ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನೆನೆದ ಗೋಡೆ ಕುಸಿದು ಮರಣ ಹೊಂದಿದ್ದ ವೆಂಕಟಾಪುರ ಗ್ರಾಮದ ಸಿದ್ದರ ಕಾಲೋನಿಯ ಯಲ್ಲಪ್ಪ ರಾಮಣ್ಣ ಹಿಪ್ಪಿಯವರ (45) ಅವರ ಮನೆಗೆ ಸಚಿವ ಸಂತೋಷ ಲಾಡ್ ಸೋಮವಾರ ಭೇಟಿ ನೀಡಿ ಯಲ್ಲಪ್ಪ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.ಖಾಲಿ ಇರುವ ಪಕ್ಕದ ಮನೆಯ ಗೋಡೆ ಕುಸಿದು ಸ್ಥಳದಲ್ಲಿದ್ದ ಯಲ್ಲಪ್ಪ ಹಿಪ್ಪಿಯವರ ಮರಣ ಹೊಂದಿ, ಅವರ ಹೆಂಡತಿ ಹನಮವ್ವ ಹಿಪ್ಪಿಯವರ (40) ಹಾಗೂ ಮಗಳು ಯಲ್ಲವ್ವ(15) ತೀವ್ರವಾಗಿ ಗಾಯಗೊಂಡಿದ್ದರು. ಹನುಮವ್ವ ಹಾಗೂ ಯಲ್ಲವ್ವ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಗೋಡೆ ಕುಸಿತದಿಂದ ಮರಣಹೊಂದಿದ್ದ ಯಲ್ಲಪ್ಪ ಅವರ ಕುಟುಂಬಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ₹ 4 ಲಕ್ಷ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹1 ಲಕ್ಷ ಸೇರಿ ಒಟ್ಟು ₹ 5 ಲಕ್ಷ ಗಳ ಪರಿಹಾರವನ್ನು ವಿತರಿಸಲಾಗಿದೆ. ಜೊತೆಗೆ ತಾವೂ ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದೇನೆ ಎಂದರು.
ಸುಮಾರು 30 ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಇಂದಿರಾ ಆವಾಸ್ ಯೋಜನೆಯಡಿ ನವಗ್ರಾಮ ನಿರ್ಮಿಸಿ, ಮನೆಗಳನ್ನು ಕಟ್ಟಿಸಲಾಗಿತ್ತು. ಕಾಲಾಂತರದಲ್ಲಿ ವಲಸೆ ಬಂದ ಹಾಗೂ ಗ್ರಾಮದ ಮನೆರಹಿತ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ. ಇವರಿಗೆ ಹಕ್ಕು ಪತ್ರ ನೀಡಲು ಅನುವಾಗುವಂತೆ ಸಿದ್ದರ ಉಪಗ್ರಾಮ ಘೋಷಿಸಬೇಕೆಂದು ಸಚಿವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಸ್ಥಳೀಯ ಶಾಸಕರಾದ ವಿನಯ ಕುಲಕರ್ಣಿ ಸೂಚನೆಯಂತೆ ಸಿದ್ದರ ಉಪಗ್ರಾಮ ಘೋಷಣೆಗೆ ಈಗಾಗಲೇ ಕ್ರಮವಹಿಸಲಾಗಿದೆ. ಈ ಸಂಬಂಧಿತ ಕಡತ ತಹಸೀಲ್ದಾರ್ ಹಂತದಲ್ಲಿದ್ದು, ಶೀಘ್ರದಲ್ಲಿ ಕಂದಾಯ ಇಲಾಖೆಗೆ ಸಲ್ಲಿಸಿ, ಸಿದ್ದರ ಉಪಗ್ರಾಮ ಮಾಡಲಾಗುತ್ತದೆ. ಈ ಉಪಗ್ರಾಮ ವ್ಯಾಪ್ತಿಯ 32 ಕುಟುಂಬಗಳಿಗೆ ಹಕ್ಕು ಪತ್ರ, ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕಾಳಜಿ ಕೇಂದ್ರಕ್ಕೆ ಸಚಿವರ ಭೇಟಿಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವೆಂಕಟಾಪುರ ಗ್ರಾಮದ ಸಿದ್ದರ ಸಮುದಾಯ ಭವನದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಸಂಜೆಯಿಂದ ಆರಂಭಿಸಿರುವ ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಕೇಂದ್ರದಲ್ಲಿ ಸಿದ್ದರ ಸಮುದಾಯದ ಸುಮಾರು 32 ಕುಟುಂಬಗಳು ಆಶ್ರಯ ಪಡೆದಿವೆ. ಇವರೆಲ್ಲರೂ ಗುಡಿಸಲು, ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ. ಮಳೆ ನಿಲ್ಲುವವರೆಗೆ ಕಾಳಜಿ ಕೇಂದ್ರದಲ್ಲಿ ಸುರಕ್ಷಿತವಾಗಿ ಉಳಿಯುವಂತೆ ನಿರಾಶ್ರಿತರಲ್ಲಿ ಮನವಿ ಮಾಡಿದ ಸಚಿವರು, ಕಾಳಜಿ ಕೇಂದ್ರದಲ್ಲಿ ಊಟ, ಉಪಹಾರ, ಚಹಾ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಗತ್ಯವಿದ್ದಲ್ಲಿ ಆರೋಗ್ಯ ತಪಾಸಣೆ, ಔಷಧಿ ವಿತರಣೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆಗೆ ಭೇಟಿಲಾಡ್ ಅವರು ವೆಂಕಟಾಪುರ ಗ್ರಾಮ ಭೇಟಿ ನಂತರ ಗಾಯಾಳುಗಳು ದಾಖಲಾಗಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಘಟನೆಯಲ್ಲಿ ಗಾಯಗೊಂಡಿರುವ ಹನಮವ್ವ ಹಿಪ್ಪಿಯವರ, ಯಲ್ಲವ್ವ ಹಿಪ್ಪಿಯವರ ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಉತ್ತಮ ಆರೈಕೆ ಮಾಡುವಂತೆ ಜಿಲ್ಲಾ ಶಸ್ತ್ರ ಡಾ. ಸಂಗಪ್ಪ ಗಾಬಿ ಅವರಿಗೆ ನಿರ್ದೇಶಿಸಿದರು. ಸಚಿವರೊಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಗುಳೇದಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ ಹೊಸಮನಿ, ಉಪಾಧ್ಯಕ್ಷ ಚಂದ್ರಶೇಖರ ಡೊಕ್ಕನ್ನವರ, ಪಿಡಿಓ ಲೀಲಾವತಿ ಓಲೆಕಾರ, ಗ್ರಾಮ ಆಡಳಿತಾಧಿಕಾರಿ ಅರವಿಂದ ಚವ್ಹಾಣ ಇದ್ದರು.
ಮತ್ತೊಮ್ಮೆ ಟೆಂಡರ್..ಅಳ್ನಾವರದ ಹುಲಿಕೇರಿಯ ಇಂದಿರಮ್ಮನ ಕೆರೆಯ ಎಡದಂಡೆ ಕಾಲುವೆ ಕಾಮಗಾರಿಯನ್ನು ಟೆಂಡರ್ ಪಡೆದ ಗುತ್ತಿಗೆದಾರರು ಕಾಮಗಾರಿ ಮಾಡದೇ ಉಪ ಗುತ್ತಿಗೆ ನೀಡಿದ್ದಾರೆ. ಇದು ತಪ್ಪು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಟೆಂಡರ್ ಕರೆಯಬೇಕಿದ್ದು ಕಾಮಗಾರಿ ವಿಳಂಬವಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಲು ಕ್ರಮ ವಹಿಸಲಾಗುತ್ತದೆ.
-ಸಂತೋಷ ಲಾಡ್, ಸಚಿವರು