ಕನ್ನಡಪ್ರಭ ವಾರ್ತೆ ಕೋಲಾರಸಿದ್ದರಾಮಯ್ಯ ಹೈಕಮಾಂಡ್ ಮಾತಿಗೆ ಗೌರವ ಕೊಟ್ಟು ಮಾತು ಉಳಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಹಾದಿಯಲ್ಲೇ ಶಾಸಕರಿಗೂ ಅವಕಾಶ ಮಾಡಿಕೊಡಬೇಕು ಎಂದು ಹೈಕಮಾಂಡ್ ಬಳಿ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಮನವಿ ಮಾಡಿದರು.ತಾಲೂಕಿನ ಬೆಳಗಾನಹಳ್ಳಿ ಕೋಮುಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕಾಂಗ ಸಭೆಯಲ್ಲಿ ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಆಗಿ ನೇಮಕ ಆಗಿದ್ದಾರೆ, ಅದರಂತೆ ಮೂರು ವರ್ಷ ಸಚಿವರಿದ್ದವರೂ ಬದಲಾಗಬೇಕು ಅನ್ನುವ ಒತ್ತಾಯ ನಮ್ಮಲ್ಲಿದೆ ಎಂದರು.ರಾಜ್ಯ ಕಾಂಗ್ರೆಸ್‌ನಲ್ಲಿ ನಿಷ್ಠಾವಂತ ಶಾಸಕರೂ ನಮ್ಮಲ್ಲಿದ್ದಾರೆ, ಹಾಗಾಗಿ ಸಿಎಂ ಸಿದ್ದರಾಮಯ್ಯ ಹಾದಿಯಲ್ಲೇ ಶಾಸಕರಿಗೂ ಅವಕಾಶ ಮಾಡಿಕೊಡಬೇಕು, ಇದು ನನ್ನೊಬ್ಬನ ಮಾತಲ್ಲ. ಇದು ರಾಜ್ಯದ ಶಾಸಕರ ಅಭಿಪ್ರಾಯ ಎಂದರು.

ಜಿಲ್ಲೆಗೆ ಮಂತ್ರಿ ಸ್ಥಾನ:

ನಮ್ಮ ಜಿಲ್ಲೆ ಕೋಲಾರಕ್ಕೂ ಮಂತ್ರಿ ಸ್ಥಾನ ಕೊಡಬೇಕು. ೭ ಬಾರಿ ಲೋಕಸಭೆಗೆ ಜಿಲ್ಲೆಯಿಂದ ಮುನಿಯಪ್ಪರನ್ನು ಕಳುಹಿಸಿಕೊಟ್ಟ ಜಿಲ್ಲೆ ನಮ್ಮದು. ಅಷ್ಟರ ಮಟ್ಟಿಗೆ ಕಾಂಗ್ರೆಸ್ ಬಲಿಷ್ಠವಾಗಿದೆ. ಎಸ್ಸಿ ಕೋಟಾದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಒಕ್ಕಲಿಗ ಕೋಟಾದಲ್ಲಿ ನನಗೆ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ಗೂ ಅವಕಾಶ ಮಾಡಿ ಕೊಡಿ ಎಂದಿದ್ದೇವೆ ಎಂದರು.ಕೆಜಿಎಫ್ ಶಾಸಕಿ ರೂಪಕಲಾ ಅವರ ಕುಟುಂಬ ಈಗಾಗಲೇ ಎಲ್ಲಾ ಆಗಿದೆ. ಅವರಿಗೆ ತಪ್ಪಿದರೆ ಅವರಪ್ಪ ಮುನಿಯಪ್ಪಗೆ ಎಂಬ ಚರ್ಚೆ ನಡೆಯುತ್ತಿದೆ, ಅವರ ರಾಜಕೀಯ ಕುಟುಂಬ ಹಿನ್ನೆಲೆ ಇರುವವರು, ಹಾಗಾಗಿ ನಮ್ಮಗೆ ಕುಟುಂಬದ ಹಿನ್ನೆಲೆ ಇಲ್ಲ. ನಾವೂ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದೇವೆ. ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.ನಮ್ಮದು ಕೆ.ಎಚ್. ಮುನಿಯಪ್ಪ ಹಾಗೂ ಅವರ ಕುಟುಂಬಕ್ಕೆ ವಿರೋಧ ಇಲ್ಲ, ಆದರೆ ನಮಗೆ ಯಾರೂ ದಿಕ್ಕೆ ಇಲ್ಲವಲ್ಲ. ಹಾಗಾಗಿ ನಾವು ಒಂದಾಗಿ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದೇವೆ ಎಂದರು.ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, ಭೀಮಾ ನಾಯಕ್ ಅವರ ಆಯ್ಕೆ ಆದ ಸಂದರ್ಭದಲ್ಲಿ ಒಂದು ವರ್ಷ ಸುಮ್ಮನಿರು ಆಮೇಲೆ ನೋಡೋಣ ಎಂದಿದ್ದರು, ಮಾತ್ರವಲ್ಲದೆ ಅಂದಿಗೆ ಡಿ.ಕೆ ಬ್ರದರ್ಸ್ ಸಹ ಮಾತು ಕೊಟ್ಟಿದ್ದರು ಎಂದು ತಿಳಿಸಿದರು.

ತಿರುಕನ ಕನಸು: ವಿರೋಧ ಪಕ್ಷದವರು ತಿರುಕನ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ಬಳಿಕ ಕಾಂಗ್ರೆಸ್ ಮುಗೀತು ಎಂದು, ಮುಂದಿನ ೨೦೨೮ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ, ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದರು.ಡಿಸಿಎಂ ಸೃಷ್ಟಿ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಡಿ.ಕೆ.ಶಿವಕುಮಾರ್ ಹೋರಾಟದಿಂದ ಬಂದವರು ಅವರನ್ನು ಪಕ್ಷ ಸಿಎಂ ಮಾಡಿದೆ ಎಂದರು.ರಮೇಶ್ ಕುಮಾರ್ ಹಾದಿಯಾಗಿ ನಾವೆಲ್ಲಾ ಒಗ್ಗಟ್ಟನ್ನು ಪ್ರದರ್ಶನ ಮಾಡುತ್ತೇವೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಿಕೊಳ್ಳುತ್ತೇವೆ, ನಾವೆಲ್ಲಾ ಒಟ್ಟಿಗೆ ಪಕ್ಷ ಕಟ್ಟಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಜಿಲ್ಲೆಯ ಶಾಸಕರ ಒಗ್ಗಟ್ಟು ಕುರಿತು ಸ್ಪಷ್ಟಪಡಿಸಿದರು.ಬಾಕ್ಸ್‌...

ಸಿದ್ದು ರಾಜೀನಾಮೆ ಕೊಟ್ಟಾಗ ಅಳು


ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಾಗ ನನಗೂ ಅಳು ಬಂತು. ನಾನು ಅತ್ತೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ರಾಜೀನಾಮೆ ಕೊಟ್ಟಾಗ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ನಿವಾಸದಲ್ಲಿ ನನ್ನನ್ನು ನೋಡಿದರು, ಆಗ ನನ್ನ ಕಣ್ಣಲ್ಲೂ ನೀರು ಬಂತು ನಾನು ಸಹ ಅತ್ತುಬಿಟ್ಟೆ ನಮ್ಮ ಅವರ ಬಾಂಧವ್ಯ ಆಗಿತ್ತು ಎಂದರು.