ಕನ್ನಡಪ್ರಭ ವಾರ್ತೆ ವಿಜಯಪುರ

ಸಚಿವ ಎಂ.ಬಿ.ಪಾಟೀಲರು ತಮಗೆ ಕೊಟ್ಟ ಜಲಸಂಪನ್ಮೂಲ ಖಾತೆಯಿಂದ ಜಿಲ್ಲೆಯಲ್ಲಿ ನೀರಾವರಿಯಲ್ಲಿ ಕ್ರಾಂತಿ ಮಾಡಿ ಜಿಲ್ಲೆಯ ರೈತಾಪಿ ಜನರಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರಿಗೆ ಗೃಹ ಸಚಿವರಾದಾಗ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆ ಮಾಡಿ ಪೊಲೀಸ್‌ ಇಲಾಖೆ ಸಿಬ್ಬಂದಿ ನೆನಪಿಟ್ಟುಕೊಳ್ಳುವ ಕಾರ್ಯ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.

ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಚಿವ ಸಂಪುಟದಲ್ಲಿ ಬೃಹತ್ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವರಾದ ನಂತರ ವಿಜಯಪುರಕ್ಕೆ ಆಗಮಿಸಿದ ಸಚಿವ ಎಂ.ಬಿ.ಪಾಟೀಲ, ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಬಾಗಲಕೋಟೆ ಶಾಸಕ ಉಮೇಶ ಮೇಟಿ ಅವರನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೃಹತ್ ಕೈಗಾರಿಕೆ ಸಚಿವರಾಗಿ ಜಿಲ್ಲೆಗೆ ಅನೇಕ ಕೈಗಾರಿಕೆ ತರುವ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೊಟ್ಟ ಸಚಿವ ಸ್ಥಾನ ಉತ್ಸುಕತೆಯಿಂದ ಬಳಕೆ ಮಾಡುವ ಸಚಿವರೆಂದರೆ ಎಂ.ಬಿ.ಪಾಟೀಲರು. ಇವರ ಮಾರ್ಗದರ್ಶನದಲ್ಲಿ ನಾನು ಕೂಡ ಎಲ್ಲರ ಜೊತೆಗೂಡಿ ಸಮಾಜ ಸೇವೆಯಲ್ಲಿ ತೊಡಗುತ್ತೇನೆ ಎಂದರು.

ಸಚಿವ ಎಂ.ಬಿ. ಪಾಟೀಲ ಮಾತನಾಡಿ, ನಾನು ಶಾಸಕನಾಗಿ, ಸಚಿವನಾಗಬೇಕಾದರೆ ತಮ್ಮೆಲ್ಲರ ಸೇವೆ ಅಮೂಲ್ಯವಾದದ್ದು. ನಾನು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯಕ್ಕೆ ಬಂದು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರ ಜೊತೆ ಚರ್ಚಿಸಲು ಬಂದಿದ್ದೆ. ಆದರೆ ಅಧ್ಯಕ್ಷರು ಮಂಟಪ ಹಾಕಿ ಅಭಿನಂದನಾ ಸನ್ಮಾನ ಮಾಡಿದರು ಎಂದರು.


ಈ ವೇಳೆ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಬ್ಲಾಕ್ ಅಧ್ಯಕ್ಷ ಜಮೀರ್ ಬಕ್ಷಿ, ಎಸ್.ಎಂ. ಪಾಟೀಲ ಗಣಿಹಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪುರಮಠ, ಚಾಂದಸಾಬ ಗಡಗಲಾವ, ಮಹ್ಮದರಫೀಕ ಟಪಾಲ, ಡಾ.ಪ್ರಭುಗೌಡ ಲಿಂಗದಳ್ಳಿ, ಎಂ.ಎಂ.ಮುಲ್ಲಾ, ವಸಂತ ಹೊನಮೋಡೆ, ಆರತಿ ಶಾಹಪೂರ, ರಮೇಜಾ ನದಾಫ, ವಿದ್ಯಾರಾಣಿ ತುಂಗಳ ಇದ್ದರು.