ಸಾರಾಂಶ
ಹೊಸಪೇಟೆ: ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬದಲಾವಣೆ ಮಾಡಬೇಕು. ಜಿಲ್ಲೆಯಲ್ಲಿ ಪಕ್ಷ ಮೂರು ಹೋಳಾಗಿದೆ. ಅವರನ್ನು ಬದಲಾಯಿಸಿದರೆ ಮಾತ್ರ ಪಕ್ಷ ಸಂಘಟನೆ ಉಳಿಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್ ಶೇಕ್ ದೂರಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆ ಮಾಡಿದ ಕಾರ್ಯಕರ್ತರು ಹಾಗೂ ಮುಖಂಡರನ್ನೇ ಉಸ್ತುವಾರಿ ಸಚಿವರು ಕಡೆಗಣಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಪಕ್ಷದ ಕಚೇರಿಗೆ ಒಮ್ಮೆ ಮಾತ್ರ ಭೇಟಿ ನೀಡಿದ್ದಾರೆ. ಪಕ್ಷ ಸಂಘಟನೆಗೆ ಇದರಿಂದ ಹೊಡೆತ ಬೀಳುತ್ತಿದೆ. ಹಂಪಿ ಉತ್ಸವದಲ್ಲೂ ಕಡೆಗಣಿಸಲಾಗಿದೆ. ಹೋರಾಟ ಮಾಡಿ ಪಕ್ಷ ಕಟ್ಟಿದವರನ್ನೇ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.ಜಿಲ್ಲೆಯಲ್ಲಿ ಭ್ರಷ್ಟಾಚಾರ ಮೀತಿ ಮೀರುತ್ತಿದೆ. ಕೊಪ್ಪಳ, ಗಂಗಾವತಿ, ಬೆಂಗಳೂರಿನವರು ಬಂದು ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಪದೇ ಪದೇ ಸಚಿವರ ಬೆಂಬಲಿಗರು ಏಕೆ ಹೋಗುತ್ತಾರೆ? ಸಿಸಿ ಕ್ಯಾಮೆರಾ ಪರಿಶೀಲಿಸಿದರೆ ಎಲ್ಲವೂ ಗೊತ್ತಾಗಲಿದೆ. ನಾನು ಮಾಹಿತಿ ಹಕ್ಕಿನಲ್ಲಿ ಸಿಸಿ ಕ್ಯಾಮೆರಾ ದೃಶ್ಯಾವಳಿ ಪಡೆಯುವೆ. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರ ಬಳಿಯೂ ಈ ಬಗ್ಗೆ ಸುದೀರ್ಘ ಚರ್ಚಿಸುವೆ. ಸಚಿವರ ಹಿಂದೆ ಭ್ರಷ್ಟರ ಕೂಟ ಇದೆ ಎಂದು ಆರೋಪಿಸಿದರು.
ಹಂಪಿ ಉತ್ಸವದಲ್ಲಿ ಖಾಸಗಿ ವ್ಯಕ್ತಿಗಳ ಕೆಲಸ ಏನು? ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲೂ ಪದೇ ಪದೇ ಸಚಿವರ ಬೆಂಬಲಿಗರ ಪಡೆ ಕಾಣಿಸಿಕೊಂಡಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲೂ ಕಾಣಿಸಿಕೊಂಡಿದ್ದಾರೆ. ಸಚಿವರ ಹೆಸರು ಹೇಳಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ. ಜಿಲ್ಲೆಯ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕು. ಆಹಾರ, ಮರಳು, ಭೂ ಮಾಫಿಯಾದ ಬಗ್ಗೆ ದಾಖಲೆ ಸಮೇತ ಆಗಮಿಸಿ ಬಹಿರಂಗಪಡಿಸುವೆ ಎಂದರು.ಉಸ್ತುವಾರಿ ಸಚಿವರು ಜಿಲ್ಲೆಯ ವಾಸ್ತವ ಸ್ಥಿತಿಗತಿ ಅರಿಯಲು ಪ್ರಯತ್ನಿಸಿಲ್ಲ. ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಅವರು ಯಾರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ? ಹೆಲಿಕಾಪ್ಟರ್‌ನಲ್ಲಿ ಶೋ ಮಾಡುತ್ತಿದ್ದಾರೆ. ಬಡವರಿಗೆ ಐದು ಸಾವಿರ ರು. ಎಣಿಸಿ, ಎಣಿಸಿ ನೀಡಿ ಫೋಟೊ ಹಾಕಿಕೊಂಡು ಗಿಮಿಕ್ ಮಾಡುತ್ತಿದ್ದಾರೆ. ಅದರ ಬದಲಿಗೆ ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸಬೇಕು. ಈ ಕಾರ್ಯ ಆಗುತ್ತಿಲ್ಲ ಎಂದರು.
ಯಾರಿಗೂ ಹೆದರುವುದಿಲ್ಲ: ಕಾಂಗ್ರೆಸ್ ಪಕ್ಷದವರ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿದೆ ಎಂಬ ಕಾರಣವೊಡ್ಡಿ ನನ್ನ ವಿರುದ್ಧ ಕ್ರಮ ಕೈಗೊಂಡರೂ ನಾನು ಹೆದರುವುದಿಲ್ಲ. ನನಗೆ ಪಕ್ಷ ಮುಖ್ಯ. ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳಲು ಬಿಡುವುದಿಲ್ಲ. ಐದು ಗ್ಯಾರಂಟಿಯಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ವಿಜಯನಗರ ಕ್ಷೇತ್ರದಲ್ಲೇ ನಾನು 40 ಸಾವಿರ ಕಾರ್ಡ್‌ಗಳನ್ನು ಹಂಚಿಕೆ ಮಾಡಿರುವೆ. ಎಲ್ಲರ ಫೋನ್ ನಂಬರ್‌ಗಳು ನನ್ನ ಬಳಿ ಇವೆ. ಬಡವರು ಫೋನ್ ಮಾಡಿ ನನ್ನ ಪ್ರಶ್ನೆ ಮಾಡುತ್ತಿದ್ದಾರೆ. ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಮೊದಲು ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲಿ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ವರಿಷ್ಠರಿಗೂ ದೂರು ಸಲ್ಲಿಸುವೆ ಎಂದರು.ಉತ್ಸವಕ್ಕೆ ಆಹ್ವಾನ ಇಲ್ಲ: ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ, ನಗರಸಭೆ ಸದಸ್ಯರಿಗೆ ಹಂಪಿ ಉತ್ಸವಕ್ಕೆ ಆಹ್ವಾನ ನೀಡಿರಲಿಲ್ಲ. ನಗರಸಭೆ ಸದಸ್ಯರು ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ. ಇದು ಮತದಾರರಿಗೆ ಮಾಡಿದ ಅವಮಾನವಾಗಿದೆ. ಮಾಜಿ ಶಾಸಕನಾದ ನನಗೆ ಆಹ್ವಾನ ಇರಲಿಲ್ಲ. ವೈಯಕ್ತಿಕ ಪಾಸ್ ಕೇಳಿದಾಗ ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಏನ್ಮಾಡ್ತೀರಾ? ಜಿಲ್ಲಾಧಿಕಾರಿಗಳಿಗೆ ಹೇಳ್ತೀರಾ ಹೇಳ್ಕೊ ಹೋಗಿ ಎಂದು ಏರುಧ್ವನಿಯಲ್ಲಿಯೇ ಹೇಳಿದ್ದಾರೆ. ಈ ಬಾರಿಯ ಹಂಪಿ ಉತ್ಸವವು ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲಾಧಿಕಾರಿಗಳ ಉತ್ಸವವಾಗಿತ್ತು ಎಂದು ದೂರಿದರು.
ಶಾಸಕ ಗವಿಯಪ್ಪನವರ ಬಗ್ಗೆ ಯಾವುದೇ ದೂರುಗಳಿಲ್ಲವೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಅವರ ಬಗ್ಗೆ ಈಗ ನಾನು ಏನೂ ಹೇಳುವುದಿಲ್ಲ. ಅವರ ಬಗ್ಗೆಯೂ ಕಾರ್ಯಕರ್ತರು ದೂರಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಮಾತನಾಡುವೆ ಎಂದು ಉತ್ತರಿಸಿದರು.ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಾಯಕ ಶೆಟ್ಟರ್, ಸಿ. ಖಾಜಾ ಹುಸೇನ್, ಮುಖಂಡರಾದ ಡಿ. ವೆಂಕಟರಮಣ, ತಮನಳೇಪ್ಪ, ಮರಡಿ ಮಂಜುನಾಥ, ಇಂದುಮತಿ, ಸಂಗಪ್ಪ, ನಗರಸಭೆ ಸದಸ್ಯ ಕೆ.ಗೌಸ್ ಮತ್ತಿತರರಿದ್ದರು.