ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ವಾರದಲ್ಲಿ ಇಬ್ಬರು ಅಧಿಕಾರಿಗಳ ಅಮಾನತಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ನಿರ್ದೇಶನ ನೀಡಿ ಈಗ ಸುದ್ದಿಯಲ್ಲಿದ್ದಾರೆ.ಜಿಲ್ಲೆಯಲ್ಲಿ ಅಧಿಕಾರಿಗಳ ಲಂಚಗುಳಿತನ ಹಾಗೂ ಅಕ್ರಮ ಬಗ್ಗೆ ಸಾರ್ವಜನಿಕರಿಂದ ಖುದ್ದು ಸಚಿವರಿಗೆ ವ್ಯಾಪಕ ದೂರು ಬಂದ ಹಿನ್ನೆಲೆ ಮಂಗಳವಾರ ಸಚಿವರೇ ದೂರುಗಳ ಸತ್ಯಾಂಶವನ್ನು ಅರಿಯುವ ಪ್ರಯತ್ನ ಮಾಡಿದಾಗ, ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆ ಇಬ್ಬರು ಅಧಿಕಾರಿಗಳ ಅಮಾನತಿಗೆ ಸೂಚನೆ ನೀಡಿದ್ದಾರೆ. ಕೇವಲ ಒಂದೇ ವಾರದ ಅಂತರದಲ್ಲಿ ಸಚಿವರ ಸೂಚನೆ ಮೇರೆಗೆ ಇಬ್ಬರು ಅಧಿಕಾರಿಗಳ ತಲೆದಂಡ ಆಗಿರುವುದು ಸಾರ್ವಜನಿಕ ವಲಯದಲ್ಲಿ ಸಚಿವರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ಭ್ರಷ್ಟ ಅಧಿಕಾರಿಗಳಿಗೆ ಭಯವೂ ಉಂಟಾಗಿದೆ.
ಅನರ್ಹರಿಗೆ ಮಣೆ: ಸಾಮಾಜಿಕ ಭದ್ರತಾ ಯೋಜನೆಯಡಿ ಅನರ್ಹರಿಗೆ ಮಂಜೂರಾತಿ ನೀಡಿದ ಆರೋಪದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದವು. ಈ ಹಿನ್ನೆಲೆ ಸಚಿವ ಎಚ್ .ಕೆ. ಪಾಟೀಲರು, ಅನಿರೀಕ್ಷಿತವಾಗಿ ಗದಗ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅನರ್ಹರಿಗೆ ಸೌಲಭ್ಯ ಸಿಕ್ಕಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಉಪತಹಸೀಲ್ದಾರ್ ಡಿ.ಟಿ. ವಾಲ್ಮೀಕಿ ಅಮಾನತಿಗೆ ಸಚಿವರು ಸೂಚನೆ ನೀಡಿದ್ದು, ಅದರಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಕಳ್ಳಾಟ ಬಯಲು: ಇನ್ನು ವಾರದ ಹಿಂದಷ್ಟೆ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ವ್ಯವಸ್ಥಾಪಕ ಮಹಾದೇವ ಮಳಲಿ ಸಹ ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದಾರೆ. ಗಂಗಾಕಲ್ಯಾಣ ಯೋಜನೆಯಡಿ ಫಲಾನುಭವಿಗೆ ಲಂಚ ಕೇಳಿದ ಬಗ್ಗೆ ಕನ್ನಡಪ್ರಭ ಸೋದರ ಸಂಸ್ಥೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕುಟುಕು ಕಾರ್ಯಾಚರಣೆ ನಡೆಸಿತ್ತು. ಕಾರ್ಯಾಚರಣೆಯ ವಿಡಿಯೋ ಗಮನಿಸಿದ ಸಚಿವ ಎಚ್.ಕೆ. ಪಾಟೀಲ ಅವರು ಸತ್ಯಾಸತ್ಯತೆ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ತನಿಖೆಯಲ್ಲಿ ಅಧಿಕಾರಿ ತಪ್ಪು ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬಿಸಿ ಮುಟ್ಟಿಸುವ ಕೆಲಸ: ನಿತ್ಯವೂ ಅವಳಿ ನಗರದ ಸಾರ್ವಜನಿಕರ ಜೀವ ಹಿಂಡುತ್ತಿರುವ ಗದಗ- ಬೆಟಗೇರಿ ನಗರಸಭೆಗೆ ಸಚಿವ ಎಚ್.ಕೆ. ಪಾಟೀಲ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿ, ಭ್ರಷ್ಟಾಚಾರದ ಕೂಪವಾಗಿರುವ ನಗರಸಭೆಗೆ ಮುಕ್ತಿ ನೀಡಬೇಕಿದೆ. ಎಲ್ಲದಕ್ಕೂ ಏಜೆಂಟರನ್ನು ಇಟ್ಟುಕೊಂಡಿರುವ ನಗರಸಭೆಯ ಆಡಳಿತಕ್ಕೆ ಬಿಸಿ ಮುಟ್ಟಿಸುವ ಕೆಲಸ ಸಚಿವರಿಂದ ಆಗಬೇಕಿದೆ. ಫಾರಂ 3 ಟೆಂಡರ್ ಪ್ರಕ್ರಿಯೆ, ಬೀದಿದೀಪ ನಿರ್ವಹಣೆ, ಕುಡಿಯುವ ನೀರು ಪೂರೈಕೆಯಲ್ಲಿಯೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದು ಪಲ್ಲೇದ ತಿಳಿಸಿದರು.ಜಿಲ್ಲಾಧಿಕಾರಿಗಳಿಗೆ ಸೂಚನೆ: ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಮಂಜೂರಾತಿ ಸೇರಿದಂತೆ ಜಿಲ್ಲೆಯಲ್ಲಿ 17 ಸಾವಿರಕ್ಕೂ ಹೆಚ್ಚು ಅನರ್ಹರಿಗೆ ನೀಡಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಪರಿಶೀನೆಗೆ ನಡೆಸಿ, ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.