ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆ ದುರಸ್ತಿ ಕಾಮಗಾರಿ ಆದಷ್ಟು ಬೇಗನೆ ಮುಗಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು
ಮುನಿರಾಬಾದ್: ತುಂಗಭದ್ರಾ ಎಡದಂಡೆ ಕಾಲುವೆ ಏಕಾಏಕಿ ಒಡೆದ ಕಾರಣ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಪ್ರಮುಖ ನಗರಗಳು ಹಾಗೂ ಹಳ್ಳಿಗಳ ಕುಡಿಯುವ ನೀರಿನ ಸರಬರಾಜು ವಿಳಂಬವಾಗಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದು ದುರಸ್ತಿ ಕಾರ್ಯ ಬೇಗನೆ ಮುಗಿಸಬೇಕೆಂದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು..
ತುಂಗಭದ್ರಾ ಜಲಾಶಯಕ್ಕೆ ಗೇಟ್ ಅಳವಡಿಕೆ ಕಾರ್ಯ ವೀಕ್ಷಣೆ ನಂತರ ಸಚಿವರು ಬಸಾಪುರ ಗ್ರಾಮದ ಸಮೀಪ ಒಡೆದ ತುಂಗಭದ್ರಾ ಜಲಾಶಯದ ಎಡದಂಡೆ ಮುಖ್ಯ ಕಾಲುವೆ ದುರಸ್ತಿ ಕಾಮಗಾರಿ ಪರಿಶೀಲಿಸಿದರು.ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆ ದುರಸ್ತಿ ಕಾಮಗಾರಿ ಆದಷ್ಟು ಬೇಗನೆ ಮುಗಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಕಾಲುವೆ ಒಡೆಯುವ ಕುರಿತು ಗ್ರಾಮಸ್ಥರು ಮೊದಲೇ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ನಿರ್ಲಕ್ಷ್ಯ ಮಾಡಿದ್ದೇ ಕಾಲುವೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಒಡೆಯಲು ಕಾರಣವಾಯಿತೆ ಎಂದು ಪ್ರಶ್ನೆ ಮಾಡಿದ ಅವರು, ಈ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಶ್ರೀನಿವಾಸ ಮಲ್ಲಿಗಿವಾಡ, ಕಾರ್ಯಪಾಲಕ ಅಭಿಯಂತರ ಗೋಡೆಕರ್ ಹಾಗೂ ಇತರರು ಉಪಸ್ಥಿತರಿದ್ದರು.ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಡದಂಡೆ ನಾಲೆಯಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ನೀರಾವರಿ ಮಾಡಲಾಗುತ್ತಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇದನ್ನು ತಡೆಯಲು ವಿಶೇಷ ಕಾರ್ಯಪಡೆ ರಚನೆ ಮಾಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಹೇಳಿದರು.
ಕಾಲುವೆ ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ಕೆಲ ಭಾಗಗಳಿಗೆ ನೀರು ಬರದಂತಾಗಿದೆ.ಇದಕ್ಕಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡ ರಚಿಸಿ ಅಕ್ರಮ ನೀರಾವರಿ ತಡೆಯಲಾಗುವುದು ಎಂದರು.