ಎಕ್ಸಿಕ್ಯುಟೀವ್‌ ಎಂಜಿನಿಯರ್‌ ಕೂಡ ಕಚೇರಿಯಲ್ಲಿಲ್ಲ. ಕಚೇರಿ ಬಿಟ್ಟು ಎಲ್ಲಿ ಹೋಗಿದ್ದಾರೆ ಎಲ್ಲಾ. ಮಧ್ಯಾಹ್ನ 3.30ರಿಂದ ಸಂಜೆ 5.30ರವೆಗೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಕಚೇರಿಯಲ್ಲಿದ್ದು ಜನರ ಸಮಸ್ಯೆಗಳನ್ನು ಆಲಿಸಬೇಕು. ಇಷ್ಟ ಬಂದ ಹಾಗೆ ಬರುವುದಕ್ಕೆ ಇದೇನು ಮಾವನ ಮನೇನಾ...?

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ನಗರಸಭಾ ಕಚೇರಿಗೆ ಗುರುವಾರ ಪೌರಾಡಳಿತ ಸಚಿವ ಎಚ್‌.ಸಿ.ಬಾಲಕೃಷ್ಣ ದಿಢೀರ್‌ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿದರು.

ಕಚೇರಿಗೆ ದಿಢೀರ್‌ ಭೇಟಿ ನೀಡಿದ ಸಮಯದಲ್ಲಿ ಆಯುಕ್ತ ರಾಧಿಕಾ, ಎಕ್ಸಿಕ್ಯುಟೀವ್‌ ಎಂಜಿನಿಯರ್‌ ಕಚೇರಿಯಲ್ಲಿ ಇರಲಿಲ್ಲ. ಆಯುಕ್ತರು ಎಲ್ಲಿ ಹೋಗಿದ್ದಾರೆ. ಸಂಜೆ 5.30ರವರೆಗೆ ಕಚೇರಿಯಲ್ಲಿರಬೇಕು ಎಂದು ನಾನು ಹೇಳಿರಲಿಲ್ಲವೇ. ಆದರೂ ಸಮಯಕ್ಕೂ ಮುಂಚೆ ಹೇಗೆ ಹೋದರು. ಮೂವ್‌ಮೆಂಟ್‌ ರಿಜಿಸ್ಟರ್‌ನಲ್ಲೂ ಬರೆದಿಲ್ಲ. ಅವರಿಗೆ ನೋಟಿಸ್‌ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ಸೂಚಿಸಿದರು.

ಎಕ್ಸಿಕ್ಯುಟೀವ್‌ ಎಂಜಿನಿಯರ್‌ ಕೂಡ ಕಚೇರಿಯಲ್ಲಿಲ್ಲ. ಕಚೇರಿ ಬಿಟ್ಟು ಎಲ್ಲಿ ಹೋಗಿದ್ದಾರೆ ಎಲ್ಲಾ. ಮಧ್ಯಾಹ್ನ 3.30ರಿಂದ ಸಂಜೆ 5.30ರವೆಗೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಕಚೇರಿಯಲ್ಲಿದ್ದು ಜನರ ಸಮಸ್ಯೆಗಳನ್ನು ಆಲಿಸಬೇಕು. ಇಷ್ಟ ಬಂದ ಹಾಗೆ ಬರುವುದಕ್ಕೆ ಇದೇನು ಮಾವನ ಮನೇನಾ. ಎಲ್ಲಿಗಾದರೂ ಹೋಗಬೇಕಾದರೆ ಮೂವ್‌ಮೆಂಟ್‌ ರಿಜಿಸ್ಟರ್‌ನಲ್ಲಿ ದಾಖಲಿಸಬೇಕು. ಇಲ್ಲಿ ಏನನ್ನೂ ಬರೆದಿಲ್ಲ. ಬೇಕಾಬಿಟ್ಟಿ ಕೆಲಸ ಮಾಡಲು ಬಂದಿದ್ದೀರಾ ಎಂದು ತರಾಟೆ ತೆಗೆದುಕೊಂಡರು.

ತೆರಿಗೆ ಸಂಗ್ರಹ ಎಷ್ಟಿದೆ, ನೀರಿನ ಬಿಲ್‌ ಎಷ್ಟು ಸಂಗ್ರಹಿಸಿದ್ದೀರಿ, ಪೌರ ಕಾರ್ಮಿಕರು ಎಷ್ಟಿದ್ದಾರೆ. ಲೋಡರ್ಸ್‌ ಎಷ್ಟು ಮಂದಿ ಇದ್ದಾರೆ ಎಂದೆಲ್ಲಾ ಪ್ರಶ್ನಿಸಿದ ಅವರು, ಒಳಚರಂಡಿ ವಿಷಯವನ್ನು ಪ್ರಸ್ತಾಪಿಸಿ ಯಾರಿಗೆ ಟೆಂಡರ್‌ ನೀಡಲಾಗಿದೆ, ಪ್ರಕ್ರಿಯೆ ಹೇಗೆ ನಡೆಸಿದ್ದೀರಿ ಎಂದು ಪ್ರಶ್ನಿಸಿದರು.

ಆಗ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯ ಎಕ್ಸಿಕ್ಯುಟೀವ್‌ ಎಂಜಿನಿಯರ್‌ ನದಾಫ್‌, ಹಿಂದೆ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಅಶೋಕ್‌ ಅವರು ಟೆಂಡರ್‌ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸಿಲ್ಲ. ಸಾಕಷ್ಟು ಲೋಪಗಳಿರುವುದಾಗಿ ಕಂಡುಬಂದಿರುವುದಾಗಿ ವಿಷಯ ತಿಳಿಸಿದರು. ಪೌರ ಕಾರ್ಮಿಕರಿಗೆ ತಿಂಡಿ ಸರಬರಾಜು ಟೆಂಡರ್‌ ಯಾರಿಗೆ ನೀಡಿದ್ದೀರಿ ಎಂದು ಪ್ರಶ್ನಿಸಿದಾಗಲೂ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರಲಿಲ್ಲ. ಇದರಿಂದ ಕೋಪಗೊಂಡ ಸಚಿವರು, ಏನ್‌ ಕೆಲಸ ಮಾಡೋಕೆ ಬರ್ತೀರಿ. ನಿಮಗೆ ಕೆಲಸದಲ್ಲಿ ಆಸಕ್ತಿ ಇಲ್ಲ, ಬದ್ಧತೆ ಇಲ್ಲ. ಇದ್ದಿದ್ದರೆ ಈ ವಿಷಯಗಳನ್ನೆಲ್ಲಾ ತಿಳಿದುಕೊಳ್ಳುತ್ತಿದ್ದಿರಿ. ಆಸಕ್ತಿ ಇಲ್ಲದ ಮೇಲೆ ಕೆಲಸಕ್ಕೆ ಯಾಕೆ ಬರುತ್ತೀರಿ. ನಿಮ್ಮನ್ನು ಸಸ್ಪೆಂಡ್‌ ಮಾಡಲಾ ಎಂದು ಎಚ್ಚರಿಕೆ ನೀಡಿದರು.

ಆಯುಕ್ತರಿಲ್ಲ, ಎಕ್ಸಿಕ್ಯುಟೀವ್‌ ಎಂಜಿನಿಯರ್‌ ಇಲ್ಲ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ದಿನಾ ಇದೇ ರೀತಿ ಕೆಲಸ ಮಾಡುತ್ತಿದ್ದೀರಾ. ಇನ್ನು ಹೇಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೀರಿ. ನೋಡ್ರೀ. ಇದನ್ನೆಲ್ಲಾ ನಾನು ಸಹಿಸೋಲ್ಲ. ಸರಿಯಾಗಿ ಕೆಲಸ ಮಾಡುವ ಹಾಗಿದ್ದರೆ ಮಾಡಿ. ಇಲ್ಲದಿದ್ದರೆ ನಿಮ್ಮಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಶಾಸಕ ಕೆ.ಎಂ.ಉದಯ್‌ ಹಾಜರಿದ್ದರು.