ಸಾರಾಂಶ
ಮಂಡ್ಯ : ರೈತರ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರದ ಮೇಲೆ ಸಚಿವ ಎಚ್.ಡಿ.ಕುಮಾರಸ್ವಾಮಿ ಗಮನ ಸೆಳೆಯಬೇಕು ಎಂದು ರಾಜ್ಯ ರೈತ ಸಂಘ(ಮೂಲ ಸಂಘಟನೆ)ದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಆರ್ಥಿಕ ಸುಧಾರಣೆಯು ಕೃಷಿ ಮೇಲೆ ಅವಲಂಬಿತವಾಗಿದೆ. ಇತ್ತೀಚೆಗೆ ಕೃಷಿ ತ್ಯಜಿಸಿ ಜೀವನೋಪಾಯಕ್ಕಾಗಿ ಬೆಂಗಳೂರಿನೆಡೆಗೆ ಮುಖ ಮಾಡುವ ರೈತರ ಸಂಖ್ಯೆಯೂ ಹೆಚ್ಚಾಗಿದೆ. ಇದನ್ನು ತಪ್ಪಿಸಲು ಕೃಷಿ ಕಾಳಜಿಯುಳ್ಳವರಾಗಿ, ಮಂಡ್ಯ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ಮನವೊಲಿಸಬೇಕು ಎಂದರು.
ವ್ಯವಸಾಯಕ್ಕೆ ಹೆಚ್ಚು ಖರ್ಚಾಗುತ್ತಿದೆ. ಲಾಭದ ಸಮೀಕರಣದಲ್ಲಿ ರೈತರ ಬೆಳೆಯ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಸ್ವಾಮಿನಾಥನ್ ವರದಿ ಆಧರಿಸಿ, ಬೆಂಬಲ ಬೆಲೆ ನಿಗದಿ, ಕೃಷಿ ಉಪಕರಣ, ಯಂತ್ರೋಪಕರಣ, ರಸಗೊಬ್ಬರ, ಕೀಟನಾಶಕಗಳ ಮೇಲಿನ ಜಿಎಸ್‌ಟಿ ರದ್ದುಗೊಳಿಸಿ ಹಾಗೂ ರೈತರಿಗೆ ನೀಡುವ ರಿಯಾಯಿತಿ, ಸಬ್ಸಿಡಿ ಪ್ರಕಟಣೆಗೂ ಮೊದಲೇ ಉಪಕರಣಗಳ ಬೆಲೆ ಖಾತರಿಯಾಗಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ವಿತರಣಾ ನೀತಿಯಲ್ಲಿ ಬದಲಾವಣೆ ತಂದು, ವ್ಯವಸಾಯ ಭೂಮಿಯ ಮಾರುಕಟ್ಟೆ ದರ ಆಧರಿಸಿ ಎಕರೆ ಒಂದಕ್ಕೆ ಕನಿಷ್ಠ 5 ಲಕ್ಷ ದಿಂದ 10 ಲಕ್ಷಗಳವರೆಗೆ ಬಡ್ಡಿ ರಹಿತ ಸಾಲ ಒದಗಿಸುವಂತಾಗಬೇಕು. ಸಿಬಿಲ್ ಹೊರತುಪಡಿಸಿ, ಸುಲಭ ಸಾಲ ನೀತಿ ಜಾರಿ, ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ, ರಾಷ್ಟ್ರವ್ಯಾಪಿ ಒಂದೇ ಮಾನದಂಡದಲ್ಲಿ ಕಬ್ಬಿನ ಎಫ್‌ಆರ್‌ಪಿ ದರ ನಿಗದಿ, ಪಿಎಂ ಕಿಸಾನ್ ಯೋಜನೆಯಡಿ ನೀಡಲಾಗುವ 6000 ರು. ಗಳನ್ನು 15 ಸಾವಿರ ರು.ಗಳಿಗೆ ಹೆಚ್ಚಿಸುವುದು, ಬೆಳೆ ಪರಿಹಾರವನ್ನು ನೀಡುವ ವೇಳೆ ಸಂಪೂರ್ಣ ನಷ್ಟ ಪರಿಹಾರ ವಿತರಿಸುವಂತೆ ಒತ್ತಡ ಹಾಕಬೇಕೆಂದು ಆಗ್ರಹಿಸಿದರು.
ಈ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟು, ಎಲ್ಲ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ, ಉಪಾಧ್ಯಕ್ಷ ಕೆ.ನಾಗೇಂದ್ರಸ್ವಾಮಿ, ಮಾಧ್ಯಮ ಕಾರ್ಯದರ್ಶಿ ಸೊ.ಸಿ.ಪ್ರಕಾಶ್, ತೇಜಸ್, ಸಿದ್ದೇಗೌಡ ಇದ್ದರು.