ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಸಮಗ್ರ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಏಕಾಂಗಿ ಹೋರಾಟ ನಡೆಸುತ್ತಿದ್ದು, ಅವರಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರೇ ಬೆಂಬಲವಾಗಿ ನಿಲ್ಲದಿರುವುದು ವಿಪರ್ಯಾಸ ಎಂದು ಭಾರತೀಯ ಕಿಸಾನ್ ಸಂಘದ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶರಾಜು ಹೇಳಿದರು.ಕಾಂಗ್ರೆಸ್ ಶಾಸಕರಿಗೆ ಕೃಷಿಯ ಬಗ್ಗೆ ಜ್ಞಾನವಿಲ್ಲ. ನೀರಿನ ಸೂಕ್ಷ್ಮತೆಯ ಅರಿವಿಲ್ಲ. ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ಹಾಸನ ಕೃಷಿ ಕಾಲೇಜುಗಳನ್ನು ಮಂಡ್ಯ ಕೃಷಿ ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಸೇರಿಸದಂತೆ ಒತ್ತಡ ಹೇರಿದಾಗಲೂ ಜಿಲ್ಲೆಯ ಶಾಸಕರಿಂದ ಪ್ರಬಲ ವಿರೋಧ ವ್ಯಕ್ತವಾಗಲೇ ಇಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರೊಬ್ಬರೇ ಏಕಾಂಗಿಯಾಗಿ ಕೃಷಿ ವಿವಿ ಸ್ಥಾಪನೆಗೆ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲೆಯ ಶಾಸಕರು ಅವರಿಗೆ ಜತೆಯಾಗಿ ನಿಲ್ಲುವ ಪ್ರಯತ್ನ ಮಾಡದಿರುವುದು ಬೇಸರ ಉಂಟುಮಾಡಿದೆ. ಜೊತೆಗೆ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಹೋದರ ಎಚ್.ಡಿ.ರೇವಣ್ಣ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಅಸಮಾಧಾನ ವ್ಯಕ್ತಪಡಿಸಿದರು.ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯ ೬೫೦ ಎಕರೆ ಜಮೀನು ಹೊಂದಿದೆ. ಬೆಂಗಳೂರಿನ ಕೃಷಿ ವಿವಿಯಲ್ಲಿ ಗ್ರಾಮಾಂತರ ಭಾಗದ ರೈತಾಪಿ ಮಕ್ಕಳು ವ್ಯಾಸಂಗ ಮಾಡಲಾಗದು. ಬೆಂಗಳೂರಿನಂತಹ ಮಹಾನಗರದಲ್ಲಿ ದುಬಾರಿ ವೆಚ್ಚದಲ್ಲಿ ಕೊಠಡಿ, ಊಟೋಪಚಾರಗಳ ವೆಚ್ಚ ಭರಿಸಲಾಗದು. ಇಂತಹ ಸ್ಥಿತಿಯಲ್ಲಿ ಮಂಡ್ಯದಂತಹ ಅಚ್ಚ ರೈತರ ಜಿಲ್ಲೆಯಲ್ಲಿ ಇದು ಸಾಧ್ಯವಾಗಬಹುದು. ಹಾಸನದಿಂದ ಮಂಡ್ಯಕ್ಕೆ ೧೨೫ ಕಿ.ಮೀ. ಇದೆ. ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಮಡಿಕೇರಿ ಭಾಗಗಳು ಒಂದೇ ರೀತಿಯ ಹವಾಮಾನ ಹೊಂದಿರುವ ಪ್ರದೇಶ ಹೊಂದಿವೆ. ಇಲ್ಲಿ ಕೃಷಿ ವಿವಿ ಸ್ಥಾಪನೆಯಾಗುವುದರಿಂದ ಈ ಭಾಗದ ಕೃಷಿ ಚಟುವಟಿಕೆಗಳು, ಸಂಶೋಧನೆಗೆ ಹೆಚ್ಚಿನ ಬೆಳಕು ಚೆಲ್ಲಬಹುದಾಗಿದೆ ಎಂದು ಅಭಿಪ್ರಾಯಿಸಿದರು.
ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ, ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಎಚ್.ಡಿ.ರೇವಣ್ಣ ಅವರು ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಬೇಕು. ಜಿಲ್ಲೆಯ ಜನರಿಂದಲೇ ದೇವೇಗೌಡರ ಕುಟುಂಬ, ಜೆಡಿಎಸ್ ಪಕ್ಷ ರಾಜಕೀಯವಾಗಿ ಅಧಿಕಾರ ಅನುಭವಿಸಿದೆ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.ಈ ಹಿಂದೆ ಕೆಎಂಎಫ್ ವತಿಯಿಂದ ಮಂಡ್ಯದಲ್ಲಿ ಸ್ಥಾಪನೆಯಾಗಬೇಕಿದ್ದ ಹಾಲಿನ ಪುಡಿ ಉತ್ಪಾದನಾ ಘಟಕವನ್ನೂ ಸಹ ರೇವಣ್ಣ ಅವರು ಹಾಸನಕ್ಕೆ ತೆಗೆದುಕೊಂಡು ಹೋದರು. ಅದೇ ರೀತಿ ಮಂಡ್ಯ ಜಿಲ್ಲೆಗೆ ಬರಬೇಕಿದ್ದ ಹಲವಾರು ಯೋಜನೆಗಳನ್ನು ಹಾಸನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇನ್ನಾದರೂ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತಮ್ಮ ಸಹೋದರ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಜನತೆ ಗೆಲ್ಲಿಸಿ ಸಂಸದರನ್ನಾಗಿ ಮಾಡಿದ್ದಾರೆ. ಅದರಿಂದಲೇ ಅವರು ಕೇಂದ್ರ ಸಚಿವರಾಗಿ ಅಧಿಕಾರ ನಡೆಸುತ್ತಿದ್ದಾರೆ. ಜಿಲ್ಲೆಯ ಜನರಿಗೆ ಮೋಸ ಮಾಡಲು ಮುಂದಾಗಬಾರದು. ಇನ್ನಾದರೂ ಇಂತಹ ಧೋರಣೆಯನ್ನು ಬಿಟ್ಟು ಜಿಲ್ಲೆಯಲ್ಲಿ ಕೃಷಿ ವಿವಿ ಸ್ಥಾಪನೆಗೆ ತಮ್ಮ ಸಂಪೂರ್ಣ ಸಹಕಾರ ನೀಡಬೇಕು. ಇದಕ್ಕೆ ಜಿಲ್ಲೆಯ ಶಾಸಕರು, ಸಂಸದರು ಎಲ್ಲರೂ ಬೆಂಬಲ ನೀಡಬೇಕು. ಸರ್ಕಾರದಿಂದ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಮಾಡುವುದನ್ನು ಬಿಟ್ಟು ಅದನ್ನು ಎಲ್ಲರೂ ಕೂಡಿ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ವಿವಿಧ ಸಂಘಟನೆಗಳ ಮುಖಂಡರಾದ ಮೋಹನ್, ಬಿ.ಪಿ.ಅಪ್ಪಾಜಿಗೌಡ, ಮಲ್ಲೇಶ್, ಸಲ್ಮಾನ್, ಜೋಸೆಫ್ ರಾಮು ಇತರರು ಗೋಷ್ಠಿಯಲ್ಲಿದ್ದರು.