ತಾಲೂಕಿನ ಸಕ್ಕರ ಗ್ರಾಮದಲ್ಲಿ ಸಚಿವ ಬಾಲಕೃಷ್ಣ ಅವರು ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಮುಖಂಡರ ಸೆಳೆಯುವ ಪ್ರಕ್ರಿಯೆಗೆ ಚಾಲನೆ । ಹಿರಿಯೂರು ಉಪ ಚುನಾವಣೆ ಮುನ್ನವೇ ಹಲವು ಸಚಿವರ ಭೇಟಿ ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುಜೆಡಿಎಸ್ ಪಕ್ಷಕ್ಕೆ ಸದಾ ಬೆನ್ನಿಗೆ ನಿಂತಿರುವ ಹಿರಿಯೂರಿನ ಧರ್ಮಪುರ ಹೋಬಳಿಗೆ ಇದೀಗ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಲಗ್ಗೆ ಇಟ್ಟಿದ್ದಾರೆ.
ಮುಖಂಡರುಗಳ ಭೇಟಿ ಮತ್ತು ಕೆಲ ಮುಖಂಡರನ್ನು ಸೆಳೆಯುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿರುವ ಅವರು, ಕಳೆದ ಚುನಾವಣೆಯಂತೆ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕೊಡಿಸುವ ಆಶಯ ವ್ಯಕ್ತಪಡಿಸಿದ್ದು, ಹಿರಿಯೂರು ಉಪ ಚುನಾವಣೆಯನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಶತಾಯಗತಾಯ ಬೈ ಎಲೆಕ್ಷನ್ ಗೆಲ್ಲಲೇಬೇಕೆಂಬ ಹಠ ಮಾಡಿದಂತೆ ಕೆಲಸ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ಚುನಾವಣೆ ಘೋಷಣೆಗೂ ಮುನ್ನವೇ ಒಬ್ಬರ ಹಿಂದೊಬ್ಬರು ಹಿರಿಯೂರಿಗೆ ಭೇಟಿ ನೀಡುತ್ತಿದ್ದಾರೆ.ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಗಳನ್ನು ಹಿರಿಯೂರಿನಲ್ಲೇ ಆಯೋಜಿಸಿ ಜನರ ಗಮನ ಸೆಳೆಯುತ್ತಿದ್ದಾರೆ.
ಈಗಾಗಲೇ ಸಚಿವರಾದ ಜಮೀರ್ ಅಹಮದ್, ಕೆ.ಎಚ್.ಮುನಿಯಪ್ಪ, ಎಚ್.ಸಿ.ಬಾಲಕೃಷ್ಣ ಅವರು ಹಿರಿಯೂರು ತಾಲೂಕಿನಲ್ಲಿ ಒಂದು ಸುತ್ತಿನ ಓಡಾಟ ನಡೆಸಿದ್ದಾರೆ. ಅದರಲ್ಲೂ ಸಿಎಂ ಡಿ.ಕೆ.ಶಿವಕುಮಾರ್ ಅವರ ಆಪ್ತರಾದ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಈಗಾಗಲೇ ಎರಡು ಬಾರಿ ನಗರಕ್ಕೆ ಆಗಮಿಸಿದ್ದು, ತಾಲೂಕಿನ ವಾಸ್ತವ ಸ್ಥಿತಿಯ ಮಾಹಿತಿ ಪಡೆಯುತ್ತಿದ್ದಾರೆ.ಆ.26 ರಂದು ನಗರಕ್ಕೆ ಆಗಮಿಸಿದ್ದ ಸಚಿವ ಎಚ್.ಸಿ.ಬಾಲಕೃಷ್ಣ, ಧರ್ಮಪುರ ಹೋಬಳಿ ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದ್ದರು. ಇದೀಗ ಸೆ.28ರಂದು ತಾಲೂಕಿಗೆ ಭೇಟಿ ನೀಡಿದ ಸಚಿವರು ಮತ್ತೆ ಧರ್ಮಪುರ ಭಾಗದಲ್ಲಿ ಎರಡು ದಿನ ಓಡಾಡಿ ಪಕ್ಷದ ಮುಖಂಡರ ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ಖಂಡೇನಹಳ್ಳಿ, ಪಿಡಿ ಕೋಟೆ, ಸಕ್ಕರ, ಧರ್ಮಪುರ, ಹಲಗಲದ್ದಿ, ಹರಿಯಬ್ಬೆ ಮುಂತಾದ ಹತ್ತಾರು ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮೊದಲಿನಿಂದಲೂ ಅತೀ ಹೆಚ್ಚು ಮತದಾರರು ಇರುವ ಧರ್ಮಪುರ ಹೋಬಳಿಯಲ್ಲಿ ಒಕ್ಕಲಿಗರ ಸಂಖ್ಯೆಯೂ ಸಾಕಷ್ಟಿದೆ. ಜೆಡಿಎಸ್ ಮತಗಳನ್ನು ಗುರಿಯಾಗಿಟ್ಟುಕೊಂಡು ಸಚಿವ ಎಚ್.ಸಿ.ಬಾಲಕೃಷ್ಣ ಅವರು ಅಖಾಡಕ್ಕೆ ಇಳಿದಂತೆ ಕಾಣುತ್ತಿದ್ದು ಕಳೆದ ಚುನಾವಣೆಯಲ್ಲಿ ಧರ್ಮಪುರ ಭಾಗದಿಂದ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಬಂದಿದ್ದರು ಸಹ ಜೆಡಿಎಸ್ ಗೆ ಬಂದ ಅತೀ ಹೆಚ್ಚು ಮತಗಳು ಧರ್ಮಪುರ ಹೋಬಳಿಯಿಂದಲೇ ಬಂದಿದ್ದವು.ಹಾಗಾಗಿ, ಜೆಡಿಎಸ್ ಭದ್ರಕೋಟೆ ಎಂಬಂತಿರುವ ಧರ್ಮಪುರ ಹೋಬಳಿಯನ್ನೇ ಗುರಿಯಾಗಿಸಿಕೊಂಡು ಸಚಿವ ಬಾಲಕೃಷ್ಣರವರು ಪದೇ ಪದೇ ಭೇಟಿ ನೀಡುತ್ತಿರುವುದು ಜೆಡಿಎಸ್ ಮುಖಂಡರ ನಿದ್ದೆಗೆಡಿಸಿದೆ.
ಸೆ.28,29ರ ಎರಡು ದಿನಗಳ ಪ್ರವಾಸದಲ್ಲಿರುವ ಸಚಿವರು ಒಕ್ಕಲಿಗ ಮತಗಳನ್ನು ಗುರಿಯಾಗಿಸಿಕೊಂಡು ಓಡಾಡಿರುವುದು ಸಹ ಸುಳ್ಳೇನಲ್ಲ. 2018ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಬಿಜೆಪಿ ಪಕ್ಷ ಪ್ರಬಲವಾಗಿ ಕಾಣಿಸಿಕೊಂಡು ಹೆಚ್ಚಿನ ಮತ ಪಡೆದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿ ಸೋಲು ಉಂಡಿದ್ದ ಮಾಜಿ ಸಚಿವ ಡಿ.ಸುಧಾಕರ್ ಸಹ ಆಗ ಧರ್ಮಪುರ ಹೋಬಳಿಯ ಕಡೆ ವಿಶೇಷ ಗಮನ ಹರಿಸಿದ್ದರು.ಜೆಡಿಎಸ್‌ನ ಒಕ್ಕಲಿಗ ಮತ ಬ್ಯಾoಕ್ ಗೆ ಕೈ ಹಾಕಿದ್ದ ಡಿ.ಸುಧಾಕರ್ ಅವರು 2023ರ ಚುನಾವಣೆಯಲ್ಲಿ ಸಾಕಷ್ಟು ಒಕ್ಕಲಿಗ ಮತಗಳನ್ನು ಸೆಳೆದಿದ್ದರು. ಇದೀಗ ಸಿಎಂ ಆಪ್ತ ಸಚಿವ ಎಚ್.ಸಿ.ಬಾಲಕೃಷ್ಣ ಧರ್ಮಪುರ ಹೋಬಳಿಯ ಉಸ್ತುವಾರಿಯ ಜೊತೆಗೆ ಒಕ್ಕಲಿಗ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಸೆಳೆಯುವ ಕಸರತ್ತು ಆರಂಭಿಸಿರುವುದು ಮೇಲ್ನೋಟಕ್ಕೆ ಎಲ್ಲರಿಗೂ ಕಾಣುವಂತದ್ದೇ.
ಐಮಂಗಲ, ಕಸಬಾ, ಜೆಜಿ ಹಳ್ಳಿ ಹೋಬಳಿಗಳ ಕಡೆ ಇನ್ನೂ ಗುರಿ ಇಡದ ಕಾಂಗ್ರೆಸ್ ಧರ್ಮಪುರ ಹೋಬಳಿಯನ್ನು ಚುನಾವಣೆ ಘೋಷಣೆಗೂ ಮುನ್ನ ಗುರಿಯಾಗಿಸಿಕೊಂಡಿರುವುದು ಆಶ್ಚರ್ಯ ಹುಟ್ಟಿಸುತ್ತಿದೆ. ಒಟ್ಟಿನಲ್ಲಿ ಸಚಿವ ಬಾಲಕೃಷ್ಣರ ಗುರಿ ನಿಖರವಾಗಿರುವಂತಿದೆ.ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವುದಷ್ಟೇ ನಮ್ಮ ಗುರಿ:ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಪತ್ರಿಕೆಗೆ ಪ್ರತಿಕ್ರಿಯಿಸಿ ಚುನಾವಣೆ ಗೆಲುವು ನಮ್ಮ ಗುರಿಯಷ್ಟೇ. ಒಕ್ಕಲಿಗ ಮತಗಳನ್ನೇ ಗುರಿ ಮಾಡುತ್ತಿದ್ದೇವೆ ಎಂತಲ್ಲ. ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸುವುದು ಅವರ ಅಹವಾಲು ಆಲಿಸುವುದನ್ನು ಸಹ ಮಾಡುತ್ತಿದ್ದೇನೆ. ಜೆಡಿಎಸ್ ಒಕ್ಕಲಿಗ ಮುಖಂಡರ ಭೇಟಿ ಮಾಡುವುದರಲ್ಲಿ ತಪ್ಪೇನಿದೆ. ಪ್ರತಿಯೊಬ್ಬ ರಾಜಕೀಯ ಮುಖಂಡನೂ ಅವರವರ ರಾಜಕೀಯ ಭವಿಷ್ಯ ಅರಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿ. ಉತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿಗಳ ಕೈ ಬಲಪಡಿಸುವುದಷ್ಟೇ ನಮ್ಮ ಕೆಲಸ. ಜೆಡಿಎಸ್ ಭದ್ರಕೋಟೆ ಎನ್ನುವ ಹೋಬಳಿಯಲ್ಲೂ ಕಳೆದ ಬಾರಿ ನಮ್ಮ ಪಕ್ಷಕ್ಕೆ ಹೆಚ್ಚಿನ ಮತ ಬಂದಿವೆ. ಅದನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ನಡೆದಿದೆ. ನೂರಕ್ಕೆ ತೊಂಬತ್ತು ಭಾಗ ಸುಹಾಸ್ ಸುಧಾಕರ್ ಗೆ ಟಿಕೆಟ್ ಸಿಗಬಹುದು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.