ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ಜೂನ್‌ 3ರಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಸಂಪುಟ ಸಭೆಯಲ್ಲಿ 6 ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದ್ದ ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಘೋಷಣೆಯ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಯೋಜನೆ ಅನುಷ್ಠಾನಕ್ಕೆ ಬಾರದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸಾರಿಗೆ ಇಲಾಖೆಗೆ ಇನ್ನೂ ಅಧಿಕೃತವಾಗಿ ಸುತ್ತೋಲೆ ಬಾರದಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಹೀಗಾಗಿ ಈ ಕೂಡಲೇ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಭರವಸೆ ನೀಡಿರುವ ಮುಖ್ಯಮಂತ್ರಿಗಳ ಭರವಸೆಯನ್ನು ಅನುಷ್ಠಾನಕ್ಕೆ ತರುವಂತೆ ಪೋಷಕರು ಕೂಡ ಒತ್ತಾಯಿಸುತ್ತಿದ್ದಾರೆ.

ರಾಜ್ಯದಲ್ಲಿ ಯುವ ಯುಗ ಪ್ರಾರಂಭಿಸಲಾಗುವುದು, ಯುವ ಕೇಂದ್ರಿತ ಸೇರಿ ಒಟ್ಟು 6 ನಿರ್ಣಯಗಳನ್ನು ಘೋಷಿಸಿದ್ದರು. ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌, ರಾಜ್ಯಾದ್ಯಂತ ಹತ್ತು ಸಾವಿರ ಯುವ ಸಂಘಗಳ ರಚನೆ, ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ, ಬಿ ಖಾತಾ ದಿಂದ ಎ ಖಾತಾಗೆ ಬದಲಾವಣೆ, ಒಸಿ, ಸಿಸಿ ಇಲ್ಲದಿದ್ದರೂ ನೀರು ಮತ್ತು ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಸೇರಿ ಬೆಂಗಳೂರು ರಸ್ತೆಗಳಿಗೆ ₹ 2,000 ಕೋಟಿ ಅನುದಾನದ 6 ಹೊಸ ಯೋಜನೆಗಳನ್ನು ಘೋಷಿಸಿದ್ದರು. ಆದರೆ, ಘೋಷಣೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬಡ ವಿದ್ಯಾರ್ಥಿಗಳ ಪಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.ರಾಜ್ಯದಲ್ಲಿ ಸ್ತ್ರೀಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣದ ಅವಕಾಶವಿದೆ. ಇನ್ನು ಹೊಸ ಯೋಜನೆ ಘೋಷಣೆಯಿಂದಾಗಿ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣದ ಪಾಸ್‌ ವಿಸ್ತರಣೆಯಾಗುತ್ತದೆ ಎಂದು ನಂಬಲಾಗಿತ್ತು. ಆದರೆ, 6 ದಿನಗಳಾದರೂ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ಗಳು ದೊರಕುತ್ತಿಲ್ಲ. ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ₹ 1050 ಹಣವನ್ನು ಭರಿಸಿ ಬಸ್‌ ಪಾಸ್‌ ಪಡೆಯಬಹುದಾಗಿದ್ದು, ಪ್ರೌಢಶಾಲೆ ವಿದ್ಯಾರ್ಥಿಗಳು ₹ 750 ಶುಲ್ಕದೊಂದಿಗೆ ಪಾಸ್‌ ಪಡೆಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಯೋಜನೆಯಿಂದ ರಾಜ್ಯದ 10 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ, ಇದಕ್ಕಾಗಿ ₹ 1,700 ಕೋಟಿ ವೆಚ್ಚ ಹಾಗೂ ಉಚಿತ ವಿದ್ಯುತ್‌ ರೀತಿ ಸ್ಕೀಮ್‌ ಸಾರಾಸಗಟಾಗಿ ಎಲ್ಲ ವಿದ್ಯಾರ್ಥಿಗಳಿಗೆ ಲಾಭವಾಗಲಿದ್ದು, ಅರ್ಜಿ ಸಲ್ಲಿಸಿದವರಿಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ ಎಂದೆಲ್ಲ ಸರ್ಕಾರ ಹೇಳಿತ್ತು. ಆದರೆ, ಇದು ವರೆಗೂ ಯೋಜನೆ ಜಾರಿಗೆ ಅಧಿಕೃತ ಆದೇಶ ಹೊರ ಬರದ ಕಾರಣ ಶುಲ್ಕ ಪಾವತಿಸಿ ಪಾಸ್‌ಗಳನ್ನು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರದ ಅಧಿಕೃತ ಆದೇಶ (ಸುತ್ತೋಲೆ) ಇನ್ನೂ ಬಂದಿಲ್ಲ. ಆದ್ದರಿಂದ ಮೊದಲಿನಂತೆ ಕಾಲೇಜು ವಿದ್ಯಾರ್ಥಿಗಳಿಗೆ ₹ 1050 ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ₹ 750 ಶುಲ್ಕ ಭರಿಸಿ ಬಸ್‌ ಪಾಸ್‌ಗಳನ್ನು ಪಡೆಯಬಹುದಾಗಿದೆ. ಸರ್ಕಾರದಿಂದ ಸಧ್ಯದಲ್ಲೇ ಆದೇಶ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಆದೇಶ ಹೊರ ಬಂದ ನಂತರ ಪಾಲನೆಯಾಗಲಿದೆ. ಈಗಾಗಲೇ ಬಸ್‌ ಪಾಸ್‌ಗಳನ್ನು ಪಡೆದ ವಿದ್ಯಾರ್ಥಿಗಳು ಸರ್ಕಾರದ ಆದೇಶ ವಿದ್ದಲ್ಲಿ ತುಂಬಿದ ಹಣವನ್ನು ಮರು ಪಾವತಿ ಮಾಡಲಾಗುವುದು ಎಲ್ಲದಕ್ಕೂ ಮೊದಲು ಸುತ್ತೋಲೆ ಬರಬೇಕು.

-ಎಸ್‌.ಬಿ.ಗಸ್ತಿ


ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ ಜಮಖಂಡಿ.ಶಾಲೆ, ಕಾಲೇಜುಗಳು ಪ್ರಾರಂಭವಾಗಿದೆ. ಸರ್ಕಾರ ಘೋಷಿಸಿರುವಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವ ವ್ಯವಸ್ಥೆ ಕೂಡಲೇ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರದ ಆದೇಶ ಬರುವವರೆಗೆ ಹಿಂದಿವ ವರ್ಷದ ಪಾಸ್‌ಗಳನ್ನು ಬಳಸಲು ಅವಕಾಶ ಮಾಡಿ ಕೊಡಬೇಕು. ಸರ್ಕಾರದ ಘೋಷಣೆ ಸಂತಸ ತಂದಿದೆ. ಆದರೂ ಸದ ಪಾಸ್‌ಗಳನ್ನು ಪಡೆಯಲು ಹಣ ಸಂದಾಯ ಮಾಡಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

-ಗೋಪಾಲ ಬಳಗಾರ,
ಪಾಲಕರು.