ಜಿಪಂ ಸಿಇಒ ಕೆ.ಆರ್. ನಂದಿನಿ ಮಾತನಾಡಿ, ಸ್ತಬ್ಧಚಿತ್ರವನ್ನು ದಸರಾ ಜಂಬೂಸವಾರಿಯ ಬಳಿಕ ಮಂಡ್ಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ನಿತ್ಯ ಸಾವಿರಾರು ಜನರು ವಿಶೇಷವಾಗಿ ಮಹಿಳೆಯರು, ಮಕ್ಕಳು ವೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ದಸರಾ ಜಂಬೂಸವಾರಿಯಲ್ಲಿ ಜನಮೆಚ್ಚುಗೆ ಜೊತೆಗೆ ಪ್ರಥಮ ಬಹುಮಾನ ಪಡೆದ ಮಂಡ್ಯ ಜಿಲ್ಲಾ ಪಂಚಾಯತ್ ನ ಅಸ್ಮಿತೆ - ಸ್ತ್ರೀ ಶಕ್ತಿಯ ಅನಾವರಣ ಸ್ತಬ್ಧಚಿತ್ರ (ಟ್ಯಾಬ್ಲೋ)ವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ.ಖಂಡ್ರೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಬುಧವಾರ ರಾತ್ರಿ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ತಬ್ಧಚಿತ್ರವನ್ನು ವೀಕ್ಷಿಸಿ, ಮಾತೃತ್ವದ ಮೌಲ್ಯ ಸಾರುವ ಹಾಲುಣಿಸುತ್ತಿರುವ ತಾಯಿಯ ಬೃಹತ್ ಪುತ್ಥಳಿ ಸ್ತಬ್ಧಚಿತ್ರ, ಶಿಶುಸಂಜೀವಿನಿ (ಎದೆ ಹಾಲಿನ ಸಂಗ್ರಹಣಾ ಕೇಂದ್ರ) ಪರಿಕಲ್ಪನೆಯನ್ನು ಪ್ರಚುರಪಡಿಸುವ ಜೊತೆಗೆ ದುಡಿಯುವ ತಾಯಂದಿರ ಮಕ್ಕಳ ಪೋಷಣೆಗಾಗಿ ನಿರ್ಮಿಸಲಾದ ವಾತ್ಸಲ್ಯ ಕೇಂದ್ರದ ಮಾಹಿತಿ ಒಳಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಆಧುನಿಕ ಯುಗದಲ್ಲಿ ಮಹಿಳೆಯರಿಗೂ ಅಪರಿಮಿತ ಅವಕಾಶಗಳು ಲಭಿಸುತ್ತಿವೆ. ಮೌಢ್ಯ, ಸಾಮಾಜಿಕ ಕಟ್ಟುಪಾಡುಗಳನ್ನು ಮೆಟ್ಟಿ ಮೇಲೇರುವ ಛಲವಿದ್ದರೆ ಮಹಿಳೆ ಎಷ್ಟು ಎತ್ತರಕ್ಕಾದರೂ ಏರಬಹುದು ಎಂಬ ಸಂದೇಶ, ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಡ್ರೋನ್ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಅಳವಡಿಸಿಕೊಂಡಿರುವುದನ್ನೂ ಈ ಸ್ತಬ್ಧಚಿತ್ರದಲ್ಲಿ ಬಿಂಬಿಸಲಾಗಿದೆ. ಅಕ್ಕ ಕೆಫೆ, ಹೈನುಗಾರಿಕೆಯೊಂದಿಗೆ ಮಹಿಳೆಯರು ಸ್ವಾವಲಂಬಿಗಳಾಗಲು ಪ್ರೇರಣೆ ನೀಡುವಂತಿದೆ ಎಂದರು.ಮಿಮ್ಸ್ ನಲ್ಲಿ ಕಳೆದ ವರ್ಷ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನದಡಿ ಶಿಶು ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಿರುವುದಕ್ಕೆ ಜಿಪಂ ಸಿಇಒ ಕೆ.ಆರ್.ನಂದಿನಿ ಅವರನ್ನು ಅಭಿನಂದಿಸಿದರು.
ಜಿಪಂ ಸಿಇಒ ಕೆ.ಆರ್. ನಂದಿನಿ ಮಾತನಾಡಿ, ಸ್ತಬ್ಧಚಿತ್ರವನ್ನು ದಸರಾ ಜಂಬೂಸವಾರಿಯ ಬಳಿಕ ಮಂಡ್ಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ನಿತ್ಯ ಸಾವಿರಾರು ಜನರು ವಿಶೇಷವಾಗಿ ಮಹಿಳೆಯರು, ಮಕ್ಕಳು ವೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.ಕೃಷಿ, ಹೈನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ಕುಟುಂಬದ ಲಾಲನೆ- ಪಾಲನೆ ಹಾಗೂ ಉದ್ಯಮ ಸ್ಥಾಪನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಹತ್ತರ ಸಾಧನೆಗಳನ್ನು ಮಾಡಬಲ್ಲರು ಎಂಬುದನ್ನು ಸ್ಥಬ್ಧಚಿತ್ರದ ಮೂಲಕ ಪ್ರದರ್ಶಿಸಲಾಗಿದೆ.
ಈಗಾಗಲೇ ಈ ಕ್ಷೇತ್ರಗಳಲ್ಲಿ ಅನೇಕ ಮಹಿಳೆಯರು ತಮ್ಮ ಸಾಧನೆಗಳ ಮೂಲಕ ಯಶಸ್ಸು ಗಳಿಸಿ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂಬ ಸಂದೇಶವನ್ನು ಸ್ಥಬ್ಧಚಿತ್ರವು ಸಾರುತ್ತದೆ ಎಂದು ಹೇಳಿದರು.