ಕೆತ್ತಿಕಲ್‌ ಗುಡ್ಡದ ಬಗ್ಗೆ ಉನ್ನತ ತನಿಖೆಗೆ ಸಚಿವ ಸೂಚನೆ

| Published : Aug 03 2024, 12:39 AM IST

ಸಾರಾಂಶ

ಮುಗೇರ್‌ ಕುದ್ರು ಸಮಸ್ಯೆಯ ಬಗ್ಗೆ ತಾಂತ್ರಿಕ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಲು ಆದೇಶಿಸಿದ್ದೇನೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ಅಗೆದಿರುವ ವಾಮಂಜೂರಿನ ಕೆತ್ತಿಕಲ್‌ ಗುಡ್ಡ ತೀವ್ರ ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ದ.ಕ. ಜಿಲ್ಲೆಯ ವಿವಿಧೆಡೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಅರ್ಧ ಕಡಿದು ಅಪಾಯಕಾರಿಯಾಗಿರುವ ಕೆತ್ತಿಕಲ್‌ ಗುಡ್ಡ ನೋಡಿ ತೀವ್ರ ಆತಂಕ ವ್ಯಕ್ತಪಡಿಸಿದರು. ಇದು ಮತ್ತೊಂದು ಶಿರೂರು ಗುಡ್ಡದಂತೆ ಇದೆ, ಕುಸಿದು ಬಿದ್ದರೆ ಹಲವು ಮನೆಗಳು, ಜನರಿಗೆ ತೀವ್ರ ಅಪಾಯವಾಗುವ ಸ್ಥಿತಿ ಇದೆ ಎಂದರು.

ಅಧಿಕಾರಿಗಳು ತರಾಟೆಗೆ:

ಈ ಗುಡ್ಡದ ಮಣ್ಣನ್ನು ಮಾರಾಟ ಮಾಡಲಾಗಿದೆ. ಮಣ್ಣು ಗಣಿಗಾರಿಕೆಗಾಗಿ ಜನರ ಜೀವನದೊಂದಿಗೆ ಚೆಲ್ಲಾಟವಾಡಿದ್ದಾರೆ. ಇದರಿಂದಾಗಿ ಗುಡ್ಡದ ಮೇಲಿನ ಹಲವು ಮನೆಗಳು ಅಪಾಯದ ಅಂಚಿನಲ್ಲಿವೆ ಎಂದು ಸ್ಥಳೀಯರು ಸಚಿವರ ಬಳಿ ದೂರಿದರು. ಇದರಿಂದ ಆಕ್ರೋಶಗೊಂಡ ಸಚಿವ ಗುಂಡೂರಾವ್‌, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮಣ್ಣು ತೆಗೆದುಕೊಂಡು ಹೋಗುವಾಗ ನೀವೆಲ್ಲ ಏನು ಮಾಡುತ್ತಿದ್ರಿ? ಗುಡ್ಡವನ್ನು ಇಷ್ಟು ಅಪಾಯಕಾರಿಯಾಗಲು ಬಿಟ್ಟದ್ದು ಯಾಕೆ? ಈ ದಂಧೆಯಲ್ಲಿ ನೀವೆಲ್ಲ ಶಾಮೀಲಾಗಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗುಡ್ಡಕ್ಕೆ ತಾಂತ್ರಿಕ ಸಮಿತಿ ಬರಲು ಹೇಳಿದ್ದೇವೆ. ಈ ಗುಡ್ಡ ಕುಸಿದರೆ ಭಾರೀ ಅಪಾಯವಾಗುವ ಸಾಧ್ಯತೆ ಇದೆ. ಫೆಬ್ರವರಿಯಲ್ಲೇ ಗುಡ್ಡ ಕಡಿಯುವುದನ್ನು ನಿಲ್ಲಿಸಲು ಜಿಲ್ಲಾಡಳಿತ ಹೇಳಿತ್ತು. ಸ್ಥಳೀಯಾಡಳಿತ ಇದನ್ನು ಯಾವ ರೀತಿ ನಿರ್ವಹಿಸಿದೆ ನೋಡಬೇಕು. ಗುಡ್ಡದ ಮಣ್ಣು ಕೊಂಡೊಯ್ಯಲು ಯಾಕೆ ಬಿಟ್ಟಿದ್ದಾರೆ ಎನ್ನುವುದೂ ಗೊತ್ತಾಗಬೇಕು. ಆದ್ದರಿಂದ ಈ ಎಲ್ಲ ವಿಚಾರಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದರು.

ವಿಷ ಕೊಡಿ ಎಂದ ಮೊಗೇರ್‌ಕುದ್ರು ಜನ:

ಇದಕ್ಕೂ ಮೊದಲು ಆದ್ಯಪಾಡಿಯ ಪ್ರವಾಹಪೀಡಿತ ಮೊಗೇರ್‌ಕುದ್ರು ಗ್ರಾಮಕ್ಕೆ ಸಚಿವರು ಭೇಟಿ ನೀಡಿದರು. ಮರವೂರು ವೆಂಟೆಡ್‌ ಡ್ಯಾಂನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಳೆದ 10 ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಮುಗೇರ್‌ ಕುದ್ರು ಸಂಪೂರ್ಣ ಜಲಾವೃತಗೊಂಡು ದ್ವೀಪದಂತಾಗುವ ಪರಿಸ್ಥಿತಿಯನ್ನು ಸ್ವತಃ ಅವಲೋಕಿಸಿದರು. ಈ ಸಂದರ್ಭ ಸ್ಥಳೀಯ ಜನರು ಸಚಿವರ ಎದುರು ಸಮಸ್ಯೆ ಬಗ್ಗೆ ಕಣ್ಣೀರು ಸುರಿಸಿದರು. ಪ್ರತಿ ಮಳೆಗಾಲದಲ್ಲಿ ಪ್ರವಾಹದಿಂದ ನಮ್ಮ ಕಷ್ಟ ಕೇಳುವವರಿಲ್ಲ. ಇದರ ಬದಲು ನಮಗೆ ವಿಷವಾದರೂ ಕೊಡಿ ಎಂದು ಅಳಲು ತೋಡಿಕೊಂಡರು.

ನಮಗೆ ಪರಿಹಾರದ ಹಣ ಬೇಡ, ಅದರ ಬದಲು ಪ್ರವಾಹದ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು. ಮರವೂರು ಅಣೆಕಟ್ಟಿನಿಂದ ನೀರು ಕೆಳಗೆ ಸರಾಗವಾಗಿ ಹರಿಯದೆ ಈ ಪ್ರವಾಹ ಉಂಟಾಗುತ್ತಿದೆ. ನೀರು ಸರಾಗವಾಗಿ ಹರಿಯಲು ಪೂರಕ ಕಾಮಗಾರಿ ನಡೆಸಿ ಎಂದು ಒತ್ತಾಯಿಸಿದರು.

ಮುಗೇರ್‌ ಕುದ್ರು ಸಮಸ್ಯೆಯ ಬಗ್ಗೆ ತಾಂತ್ರಿಕ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಲು ಆದೇಶಿಸಿದ್ದೇನೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

ದ.ಕ. ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಸ್ಥಿತಿಯನ್ನು ಜಿಲ್ಲಾಡಳಿತ ಯಶಸ್ವಿಯಾಗಿ ನಿಭಾಯಿಸಿದೆ. ಅದರ ಬಗ್ಗೆ ಯಾವುದೇ ದೂರು ಬಂದಿಲ್ಲ. ಆದರೆ ಪರಿಹಾರ ಹಾಗೂ ಆದ್ಯಪಾಡಿ, ಕೆತ್ತಿಕಲ್‌ ಗುಡ್ಡದಂತಹ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಮಳೆ ಹಾನಿ ನಿರ್ವಹಣೆಗೆ ಎಲ್ಲ ಪಂಚಾಯ್ತಿಗಳಿಗೂ ತಕ್ಷಣ ಹಣ ನೀಡಲಾಗಿದೆ. ಖರ್ಚು ಮಾಡುವ ಬಗ್ಗೆ ಸ್ಥಳೀಯಾಡಳಿತಕ್ಕೆ ಮುಕ್ತ ಅವಕಾಶ ನೀಡಿದ್ದೇವೆ.

- ದಿನೇಶ್ ಗುಂಡೂರಾವ್‌, ದ.ಕ. ಜಿಲ್ಲಾ ಉಸ್ತುವಾರಿ ಸಚಿವ