ಸಾರಾಂಶ
ಶಿರಹಟ್ಟಿ: ಶಿರಹಟ್ಟಿ ಪಟ್ಟಣದಲ್ಲಿ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದು ಮುಂದಿನ ಒಂದು ವರ್ಷದ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಮಾಡಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶನಿವಾರ ಪಟ್ಟಣದ ಬಸ್ ನಿಲ್ದಾಣದ ಎದುರಿಗೆ ರು. ೧ ಕೋಟಿ ೯೬ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಾಮಗಾರಿ ಕೈಗೆತ್ತಿಕೊಂಡಿರುವ ಇಲಾಖೆ ಅಧಿಕಾರಿಗಳು ಯೋಜನೆಯಂತೆ ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ತಾಕೀತು ಮಾಡಿದರು.ಫಕೀರೇಶ್ವರ ಮಠಕ್ಕೆ ಭೇಟಿ: ಭೂಮಿ ಪೂಜೆ ಕಾರ್ಯಕ್ರಮಕ್ಕೂ ಮೊದಲು ಶ್ರೀ ಜಗದ್ಗುರು ಫಕೀರೇಶ್ವರ ಮಠಕ್ಕೆ ಭೇಟಿ ನೀಡಿ ಜ. ಫಕೀರ ಸಿದ್ದರಾಮ ಶ್ರೀಗಳು ಹಾಗೂ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೆಶ್ವರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ನಂತರ ಶ್ರೀಗಳು ಭಕ್ತರ ಬಹುದಿನಗಳ ಬೇಡಿಕೆಯಾದ ಸೊರಟೂರ ಬೈಪಾಸ್ ರಸ್ತೆಯಿಂದ ಜ. ಫಕೀರೇಶ್ವರ ಮಠಕ್ಕೆ ತಲುಪಲು ರಸ್ತೆ ಅಗತ್ಯವಾಗಿದ್ದು, ವಿಶೇಷವಾಗಿ ಜಾತ್ರೆಯ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿ ಭಕ್ತರಿಗೆ ಸಮಸ್ಯೆಯಾಗುತ್ತಿದೆ. ಈ ರಸ್ತೆ ಕಾಮಗಾರಿ ಕಾರ್ಯಗತಗೊಳಿಸಬೇಕು ಎಂದು ಗಮನಕ್ಕೆ ತಂದಿದ್ದು, ಲೋಕೋಪಯೋಗಿ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು.ಶಾಸಕ ಡಾ. ಚಂದ್ರು ಕೆ. ಲಮಾಣಿ ಮಾತನಾಡಿ, ಈಗಾಗಲೇ ಶಿರಹಟ್ಟಿ ಮತಕ್ಷೇತ್ರದಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಭವನಗಳು ಉಪಯೋಗಕ್ಕೆ ಬರದಂತಿವೆ. ಯಾವುದೇ ಒಂದು ಸಣ್ಣ ಕಾರ್ಯಕ್ರಮ ಮಾಡಲು ಕೂಡ ಆಗುತ್ತಿಲ್ಲ. ಭವನದಲ್ಲಿ ಮಾತನಾಡಿದರೆ ಪ್ರತಿಧ್ವನಿಯಾಗುತ್ತಿದೆ. ಕೋಟ್ಯಂತರ ಅನುದಾನ ಬಳಕೆ ಮಾಡಿಕೊಂಡು ಕಟ್ಟಿರುವ ಸಮುದಾಯ ಭವನಗಳು ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿರಬೇಕು ಎಂದು ಸಚಿವರ ಗಮನ ಸೆಳೆದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಅನಿಲ ಮಾನೆ ನೇತೃತ್ವದಲ್ಲಿ ಪಟ್ಟಣದಲ್ಲಿ ಶಾಶ್ವತ ನ್ಯಾಯಾಲಯ ಸ್ಥಾಪನೆಗೆ ಮನವಿ ನೀಡಿದ್ದು, ಸರ್ಕಾರದ ವತಿಯಿಂದ ಸೂಕ್ತ ನಿವೇಶನ ಗುರುತಿಸಿ ಮೂಲಭೂತ ಸೌಲಭ್ಯ ಒದಗಿಸಿ ಸಾಧ್ಯವಾದಷ್ಟು ಬೇಗನೆ ನ್ಯಾಯಾಲಯ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು ಎಂದು ಸಚಿವರ ಗಮನಕ್ಕೆ ತಂದರು. ಸಚಿವ ಎಚ್.ಕೆ. ಪಾಟೀಲ ಈ ಕುರಿತಂತೆ ಮಾತನಾಡಿ, ಎರಡು ತಿಂಗಳೊಳಗಾಗಿ ಭೂಮಿ ಮಂಜೂರ ಮಾಡಿಸಿ ಶೀಘ್ರದಲ್ಲಿಯೇ ಶಾಶ್ವತ ನೂತನ ನ್ಯಾಯಾಲಯ ಸ್ಥಾಪನೆಗೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಭವನಗಳ ವಾಸ್ತವ ಸ್ಥಿತಿ ಬಗ್ಗೆ ಶಾಸಕರು ಗಮನಕ್ಕೆ ತಂದಿದ್ದು, ಯೋಜನೆಯಂತೆ ಇಕೋ (ಪ್ರತಿಧ್ವನಿ) ಆಗದಂತೆ ಅಭಿಯಂತರರು ಗಮನಿಸಿ ಕಾಮಗಾರ ಮಾಡಬೇಕು ಎಂದು ಸೂಚನೆ ನೀಡಿದರು. ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ದೇವಕ್ಕ ಗುಡಿಮನಿ, ಶಾಕೀರ ಸನದಿ, ಹುಮಾಯೂನ ಮಾಗಡಿ, ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ಮೋಹನ್ ಗುತ್ತೆಮ್ಮನವರ, ವಿಶ್ವನಾಥ ಕಪ್ಪತ್ತನವರ, ಮಂಜುನಾಥ ಘಂಟಿ, ಡಿ.ಕೆ. ಹೊನ್ನಪ್ಪನವರ, ಮುತ್ತು ಭಾವಿಮನಿ, ರಂಗಪ್ಪ ಗುಡಿಮನಿ, ರಾಮಣ್ಣ ಕಂಬಳಿ, ಸಮಾಜ ಕಲ್ಯಾಣ ಇಲಾಖೆಯ ಗೋಪಾಲ ನಾಯಕ, ನಿರ್ಮಿತಿ ಕೇಂದ್ರದ ವಿಜಯ ಯಳಮಲಿ ಇದ್ದರು.