ಸಚಿವರು, ಜಿಲ್ಲಾಡಳಿತ ರೈತರ ಬೇಡಿಕೆ ಕೂಡಲೇ ಈಡೇರಿಸಲಿ

| Published : Aug 27 2025, 01:01 AM IST

ಸಚಿವರು, ಜಿಲ್ಲಾಡಳಿತ ರೈತರ ಬೇಡಿಕೆ ಕೂಡಲೇ ಈಡೇರಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಭೂಮಿ ಪರಿಹಾರ ನೀಡದೇ ಒಕ್ಕಲೆಬ್ಬಿಸಿರುವುದು ಖಂಡನೀಯ

ಗದಗ: ಸುಮಾರು ದಿನಗಳಿಂದ ಉತ್ತರ ಕರ್ನಾಟಕ ಮಹಾಸಭಾದಿಂದ ಬಗರ್ ಹುಕುಂ ಸಾಗುವಳಿದಾರರ ಹಾಗೂ ನಾಗಾವಿ ಆರ್.ಡಿ.ಪಿ.ಆರ್ ಮಹಾವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರು ಸರ್ಕಾರದ ವಿರುದ್ಧ ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದು, ಅಹೋರಾತ್ರಿ ಹೋರಾಟ ಪ್ರಾರಂಭವಾಗಿ 8 ದಿನಗಳಾದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ನಿರತರನ್ನು ಭೇಟಿಯಾಗಿ ನ್ಯಾಯಯುತ ಬೇಡಿಕೆ ಈಡೇರಿಸದಿರುವುದು ಖೇದಕರ ಸಂಗತಿ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ನಗರದ ಜಿಲ್ಲಾಡಳಿತದ ಎದುರು ಉತ್ತರ ಕರ್ನಾಟಕ ಮಹಾಸಭಾದಿಂದ ರೈತರ ವಿವಿಧ ಬೇಡಿಕೆ ಈಡೇರಿಕೆಗಾಗಿ ಜಿಲ್ಲೆಯ ರೈತರು ಹಮ್ಮಿಕೊಂಡ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ರೈತರು ತಲೆತಲಾಂತರಗಳಿಂದ ಅರಣ್ಯ ಜಮೀನು ಸಾಗುವಳಿ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ.ಆದರೆ ಸರ್ಕಾರ ಹಕ್ಕುಪತ್ರ ನೀಡದೇ ರೈತರಿಗೆ ಕಿರುಕುಳ ನೀಡುತ್ತಿದೆ. ಜತೆಗೆ ನಾಗಾವಿ ಗ್ರಾಮದಲ್ಲಿನ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ರೈತರು ಪೂರ್ವಜರ ಕಾಲದಿಂದ ಸಾಗುವಳಿ ಮಾಡುತ್ತಿದ್ದ ನೂರಾರು ಎಕರೆ ಕೃಷಿ ಭೂಮಿ ಪರಿಹಾರ ನೀಡದೇ ಒಕ್ಕಲೆಬ್ಬಿಸಿರುವುದು ಖಂಡನೀಯ.

ರೈತರು ಯಾರೂ ಎದೆಗುಂದಬೇಡಿ, ನೀಮ್ಮ ಹೋರಾಟಕ್ಕೆ ಜಯ ಸಿಕ್ಕೆ ಸಿಗುತ್ತದೆಂದು ಧರಣಿ ನಿರತರನ್ನು ಧೈರ್ಯ ತುಂಬಿದ ಅವರು, ಮಳೆ,ಚಳಿ ಎನ್ನದೇ ರೈತರು ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ರಾತ್ರಿಯಿಡಿ ಹೋರಾಟ ಮಾಡುತ್ತಿದ್ದಾರೆ.ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಕೂಡಲೇ ಈ ರೈತರ ಬೇಡಿಕೆ ಇಡೇರಿಸಬೇಕೆಂದು ಆಗ್ರಹಿಸಿದರು.

ಖುದ್ದಾಗಿ ನಾನು ಕೂಡಾ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಆ ಸಂದರ್ಭದಲ್ಲಿ ರೈತ ಹೋರಾಟಗಾರರು ನನ್ನೊಂದಿಗೆ ಬರಲಿ ಎಂದು ಭರವಸೆ ನೀಡಿದರು.

ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಉಸ್ತುವಾರಿ ಸಚಿವರು ಈ ಹಿಂದೆ 2023ರಲ್ಲಿ ಜಿಲ್ಲಾಡಳಿತ ಕಚೇರಿ ಎದುರು ಅಹೋರಾತ್ರಿ ಹೋರಾಟ ನಡೆದಾಗ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಅವರು ಮಾತು ಕೊಟ್ಟಂತೆ ಈ ಬಡ ರೈತರ ನ್ಯಾಯಯುತ ಬೇಡಿಕೆ ತಕ್ಷಣವೇ ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಬಿಜೆಪಿ ಮುಖಂಡರಾದ ಕರಿಗೌಡ್ರ, ಭದ್ರೇಶ ಕುಸಲಾಪುರ, ಸಂಜೀವ ಸ್ವಾಮಿಗಳು, ಅಶೋಕ ಕರೂರು, ಶೇಷಗಿರಿ, ಸುರೇಶ ಮಹಾರಾಜ, ಧನ್ನುರಾಮ ತಂಬೂರಿ, ಎನ್.ಟಿ. ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ ಸೇರಿದಂತೆ ಜಿಲ್ಲೆಯ ಹಲವು ರೈತರು, ಮಹಿಳೆಯರು ಇದ್ದರು.