ರಾಜಣ್ಣ ಅವರ ರಾಜೀನಾಮೆ ಕೇಳುವ ಯೋಗ್ಯತೆ ಬಾಲಕೃಷ್ಣ ಗೆ ಇಲ್ಲ. ಬಿಡದಿ ರೈತರ ಹೋರಾಟದಲ್ಲಿ ಅಲ್ಲಿನ ಹೆಣ್ಣುಮಕ್ಕಳು ಪೊರಕೆ ಸೇವೆ ಮಾಡಿದ್ದರೂ ಇನ್ನೂ ಬುದ್ಧಿ ಕಲಿತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ, ಮಧುಗಿರಿ

ನಮ್ಮ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಬಗ್ಗೆ ಮಾಗಡಿ ಶಾಸಕ, ಪೌರಾಡಳಿತ ಸಚಿವ ಬಾಲಕೃಷ್ಣ ಹಗುರವಾಗಿ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಅಧಿಕಾರಕ್ಕಾಗಿ ಚಮತ್ಕಾರ ಮಾಡುವುದನ್ನು ಬಿಟ್ಟು ಸತ್ಯ ಮತ್ತು ಅಸತ್ಯ ಸ್ಪಷ್ಟವಾಗಿ ತಿಳಿದು ಮಾತನಾಡುವುದು ಸೂಕ್ತ. ರಾಜಣ್ಣ ಕಾಂಗ್ರೆಸ್ ಹಿರಿಯ ಮುತ್ಸದ್ದಿ. ಅವರ ಬಗ್ಗೆ ಎಚ್ಚರದ ಶಬ್ದ ಬಳಕೆ ಮಾಡುವ ಜೊತೆಗೆ ತಾವು ನೀಡಿರುವ ಹೇಳಿಕೆ ಕೂಡಲೇ ಹಿಂಪಡೆದು ಕ್ಷಮೆ ಯಾಚಿಸಬೇಕೆಂದು ಮಧುಗಿರಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮಹಾಲಿಂಗಯ್ಯ ಒತ್ತಾಯಿಸಿದರು. ಗುರುವಾರ ತಾಲೂಕಿನ ದೊಡ್ಡೇರಿ ಹೋಬಳಿ ಕಾಂಗ್ರೆಸ್ ಮುಖಂಡರು ಬಡವನಹಳ್ಳಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಜಣ್ಣ ರಾಜಿನಾಮೆ ಕೊಡಲಿ ಎಂಬ ಸಚಿವರ ಹೇಳಿಕೆಯಿಂದ ಅಭಿಮಾನಿಗಳಿಗೆ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ನೋವುಂಟಾಗಿದೆ. ಈ ಹೇಳಿಕೆ ವಾಪಸ್ ಪಡೆದು ಕ್ಷೆಮೆ ಕೋರಬೇಕು. ರಾಜಣ್ಣ ಅಹಿಂದ ವರ್ಗದ ಏಳಿಗೆಗೆ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದಾರೆ. ಅಲ್ಲದೆ ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರ ಬಗ್ಗೆ ಕ್ಷುಲ್ಲಕ ಮಾತನಾಡುವುದು ಅಕ್ಷಮ್ಯ. ಹಿರಿಯರ ಬಗ್ಗೆ ಮಾತನಾಡುವಾಗ ಪೂರ್ವಾಗ್ರಹ ಸಲ್ಲದು. ಇದು ತಮಗೆ ಶೋಭೆ ತರುವುದಿಲ್ಲ ಎಂದು ಸಚಿವ ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದರು. ತಾ.ಪಂ.ಮಾಜಿ ಸದಸ್ಯ ಭೂತನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಸಚಿವ ಬಾಲಕೃಷ್ಣ ಉದ್ಧಟತನದ ಟೀಕೆ ಮಾಡುವುದನ್ನು ಬಿಡಬೇಕು. ವಿಧಾನಪರಿಷತ್ ಚುನಾವಣಾ ಫಲಿತಾಂಶದ ಕುರಿತು ರಾಜಣ್ಣ ಸರಿಯಾಗಿಯೇ ಹೇಳಿದ್ದಾರೆ. ಬಾಲಕೃಷ್ಣ ಹೀಗೆ ಉದ್ಧಟತನದಿಂದ ಮಾತನಾಡಿದರೆ ಮಾಗಡಿಗೆ ಬಂದು‌ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕವಣದಾಲ ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ರಾಜಣ್ಣ ಅವರ ರಾಜೀನಾಮೆ ಕೇಳುವ ಯೋಗ್ಯತೆ ಬಾಲಕೃಷ್ಣ ಗೆ ಇಲ್ಲ. ಬಿಡದಿ ರೈತರ ಹೋರಾಟದಲ್ಲಿ ಅಲ್ಲಿನ ಹೆಣ್ಣುಮಕ್ಕಳು ಪೊರಕೆ ಸೇವೆ ಮಾಡಿದ್ದರೂ ಇನ್ನೂ ಬುದ್ಧಿ ಕಲಿತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿ.ಎಲ್.ಡಿ.ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸಿದ್ದಗಂಗಯ್ಯ ಮಾತನಾಡಿ ಬಾಲಕೃಷ್ಣಗೆ ರಾಜಕೀಯ ಅನುಭವ ಕಡಿಮೆ. ಅಧಿಕಾರಕ್ಕಾಗಿ ಬೇರೆಯವರನ್ನು ಓಲೈಸಲು ಈ ರೀತಿ ಮಾತನಾಡುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನಜೀರ್ ಸಾಬ್, ಪೋಸ್ಟ್ ಹೆಂಜಾರಪ್ಪ, ಓಬಳಿಹಳ್ಳಿ ಜಗನ್ನಾಥ್ , ಈರದಾಸಪ್ಪ, ಬಾಗಜ್ಜಿ ರಂಗನಾಥ್, ಸಣ್ಣರಾಮಣ್ಣ, ಎಂ.ಎಸ್. ರಫೀಕ್, ಜಯರಾಮಣ್ಣ, ಮಲ್ಲಿಕಾರ್ಜುನ್, ಮುದ್ದಣ್ಣ, ಹೆಂಜಾರಪ್ಪ, ಸಿರಿಯಪ್ಪ, ಜಗನ್ನಾಥ್ ಕೊಂಡಪ್ಪ , ಯುವಕಾಂಗ್ರೆಸ್ ಅಧ್ಯಕ್ಷ ರವಿ, ನಾಗರಾಜು ಸೇರಿದಂತೆ ದೊಡ್ಡೇರಿ ಹೋಬಳಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.