದು ಎಂದು 28-12-2016 ರಂದು ಬೆಟಗೇರಿ ರೇಲ್ವೆ ಹೋರಾಟ ಸಮಿತಿಯಿಂದ ಗದಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದನ್ನು ಸ್ಮರಿಸಿದರು.

ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯವೆಂದು ಸರ್ಕಾರ ಅಧಿಸೂಚನೆ ಹೊರಡಿಸಿದ್ದನ್ನು ಪ್ರಶ್ನಿಸಿ ಕೆಲ ಮೈನಿಂಗ್ ಕಂಪನಿಗಳು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದವು. ಅವರ ಅರ್ಜಿ ವಜಾಗೊಳಿಸಿದ ರಾಜ್ಯ ಉಚ್ಚ ನ್ಯಾಯಾಲಯವು 1-6-2019 ರಂದು ಕಪ್ಪತ್ತಗುಡ್ಡ ಸಂರಕ್ಷಿತ ಪ್ರದೇಶವೆಂದು ನಿರ್ಣಯ ನೀಡಿದ್ದು, 16-5-2019 ರಂದು ಕಪ್ಪತ್ತಗುಡ್ಡದ 60322 ಹೆ ಪ್ರದೇಶವನ್ನು ವನ್ಯ ಜೀವಿಧಾಮವನ್ನಾಗಿ ಆದೇಶ ಹೊರಡಿಸಿದ್ದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದೆ.

ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಜರುಗಿಸುವ ಕುರಿತಾದ ವಾಸ್ತವ ಸ್ಥಿತಿಯ ವರದಿ ಸಲ್ಲಿಸಲು ಡಿವಿಜನಲ್ ಕಮೀಷನ‌ರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಎಲ್ಲ ವಿವರ ಶೀಘ್ರದಲ್ಲಿ ಡಿವಿಜನಲ್ ಕಮೀಷನ್ ಬೆಳಗಾವಿ ಇವರಿಗೆ ಸಮಿತಿಯಿಂದ ಮನವರಿಕೆ ಮಾಡಿಕೊಟ್ಟು ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಗದಗ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಸ್.ವಿ. ಸುಲಾಖೆ, ಎಂ.ಟಿ. ಕಬ್ಬಿಣ, ಕೆ.ಆರ್. ಮೇರವಾಡೆ, ಮನಸುಕಲಾಲ ಪುಣೇಕರ ಮುಂತಾದವರು ಹಾಜರಿದ್ದರು.