ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭೇಟಿ

| Published : Aug 04 2024, 01:23 AM IST

ಸಾರಾಂಶ

ಹಾನಿ ಪ್ರದೇಶದ ಗ್ರಾಮಸ್ಥರ ಜತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದ್ದು ವಾಸ್ತವ ಸ್ಥಿತಿ ಅರಿಯಲಿದೆ

ಗದಗ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನವಿಲುತೀರ್ಥ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿರುವ ಹಿನ್ನೆಯಲ್ಲಿ ಜಿಲ್ಲೆಯ ನರಗುಂದ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದ್ದು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

ಪ್ರಸಕ್ತ ವರ್ಷದ ಮುಂಗಾರು ಮಳೆ ರಾಜ್ಯಾದ್ಯಂತ ಅಬ್ಬರಿಸಿದ್ದು, ಹಲವು ಗ್ರಾಮಗಳು ಈಗಾಗಲೇ ಮುಳುಗಡೆ ಆಗಿವೆ. ಜತೆಗೆ ರೈತರ ಜಮೀನುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ನುಗಿದ್ದರಿಂದ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆಗಳು ನಾಶವಾಗಿ ರೈತರು ತತ್ತರಿಸುತ್ತಿದ್ದಾರೆ. ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಎಚ್.ಕೆ.ಪಾಟೀಲ, ರಾಜ್ಯದಲ್ಲಿ ತೀವ್ರ ಮಳೆಯಿಂದ ಅಲ್ಲಲ್ಲಿ ಸಮಸ್ಯೆ ಆಗಿದೆ. ಖಾನಾಪುರ ಭಾಗದಲ್ಲಿ ಹೆಚ್ಚಿನ ಮಳೆ ಆಗಿದ್ದರಿಂದ ಮಲಪ್ರಭ ನದಿಗೆ ಹೆಚ್ಚು ನೀರು ಹರಿದು ಬಂದಿದೆ. ಡ್ಯಾಂ ಭರ್ತಿ ಆಗಲು ಕೇವಲ 2 ರಿಂದ 3 ಅಡಿ ಮಾತ್ರ ಬಾಕಿ ಇದೆ. ಸದ್ಯ 8 ರಿಂದ10 ಮನೆಗಳಿಗೆ ನೀರು ನುಗ್ಗಿದೆ. ಸುದೈವ ಇಲ್ಲಿಯವರೆಗೆ ಯಾವುದೇ ತೀವ್ರ ಹಾನಿಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಹಾನಿ ಪ್ರದೇಶದ ಗ್ರಾಮಸ್ಥರ ಜತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದ್ದು ವಾಸ್ತವ ಸ್ಥಿತಿ ಅರಿಯಲಿದೆ ಎಂದರು.

ಮಲಪ್ರಭಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದೆ. ಇದರಿಂದ ಪದೇ-ಪದೇ ಈ ಭಾಗದ ಜನರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಾರೆ. ರಾಜ್ಯ ಸರ್ಕಾರ ಮಲಪ್ರಭಾ ನದಿಯಲ್ಲಿ ಹೂಳು ಎತ್ತುವ ಪ್ರಯತ್ನ ಹಾಗೂ ಅಗಲೀಕರಣ ಮಾಡಲು ಕ್ರಮ ಕೈಗೊಳ್ಳಲು ಹೆಜ್ಜೆ ಇಟ್ಟಿದೆ. ನದಿ ತೀರದಲ್ಲಿ ಅವಘಡ ನಡೆಯುವ ಮುನ್ನ ಮುಂಜಾಗ್ರತಾ ಕ್ರಮ ನಮ್ಮ ಸರ್ಕಾರ ಕೈಗೊಳ್ಳುತ್ತದೆ ಎಂದರು.

ಜಿಲ್ಲೆಯ ನರಗುಂದ ತಾಲೂಕಿನ ಕೋಣ್ಣೂರ ಗ್ರಾಮದ ಜಮೀನುಗಳಿಗೆ ಮಲಪ್ರಭಾ ನದಿ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಸುಮಾರು 4 - 5 ವರ್ಷಗಳಿಂದ ಬೆಳೆಸಿದ ಪೇರಲ ಹಣ್ಣಿನ ಗಿಡಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಜತೆಗೆ,ತೆಂಗು, ಗೋವಿನ ಜೋಳ, ಕಬ್ಬು ಸೇರಿದಂತೆ ಹಲವು ಬೆಳೆ ಮಲಪ್ರಭೆ ತನ್ನ ಒಡಲಿನಲ್ಲಿ ಹಾಕಿಕೊಂಡಿದ್ದಾಳೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಇದೇ ವೇಳೆ ನರಗುಂದ ತಾಲೂಕಿನ ಲಖಮಾಪೂರ, ವಾಸನ ಗ್ರಾಮದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ಲಖಮಾಪೂರ ಗ್ರಾಮದ ಹಲವು ಮನೆಗಳಿಗೆ ಈಗಾಗಲೇ ನೀರು ನುಗ್ಗಿದ್ದು, ಮನೆ ಹಾನಿಯಾದ ಕುಟುಂಬ ಸದಸ್ಯರ ಜತೆ ಚರ್ಚೆ ನಡೆಸಿದರು. ತಾತ್ಕಾಲಿಕವಾಗಿ ಐದು ಕುಟುಂಬಕ್ಕೆ ಅಗತ್ಯ ದಿನಸಿ ಕಿಟ್ ವಿತರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪೋಲಿಸ್ ವರಿಷ್ಠಾಧಿಕಾರಿ ಬಿ. ಎಸ್. ನೇಮಗೌಡ, ಉಪ ವಿಭಾಗಾಧಿಕಾರಿ ಗಂಗಪ್ಪ ಎಂ, ಮಾಜಿ ಸಚಿವ ಬಿ.ಆರ್.ಯಾವಗಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರು.