ಸಾರಾಂಶ
ಕಾರವಾರ: ರಾಜ್ಯದ ಎಲ್ಲ ತಾಲೂಕು ಕಚೇರಿಯಲ್ಲಿ ಇ ಆಫೀಸ್ ಮೂಲಕವೇ ಕಡತ ವಿಲೇವಾರಿ ಕಡ್ಡಾಯವಾಗಿ ಮಾಡಲು ಸೂಚಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಇ ಆಫೀಸ್‌ನಿಂದ ಯಾವ ಅಧಿಕಾರಿ ಹತ್ತಿರ ಎಷ್ಟು ದಿನದಿಂದ ಕಡತವಿದೆ ಎಂದು ತಿಳಿಯುತ್ತದೆ. ಕಡತ ಕಾಣೆಯಾಗುವುದು, ವಿಲೇವಾರಿಗೆ ವಿಳಂಬ ಮಾಡುವುದನ್ನು ತಪ್ಪಿಸಬಹುದು. ಕಡತ ಯಾವ ಹಂತದಲ್ಲಿದೆ ಎಂದು ತಹಸೀಲ್ದಾರರಿಗೆ, ಎಸಿಗೆ, ಡಿಸಿಗೆ, ಸಚಿವರಿಗೂ ಆನ್‌ಲೈನ್‌ನಲ್ಲೇ ಮಾಹಿತಿ ಸಿಗುತ್ತದೆ. ಇದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿರುವುದು ಸತ್ಯ. ರಾಜ್ಯದಲ್ಲಿ ಎಡಿಎಲ್‌ಆರ್ ೩೪ ಖಾಲಿಯಿದೆ. ೩೬೪ ಸರ್ವೆಯರ ಹುದ್ದೆ ಖಾಲಿಯಿದೆ. ಈ ಎಲ್ಲವನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ. ಸಾವಿರಕ್ಕೂ ಅಧಿಕ ಖಾಸಗಿ ವ್ಯಕ್ತಿಗಳಿಗೆ ಸರ್ವೆಯರ್ ಪರವಾನಗಿ ಅನುಮತಿಯಾಗಿದೆ. ೧ ಸಾವಿರ ಗ್ರಾಮ ಲೆಕ್ಕಾಧಿಕಾರಿ ಆಫೀಸರ್(ವಿಎಒ) ಹುದ್ದೆ ಭರ್ತಿಗೆ ಕ್ರಮ ವಹಿಸಲಾಗಿದೆ. ಈ ಎಲ್ಲ ಹುದ್ದೆ ಭರ್ತಿಯಾದರೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಇ ಸ್ವತ್ತು ಸಮಸ್ಯೆ ಬಗ್ಗೆ ಕೇಳಿದಾಗ, ಸರಳಿಕರಣ ಆಗಬೇಕು ಎನ್ನುವುದು ಸರ್ಕಾರದ ಗಮನಕ್ಕಿದೆ. ಆರ್‌ಡಿಪಿಆರ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಬದಲಾವಣೆ ತರಲು ಹೊರಟಿದ್ದಾರೆ. ಕಾನೂನು ತೊಡಕು ನಿವಾರಿಸಿ ಸರಳಿಕರಣ ಮಾಡಬೇಕಿದ್ದು, ಸಚಿವರು ಪ್ರಯತ್ನದಲ್ಲಿದ್ದಾರೆ ಎಂದ ಅವರು, ಇ ಖಾತಾ ಕಡ್ಡಾಯದ ಬಗ್ಗೆ ಕೇಳಿದಾಗ ಅಕ್ರಮ, ಮೋಸ ತಡೆಯಲು ಇ ಖಾತಾ ಕಡ್ಡಾಯ ಮಾಡಲಾಗಿದೆ. ಒಂದು ಸರ್ವೆ ನಂಬರ್ ನಾಲ್ಕಾರು ಜನರಿಗೆ ನೀಡಿ ವಂಚನೆ ಮಾಡಿದ ಪ್ರಕರಣಗಳು ಗಮನಕ್ಕೆ ಬಂದಿದೆ. ಇಂತಹ ವಂಚನೆ ತಡೆಯಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಕಾಂಗ್ರೆಸ್ ಹೋರಾಟಕ್ಕೆ ಜಯ ಸಿಕ್ಕಿದೆ: ಸಚಿವ ಕೃಷ್ಣ ಬೈರೇಗೌಡ
ಕಾರವಾರ: ಹರಿಯಾಣದಲ್ಲಿ ಬಹಳಷ್ಟು ಕಡೆ ೫೦೦ರಿಂದ ೧,೦೦೦ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಸೋತಿದ್ದಾರೆ. ಬಹಳ ಕಡೆ ಕಡಿಮೆ ಅಂತರದ ಕೈ ಅಭ್ಯರ್ಥಿಯ ಸೋಲಿನಿಂದ ಬಿಜೆಪಿ ಬಹುಮತ ಪಡೆದುಕೊಂಡಿದೆ. ಜಮ್ಮು ಗೆಲುವು ಕಾಂಗ್ರೆಸ್ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.ನಗರಕ್ಕೆ ಮಂಗಳವಾರ ಆಗಮಿಸಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಹರಿಯಾಣದಲ್ಲೂ ಗೆಲ್ಲುವ ನಿರೀಕ್ಷೆಯಿತ್ತು. ಹರಿಯಾಣ ಫಲಿತಾಂಶದಿಂದ ನಮಗೆ ಆಶ್ಚರ್ಯವಾಗಿದೆ. ಕೆಲವೇ ಕ್ಷೇತ್ರಗಳ ಸೋಲಿನಿಂದ ಬಹುಮತ ಪಡೆದುಕೊಳ್ಳುವಲ್ಲಿ ವಿಫಲ ಆಗಿದ್ದೇವೆ. ಮತ ಎಣಿಕೆ ಆರಂಭದಲ್ಲಿ ಬಹುಮತದ ನಿರೀಕ್ಷೆಯಿತ್ತು. ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದರು.ಸಿದ್ದರಾಮಯ್ಯ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ನಮ್ಮ ಪಕ್ಷದ ಹೈಕಮಾಂಡ್ ನಾಯಕರೆಲ್ಲ ಸಿದ್ದರಾಮಯ್ಯ ಅವರ ಜತೆಗಿದ್ದೇವೆಂದು ಹೇಳಿದ್ದಾರೆ. ಈಗ ಸಿಎಂ ಬದಲಾವಣೆಯಿಲ್ಲವೆಂದು ನಮ್ಮ ವರಿಷ್ಠರು ಸ್ಪಷ್ಟವಾಗಿ ಹೇಳಿದ್ದಾರೆ. ವರಿಷ್ಠರ ಮಾತು ನೂರಕ್ಕೆ ನೂರು ನಮಗೆ ಮನವರಿಕೆಯಾಗಿದೆ ಎಂದರು.ಸತೀಶ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂಬ ವಿಚಾರವಾಗಿ ಮಾತನಾಡಿ, ಅವರು ಸಿಎಂ ಆಗುತ್ತಾರೆಂದು ಮಾಧ್ಯಮದಲ್ಲಿ ಹೇಳಲಾಗುತ್ತಿದೆ. ಅವರೂ ಸಹಜವಾಗಿ ರಾಜ್ಯಾದ್ಯಂತ ಸುತ್ತಾಟ ಮಾಡುತ್ತಿದ್ದಾರೆ. ನಮಗೆ ಇದುವರೆಗೂ ಸಿಎಂ ಬದಲಾವಣೆಯ ಬಗ್ಗೆ ಸಂದೇಶ ಬಂದಿಲ್ಲ. ತಮಗೆ ಇರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಅವರೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದರು.ಸಿಎಂ ರಾಜೀನಾಮೆಗೆ ಕೆ.ಬಿ. ಕೋಳಿವಾಡ ಆಗ್ರಹದ ಬಗ್ಗೆ ಕೇಳಿದಾಗ, ಭಾರತದಲ್ಲಿ ಸಂವಿಧಾನದಿಂದ ನಮಗೆಲ್ಲ ವಾಕ್ ಸ್ವಾತಂತ್ರ‍್ಯ ಬಂದಿದೆ. ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವರು ಸ್ವತಂತ್ರವಾಗಿದ್ದಾರೆ. ತಮ್ಮ ಅಭಿಪ್ರಾಯದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು.ಅಂಕೋಲಾದ ಶಿರೂರು ಗುಡ್ಡಕುಸಿತ ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನಿಸಿದಾಗ, ಇದುವರೆಗೆ ಕಾರ್ಯಾಚರಣೆ ಮಾಡಿರುವುದೇ ಒಂದು ಸಾಹಸವಾಗಿದೆ. ಸ್ಥಳೀಯ ಇಬ್ಬರ ಮೃತದೇಹಗಳ ಕುರಿತು ಇನ್ನೂ ಸುಳಿವು ಸಿಕ್ಕಿಲ್ಲ. ಕೇರಳದಲ್ಲಿ ನಡೆದ ದುರಂತದಲ್ಲಿ ಇದುವರೆಗೂ ಹಲವರ ಮೃತದೇಹಗಳು ಸಿಕ್ಕಿಲ್ಲ. ಸರ್ಕಾರದಿಂದ ಏನೆಲ್ಲ ಪ್ರಯತ್ನ ಮಾಡಬಹುದೋ ಅದೆಲ್ಲವನ್ನೂ ಮಾಡಲಾಗಿದೆ. ನಮ್ಮ ಸ್ಥಳೀಯರಿಬ್ಬರನ್ನು ಪತ್ತೆ ಮಾಡುವುದು ಸಾಧ್ಯವಾಗಿಲ್ಲವೆಂದು ನಮಗೂ ನೋವಿದೆ. ಇನ್ನೇನಾದರೂ ಮಾಡಬಹುದಾ ಎನ್ನುವ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸುತ್ತೇವೆ. ತಜ್ಞರ ಸಲಹೆ ಪಡೆದು ಇನ್ನೇನಾದರೂ ಮಾಡುವುದಿದ್ದರೂ ಸರ್ಕಾರ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದ ಸಚಿವರು, ಗಂಗಾವಳಿ ನದಿಯಲ್ಲಿ ಸಂಗ್ರಹವಾದ ಮಣ್ಣು ತೆರವುಗೊಳಿಸುವ ಬಗ್ಗೆ ಸಂಬಂಧಪಟ್ಟ ತಜ್ಞರಿಂದ ವರದಿ ಪಡೆಯುತ್ತೇನೆ. ಪ್ರವಾಹ ಸಂಭವವಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.