ಸಾರಾಂಶ
ಕನ್ನಡಪ್ರಭ ವಾರ್ತೆ ವಾಡಿ
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕ ಪ್ರಿಯಾಂಕ್ ಖರ್ಗೆ ರವರ ಮಾತು ಮತ್ತು ಆದೇಶಕ್ಕೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಒಬ್ಬ ಗ್ರಾಮೀಣಾಭಿವೃದ್ಧಿ ಸಚಿವರ ತವರಿನಲ್ಲಿ ಪಂಚಾಯತ್ ವ್ಯವಸ್ಥೆ ಹದಗೆಟ್ಟಿದ್ದು, ತಮ್ಮ ಕ್ಷೇತ್ರ ಸುಧಾರಿಸಿಕೊಳ್ಳದ ಸಚಿವರು ರಾಜ್ಯವನ್ನು ಹೇಗೆ ಸುಧಾರಿಸುತ್ತಾರೆ ಎಂದು ಬಿಜೆಪಿ ಮುಖಂಡರು ವ್ಯಂಗ್ಯವಾಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಮುಖಂಡ ಬಸವರಾಜ ಪಂಚಾಳ, ಸಚಿವ ಪ್ರಿಯಾಂಕ್‌ರು ಕಲಬುರಗಿ ಉಸ್ತುವಾರಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಬದ್ಧ ಎಂದು ಹೇಳಿದ ಮಾತು ಜಾರಿಗೆ ಬರುವುದು ಯಾವಾಗ? ತಾಲೂಕು ಮತ್ತು ಜಿಲ್ಲೆಯಲ್ಲಿ ಸ್ಥಳೀಯ ಆಡಳಿತ ಬಲವರ್ಧನೆಯಾಗುವುದು ಯಾವಾಗ ಎಂದು ಪ್ರಶ್ನಿಸಿದರು. ಪ್ರತಿ ಗ್ರಾಮದಲ್ಲಿ ಸ್ವಚ್ಛತೆ ಸಂಪೂರ್ಣ ಹಾಳಾಗಿ ನಿಂತಿದೆ. ಸಾಂಕ್ರಾಮಿಕ ರೋಗಗಳು ಹಳ್ಳಿ ಹಳ್ಳಿಗಳಲ್ಲಿ ತುಂಬಿ ತುಳುಕುತ್ತಿದ್ದು, ಸಾರ್ವಜನಿಕರು ರೋಗಕ್ಕೆ ತತ್ತರಿಸಿ ಹೋಗುತ್ತಿದ್ದಾರೆ. ಇದಕ್ಕೆ ಹದಗೆಟ್ಟ ನೈರ್ಮಲ್ಯ ವ್ಯವಸ್ಥೆಯೇ ಕಾರಣವಾಗಿದ್ದು. ಇದರ ಉಸ್ತುವಾರಿಯಾಗಿರುವ ಅಭಿವೃದ್ಧಿ ಅಧಿಕಾರಗಳು ಜನರ ಕೈಗೆ ಸಿಗುತ್ತಿಲ್ಲ. ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಮೇಲೆ ಸಚಿವರ ಹಿಡಿತವಿಲ್ಲದ ಕಾರಣ ಈ ಅವ್ಯವಸ್ಥೆ ತಲೆದೂರಿದೆ ಎಂದು ಕಿಡಿಕಾರಿದರು.
ಸಚಿವ ಜಮೀರ್ ಅಹ್ಮದ್ ಈಚೆಗೆ ಕಲಬುರಗಿಯಲ್ಲಿ ಸಭೆ ನಡೆಸಿ ಜಿಲ್ಲೆಯ ವಕ್ ಬೋರ್ಡ್ ಆಸ್ತಿ ವಶಕ್ಕೆ ಸೂಚಿಸಿದ್ದಾರೆ. ಇದರ ಕುರಿತು ಈಗಾಗಲೇ ಹಲವು ಗ್ರಾಮದ ರೈತರಿಗೆ ನೋಟಿಸ್ ಸಹ ನೀಡಲಾಗಿದೆ, ಆದರೆ ಇದರಲ್ಲಿ ಬಹಳಷ್ಟು ಜನ ರೈತರು ಅಮಾಯಕರಿದ್ದಾರೆ. ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯ ಆಡಳಿತದಲ್ಲಿ ಸಮಗ್ರ ಪಾರದರ್ಶಕತೆ ತರುವ ದೃಷ್ಟಿಯಿಂದ ಎಲ್ಲಾ ಇಲಾಖೆಗಳಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ತಕ್ಷಣದಿಂದ ಜಾರಿಗೆ ಮಾಡಲು ಸಚಿವರು ಮುಂದಾಗಬೇಕು. ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಅನುದಾನ ಘೋಷಣೆ ಮಾಡಲಾಗಿತ್ತು. ತಕ್ಷಣ ಅನುದಾನ ಜಾರಿಗೊಳಿಸಿ ಅಭಿವೃದ್ಧಿ ವೇಗಗೊಳಿಸಬೇಕು. ಆದರೆ ಸಚಿವರಿಗೆ ಸ್ಥಳೀಯ ಆಡಳಿತದ ಬಗ್ಗೆ ಒಲವು ಇಲ್ಲ. ಹೀಗಾಗಿ ವಾಡಿ ಮತ್ತು ಚಿತ್ತಾಪುರ ತಾಲೂಕಿನ ಚುನಾವಣೆಗಳನ್ನು ಕಾರ್ಯಕರ್ತರ ಮೂಲಕ ತಡೆಯಾಜ್ಞೆ ತಂದು ಮುಂದೂಡುವಂತೆ ಮಾಡಿದ್ದಾರೆ. ಚುನಾವಣೆಗಳು ನಡೆದರೆ ಬಿಜೆಪಿ ಅಧಿಕಾರಕ್ಕೆ ಬರುವ ಭಯ ಅವರನ್ನು ಕಾಡುತ್ತಿದೆ. ಇದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಆಸೆಯಕ್ಕೆ ಧಕ್ಕೆ ಉಂಟು ಮಾಡಿದಂತಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಅಂಗವಿಕಲರಿಗೆ ನೀಡಬೇಕಾಗಿದ್ದ ವ್ಹೀಲ್ ಚೇರ್, ಬೈಕ್‌ಗಳು ಹಾಗೂ ಸ್ವಚ್ಛತಾ ಬುಟ್ಟಿಗಳು ಪುರಸಭೆ ಕಸ ವಿಲೇವಾರಿ ಘಟಕದಲ್ಲಿ ತುಕ್ಕು ಹಿಡಿದು ಕೊಳೆಯುತ್ತಿವೆ. ಬ್ಲಿಚಿಂಗ್ ಪೌಡರ್, ಕುಡಿಯುವ ನೀರಿಗೆ ಸಿಂಪರಣೆ ಹಣದಲ್ಲಿ ಅಧಿಕಾರಿಗಳು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ, ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಇವರಿಗೂ ಸಹ ಕಮಿಷನ್ ಹೊಗುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ಬಿಜೆಪಿ ಮುಖಂಡರಾದ ರಮೇಶ ಕಾರಬಾರಿ, ವಿಠ್ಠಲ್ ವಾಲ್ಮೀಕಿ ನಾಯಕ, ಶಿವಶಂಕರ ಕಾಶೇಟ್ಟಿ, ರವಿ ನಾಯಕ, ಕಿಶನ ಜಾಧವ್, ತುಕಾರಾಮ, ಆನಂದ ಇಂಗಳಗಿ ಇದ್ದರು.