ಕುಂದಾಪುರ: ರಾಜ್ಯದಲ್ಲಿ ಅಲ್ಪಾವಧಿ ಅಧಿಕಾರ‌ ಮಾಡಿದ ಬಿಜೆಪಿ ಸರ್ಕಾರದ ಕೋಟ್ಯಾಂತರ ಬೆಲೆ ಬಾಳುವ ಆಸ್ತಿಗಳನ್ನು ಪರಭಾರೆ ಮಾಡಿರುವ ಇತಿಹಾಸವಿರುವಾಗ, ದೇಶದ ಸ್ವಾತಂತ್ರ್ಯಕ್ಕೆ ಹೋರಾಟ‌‌ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ‌ ಕೇವಲ‌ ಹನ್ನೊಂದು ಸೆಂಟ್ಸ್ ಜಾಗವನ್ನು ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಬಿಜೆಪಿ ಮುಖಂಡರಿಗೆ ಯಾವ ನೈತಿಕತೆ ಇದೆ ಎಂದು ರಾಜ್ಯ ಸಣ್ಣ ನೀರಾವರಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಪ್ರಶ್ನಿಸಿದರು.ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಬಳಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕಾಂಗ್ರೆಸ್ ಪಕ್ಷದ ಬ್ಲಾಕ್‌ ಕಚೇರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಲ್ಲಿ ನೂರು ಕಾಂಗ್ರೆಸ್ ಸ್ವಂತ‌ ಕಚೇರಿಗಳನ್ನು ನಿರ್ಮಿಸುವ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ. ಜಾಗ ಹಾಗೂ‌ ಕಟ್ಟಡ ನಿರ್ಮಾಣಗಳೆಲ್ಲವೂ ಕಾನೂನು ಪ್ರಕಾರವೇ ನಡೆಯುತ್ತದೆ. ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ಪರವಾದ ಸರ್ಕಾರ‌ ಬಂದಿರುವುದು ಬಿಜೆಪಿಗರ ನಿದ್ದೆಗೆಡಿಸಿದೆ. ವಿರೋಧ ಪಕ್ಷದ ಜನಪ್ರತಿನಿಧಿಗಳಿದ್ದರೂ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ‌ ನೀಡುವ ಬದ್ದತೆ ಕಾಂಗ್ರೆಸ್ ಸರ್ಕಾರಕ್ಕಿದೆ ಎಂದರು.ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಬಿಜೆಪಿಗರು ಆರೋಪಿಸುವಂತೆ ರಾತ್ರಿ ಬೆಳಗಾಗುವುದರ ಒಳಗೆ ಇಲ್ಲಿ ಜಾಗ ಮಂಜೂರಾತಿ ನಡೆದಿಲ್ಲ. ಈ ಬಗ್ಗೆ 25 ವರ್ಷಗಳ‌ ನಿರಂತರ ಪ್ರಯತ್ನವಿದೆ. ಸ್ವಂತ ಕಚೇರಿಯ‌ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಬೇಕು ಎನ್ನುವುದು ಪಕ್ಷದ ಉದ್ದೇಶ ಎಂದರು.

ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿ, ಇಂದಿನ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಿಜೆಪಿಯೇ ಪುಕ್ಕಟೆ ಪ್ರಚಾರ ನೀಡಿದೆ. ಈ ಹಿಂದೆ ಪಕ್ಷಕ್ಕೆ ಉಚಿತವಾಗಿ ಕಚೇರಿ ನೀಡಿದ‌ ಮಾಜಿ‌ ಶಾಸಕ ಎಸ್ ಎಸ್ ಕೊಳ್ಕೆಬೈಲ್ ಮತ್ತು ಅವರ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸುವುದು ಆದ್ಯತೆಯಾಗಬೇಕು. ಜನರಿಗೆ ಸ್ಪಂದಿಸಿ, ಅಧಿಕಾರಿಗಳಿಂದ‌ ಕೆಲಸ ಮಾಡಿಸಿಕೊಳ್ಳುವವರೇ ನಿಜವಾದ ಜನನಾಯಕರು.

ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್. ಹರಿಪ್ರಸಾದ್ ಶೆಟ್ಟಿ‌ ಕಾನ್ಮಕ್ಕಿ ಮಾತನಾಡಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ ಎ ಗಫೂರ್, ಜಿಲ್ಲಾ ಮಹಿಳಾ‌ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಮೀನುಗಾರಿಕಾ ಫೆಡರೇಶನ್ ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜಿಲ್ಲಾ‌ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ ಅಲೆವೂರು, ಜಿಲ್ಲಾ ವಕ್ತಾರ ಕೆ. ವಿಕಾಸ್ ಹೆಗ್ಡೆ, ಪ್ರಮುಖರಾದ ಎಸ್ ರಾಜು ಪೂಜಾರಿ ಬೈಂದೂರು, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಮಲ್ಯಾಡಿ ಶಿವರಾಮ ಶೆಟ್ಟಿ, ಮುಸ್ತಾಕ್ ಅಹ್ಮದ್ ಬೆಳ್ವೆ, ದೇವಕಿ ಪಿ ಸಣ್ಣಯ್ಯ, ಕೆದೂರು ಸದಾನಂದ‌ ಶೆಟ್ಟಿ, ಇಚ್ಚಿತಾರ್ಥ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ರೋಶನ್ ಶೆಟ್ಟಿ, ಕೇಶವ್ ಭಟ್ ಮತ್ತಿತರರು ಇದ್ದರು.


ಹೆಚ್ ಹರಿಪ್ರಸಾದ್ ಶೆಟ್ಟಿ ಪ್ರಸ್ತಾಪಿಸಿದರು‌. ಕೋಣಿ ನಾರಾಯಣ ಆಚಾರ್ ವಂದಿಸಿದರು. ಮಂಜುನಾಥ ಹಿಲಿಯಾಣ ನಿರೂಪಿಸಿದರು.ಪೂಜಾರಿ ಕಡೆಗಣನೆ ಆರೋಪ: ಜೆಪಿ ಹೆಗ್ಡೆ ಪ್ರತಿಕ್ರಿಯೆನನ್ನ ಚುನಾವಣೆಯೂ ಸೇರಿದಂತೆ‌ ಎಲ್ಲಾ ಚುನಾವಣೆಗಳಲ್ಲೂ ಬೈಂದೂರಿನ ಮಾಜಿ‌ ಶಾಸಕರಾದ ಕೆ. ಗೋಪಾಲ ಪೂಜಾರಿಯವರು ಕುಂದಾಪುರಕ್ಕೆ ಬಂದು ಕೆಲಸ‌ ಮಾಡಿದ್ದಾರೆ. ಪಕ್ಷ, ಸಂಘಟನೆಯಲ್ಲಿ ಅವರ ಮಾರ್ಗದರ್ಶನವನ್ನು ಪಡೆದುಕೊಳ್ಳೋಣ. ಕುಂದಾಪುರದಲ್ಲಿ ಮುಖಂಡರು ಬೇಕು. ಅವರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಪ್ರಯತ್ನ ಮಾಡೋಣ ಎನ್ನುವ ಮೂಲಕ ಕುಂದಾಪುರ ಕ್ಷೇತ್ರಕ್ಕೆ ಕೆ. ಗೋಪಾಲ ಪೂಜಾರಿ ನೀಡಿದ ಕೊಡುಗೆಗಳನ್ನು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಸ್ಮರಿಸಿದರು. ತನ್ಮೂಲಕ ಕುಂದಾಪುರ ಬ್ಲಾಕ್‌ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಮಾಜಿ‌ ಶಾಸಕ ಗೋಪಾಲ ಪೂಜಾರಿಯವರ ಕಡೆಗಣನೆ‌ ಕುರಿತಂತೆ ನಡೆಯುತ್ತಿರುವ ಕೆಲ ಗೊಂದಲಗಳಿಗೆ ಜೆಪಿ ಹೆಗ್ಡೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.