ನಾಡಿನ ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಶ್ರದ್ಧೆ ಹಾಗೂ ರಾಜವೈಭವದ ಪ್ರತೀಕವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಸಂಭ್ರಮಕ್ಕೆ ಬುಧವಾರ ಸಾಕ್ಷಿಯಾದ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು, ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುವ ಮೂಲಕ ನಾಡಿನ ಪರಂಪರೆಯ ಮೇಲಿನ ಗೌರವವನ್ನು ಮೆರೆದಿದ್ದಾರೆ.
- ಸುತ್ತೂರು ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದ ಮುಜರಾಯಿ ಸಚಿವ । ನಂದಿಧ್ವಜ ಪೂಜೆ, ಜಂಬೂ ಸವಾರಿಯಲ್ಲಿ ಭಾಗಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನಾಡಿನ ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಶ್ರದ್ಧೆ ಹಾಗೂ ರಾಜವೈಭವದ ಪ್ರತೀಕವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಸಂಭ್ರಮಕ್ಕೆ ಬುಧವಾರ ಸಾಕ್ಷಿಯಾದ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು, ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುವ ಮೂಲಕ ನಾಡಿನ ಪರಂಪರೆಯ ಮೇಲಿನ ಗೌರವವನ್ನು ಮೆರೆದರು.ವಿಜಯದಶಮಿ ಅಂಗವಾಗಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಚಿವರು, ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಮುಖ್ಯಮಂತ್ರಿಗಳೊಂದಿಗೆ ಮಠದ ಆವರಣದಲ್ಲಿ ನಡೆದ ಹೋಮ, ಹವನ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ನಾಡಿನ ಜನತೆಗೆ ಇನ್ನಷ್ಟು ಸೇವೆ ಸಲ್ಲಿಸುವ ಶಕ್ತಿ ದೊರೆಯಲಿ, ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಶ್ರೀ ಚಾಮುಂಡೇಶ್ವರಿ ಕೃಪೆ ದೊರೆಯಲಿ:ಮೈಸೂರು ದಸರಾ ಕೇವಲ ಉತ್ಸವವಲ್ಲ, ಅದು ನಾಡಿನ ಶಕ್ತಿ, ಸಂಸ್ಕೃತಿ, ಪರಂಪರೆ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಪ್ರತಿಬಿಂಬವಾಗಿದೆ. ದೇಶ-ವಿದೇಶಗಳಿಂದ ಆಗಮಿಸಿ ದಸರಾ ವೈಭವವನ್ನು ಕಣ್ತುಂಬಿಕೊಳ್ಳುತ್ತಿರುವ ಎಲ್ಲರಿಗೂ ತಾಯಿ ಚಾಮುಂಡೇಶ್ವರಿಯ ಅನುಗ್ರಹ ದೊರೆಯಲಿ. ಜನರ ಬದುಕಿನಲ್ಲಿರುವ ದುಃಖ-ದುಮ್ಮಾನ ದೂರವಾಗಿ, ಎಲ್ಲರ ಜೀವನದಲ್ಲೂ ಶಾಂತಿ, ನೆಮ್ಮದಿ ಹಾಗೂ ಸುಖ-ಸಮೃದ್ಧಿ ನೆಲೆಸಲಿ ಎಂದು ಸಚಿವ ಕೆ.ಎಸ್.ಬಸವಂತಪ್ಪ ಹಾರೈಸಿದರು.
ಅರಮನೆಯ ಸಾಂಪ್ರದಾಯಿಕ ವಿಧಿವಿಧಾನಗಳು, ನಂದಿಧ್ವಜ ಪೂಜೆ ಮತ್ತು ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯೊಂದಿಗೆ ಸಾಗುವ ಜಂಬೂಸವಾರಿ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಇವು ನಾಡಿನ ಜನರ ಭಕ್ತಿ, ಅಭಿಮಾನ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.ಪರಂಪರೆ ಉಳಿಸುವುದು ಹೊಣೆ:
ಮೈಸೂರು ದಸರಾ ನಾಡಿನ ಇತಿಹಾಸ, ಪರಂಪರೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ವೇದಿಕೆ. ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ಸಂಗತಿ. ವಿಜಯದಶಮಿಯು ಒಳಿತಿನ ವಿಜಯದ ಸಂಕೇತ, ನಾಡಿನ ಜನರಲ್ಲಿ ಹೊಸ ಭರವಸೆ, ಏಕತೆ ಮತ್ತು ಸೌಹಾರ್ದತೆ ಮೂಡಿಸಲಿ ಎಂದು ಸಚಿವರು ಆಶಿಸಿದರು.ನಂದಿಧ್ವಜ ಪೂಜೆ:
ಜಂಬೂಸವಾರಿಗೆ ಚಾಲನೆ ನೀಡುವ ಮುನ್ನ ನಡೆದ ನಂದಿಧ್ವಜ ಪೂಜೆಯಲ್ಲಿ ಸಚಿವರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಂಬೂಸವಾರಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡರು.ಬಳಿಕ ತೆರೆದ ವಾಹನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಾಗಿದ ಸಚಿವ ಬಸವಂತಪ್ಪ, ಜಂಬೂಸವಾರಿ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಜನರತ್ತ ಕೈಬೀಸಿ ಶುಭಾಶಯ ಕೋರಿದರು. ಉತ್ಸವದಲ್ಲಿ ಪಾಲ್ಗೊಂಡಿದ್ದ 50 ಕಲಾತಂಡಗಳು ಹಾಗೂ 53 ವೈವಿಧ್ಯಮಯ ಸ್ಥಬ್ಧಚಿತ್ರಗಳನ್ನು ವೀಕ್ಷಿಸಿ ದಸರಾ ವೈಭವವನ್ನು ಆಸ್ವಾದಿಸಿದರು.
- - --21ಕೆಡಿವಿಜಿ31, 32: ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಸಂಭ್ರಮದಲ್ಲಿ ಸಚಿವ ಕೆ.ಎಸ್.ಬಸವಂತಪ್ಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು.