ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ತಲೆನೋವು: ಆಸ್ಪತ್ರೆಗೆ ಬರಬೇಡಿ: ಡಾ.ರವಿ ಪಾಟೀಲ ಮನವಿ

| Published : Jan 18 2025, 12:50 AM IST / Updated: Jan 18 2025, 11:26 AM IST

ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ತಲೆನೋವು: ಆಸ್ಪತ್ರೆಗೆ ಬರಬೇಡಿ: ಡಾ.ರವಿ ಪಾಟೀಲ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

  ಲಕ್ಷ್ಮೀ ಹೆಬ್ಬಾಳಕರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ನಾಲ್ಕು ದಿನಗಳು ಕಳೆದಿವೆ. ಆದರೆ, ಅವರಿಗೆ ವಿಶ್ರಾಂತಿ ಇಲ್ಲದೇ ಇರುವುದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಯಾರು ಕೂಡ ಅವರ ಆರೋಗ್ಯ ವಿಚಾರಣೆಗೆ ಆಸ್ಪತ್ರೆಗೆ ಬಾರದಂತೆ ಡಾ.ರವಿ ಪಾಟೀಲ ಮನವಿ ಮಾಡಿದ್ದಾರೆ.

 ಬೆಳಗಾವಿ : ಅಪಘಾತದಲ್ಲಿ ಎರಡು ಬೆನ್ನುಮೂಳೆ ಮುರಿತದಿಂದ ಬಳಲುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ನಾಲ್ಕು ದಿನಗಳು ಕಳೆದಿವೆ. ಆದರೆ, ಅವರಿಗೆ ವಿಶ್ರಾಂತಿ ಇಲ್ಲದೇ ಇರುವುದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅವರಿಗೆ ವಿಶ್ರಾಂತಿ ಮುಖ್ಯವಾಗಿದ್ದು, ಯಾರು ಕೂಡ ಅವರ ಆರೋಗ್ಯ ವಿಚಾರಣೆಗೆ ಆಸ್ಪತ್ರೆಗೆ ಬಾರದಂತೆ ಡಾ.ರವಿ ಪಾಟೀಲ ಮನವಿ ಮಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳಕರ ಅವರಿಗೆ ವಿಶ್ರಾಂತಿ ಅತೀ ಮುಖ್ಯವಾಗಿದೆ. ನಿತ್ಯ ರಾಜಕಾರಣಿಗಳು, ಅವರ ಅಭಿಮಾನಿಗಳು ಎಡೆಬಿಡದೇ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ಲಕ್ಷ್ಮೀ ಅವರಿಗೆ ವಿಶ್ರಾಂತಿ ಭಂಗ ಉಂಟಾಗುತ್ತಿದೆ. ಹಾಗಾಗಿ, ಅವರು ತಲೆ ನೋವಿನಿಂದ ಬಳುತ್ತಿದ್ದಾರೆ. ಅಲ್ಲದೇ, ಅ‍ವರಿಗೆ ಸ್ಮೃತಿ ತಪ್ಪುವ ಸೆನ್ಸೇಷನ್‌ ಕಾಡುತ್ತಿದೆ ಎಂದು ತಿಳಿಸಿದರು.

ನ್ಯೂರೋ ಸರ್ಜನ್‌ ಒಬ್ಬರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಪರೀಕ್ಷಿಸಿ, ವಿಶ್ರಾಂತಿ ಇಲ್ಲದೇ ಇರುವುದರಿಂದ ಹಾಗಾಗುತ್ತಿದೆ. ಅವರಿಗೆ 48 ಗಂಟೆಗಳ ಕಾಲ ವಿಶ್ರಾಂತಿ ಬೇಕಿದೆ. ಅವರೊಂದಿಗೆ ಯಾರು ಕೂಡ ಮಾತನಾಡಲೇಬಾರದು ಎಂದು ಸಲಹೆ ನೀಡಿದ್ದಾರೆ. ಹಾಗಾಗಿ, ಅವರನ್ನು ನೋಡಲು, ಅವರ ಆರೋಗ್ಯ ವಿಚಾರಿಸಲು ಯಾರು ಕೂಡ ಆಸ್ಪತ್ರೆಗೆ ಬರಬಾರದು ಎಂದು ಮನವಿ ಮಾಡಿದರು.

ಹೆಬ್ಬಾಳಕರ ಆರೋಗ್ಯ ವಿಚಾರಿಸಿದ ಸಚಿವರು, ಶಾಸಕರು:

ಕಾರು ಅಪಘಾತದಲ್ಲಿ ಬೆಳಗಾವಿ ಆಸ್ಪತ್ರೆಗೆ ದಾಖಲಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯವನ್ನು ಸಚಿವರು, ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ರಾಜು ಸೇಠ್, ಮಹೇಂದ್ರ ತಮ್ಮಣ್ಣವರ್, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಬಳಿ ಅವರ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದರು. ಇದಕ್ಕೂ ಮೊದಲು ಶಾಸಕ ರಾಜು ಕಾಗೆ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕತ್ತು ಹಾಗೂ ಬೆನ್ನುಹುರಿಗೆ ಪೆಟ್ಟಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಸಚಿವರನ್ನು ನೋಡಲೆಂದು ಹೆಚ್ಚಿನ ಜನರು, ರಾಜಕಾರಣಗಳು ಬರುತ್ತಿರುವುದರಿಂದ ಅವರಿಗೆ ತೊಂದರೆಯಾಗುತ್ತಿದೆ. ಚಿಕಿತ್ಸೆಗೂ ಸಮಸ್ಯೆಯಾಗುತ್ತಿದೆ. ಹಾಗಾಗಿ ಆಸ್ಪತ್ರೆಗೆ 48 ಗಂಟೆ ಯಾರೂ ಬರಬೇಡಿ ಎಂದು ವೈದ್ಯ ಡಾ.ರವಿ ಪಾಟೀಲ್ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು, ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಸಚಿವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರಿಂದ ಸಚಿವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದರು.

ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಗೆ ಭೇಟಿ ನೀಡಿ, ಅವರ ಸಹೋದರನಿಂದ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ವಿಚಾರಿಸಿದರು.