ಕೊಡಗಿನ ಹೋಂ ಸ್ಟೇವೊಂದರಲ್ಲಿ ಅಮೆರಿಕದ ಪ್ರವಾಸಿ ಮಹಿಳೆ ಮೇಲೆ ನಡೆದ ಅತ್ಯಾ*ರ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ಎಲ್ಲ ದಾಖಲೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.

ಬೆಂಗಳೂರು : ಕೊಡಗಿನ ಹೋಂ ಸ್ಟೇವೊಂದರಲ್ಲಿ ಅಮೆರಿಕದ ಪ್ರವಾಸಿ ಮಹಿಳೆ ಮೇಲೆ ನಡೆದ ಅತ್ಯಾ*ರ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ಎಲ್ಲ ದಾಖಲೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.

ಪ್ರಕರಣ ಸಂಬಂಧ ಪೊಲೀಸರಿಗೆ ಮಾಹಿತಿ ನೀಡದ ಮತ್ತು ಸಂತ್ರಸ್ತೆ ಕೊಠಡಿಯಿಂದ ಹೊರ ಹೋಗದಂತೆ ಮಾಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಹೋಂ ಸ್ಟೇ ಮಾಲೀಕ ಪೊನ್ನಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರ ಪರ ವಕೀಲರು ಕೋರಿದರು.

ಅದಕ್ಕೆ ಒಪ್ಪದ ನ್ಯಾಯಪೀಠ, ವಿದೇಶಿ ಪ್ರವಾಸಿ ಮಹಿಳೆ ಮೇಲೆ ಅತ್ಯಾ*ರ ನಡೆದಿರುವುದು ಬಹಳ ಗಂಭೀರ ವಿಷಯ. ಪ್ರಕರಣದ ದಾಖಲೆ ಪರಿಶೀಲಿಸದೆ ನೇರವಾಗಿ ತಡೆಯಾಜ್ಞೆ ನೀಡಲಾಗದು. ಜೂ.10ರೊಳಗೆ ಪ್ರಕರಣ ಸಂಬಂಧ ಈವರೆಗೆ ನಡೆಸಿರುವ ತನಿಖೆಯ ಸಂಪೂರ್ಣ ದಾಖಲೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಪೊನ್ನಪ್ಪ ಪರ ವಕೀಲರು, ಅರ್ಜಿದಾರರು ಅತ್ಯಾ*ರವೆಸಗಿಲ್ಲ. ಅವರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ.‌ ಘಟನೆ ನಡೆದ ಸಮಯದಲ್ಲಿ ಅವರು ಸ್ಥಳದಲ್ಲಿರಲಿಲ್ಲ. ಇದಕ್ಕೆ ಸಿಸಿಟಿವಿ ದೃಶ್ಯಾವಳಿ ಒದಗಿಸುವುದಾಗಿ ತಿಳಿಸಿದರು.

ಸರ್ಕಾರ ಪರ ವಕೀಲರು ವಾದಿಸಿ, ಹೋಂಸ್ಟೇ ಮಾಲೀಕರು ಸಂತ್ರಸ್ತೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚು ದಿನಗಳ ಕಾಲ ಹೋಂಸ್ಟೇನಲ್ಲಿ ಉಳಿಯುವಂತೆ ಒತ್ತಾಯಿಸಿದ್ದರು. ಸಂತ್ರಸ್ತೆಯನ್ನು ಹೊರಗಿನವರೊಂದಿಗೆ ಸಂಪರ್ಕ ಸಾಧಿಸದಂತೆ ತಡೆದಿದ್ದರು ಎಂದು ಆರೋಪಿಸಿದರು.

ಪ್ರಕರಣದ ವಿವರ:

ಅರ್ಜಿದಾರ ಮಾಲೀಕತ್ವದ ಕೊಡಗಿನ ಹೋಂ ಸ್ಟೇಗೆ ಆಗಮಿಸಿದ ಅಮೆರಿಕ ಪ್ರವಾಸಿ ಮಹಿಳೆಗೆ ಹೋಂ ಸ್ಟೇ ನೌಕರ ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ, ಆಕೆ ಪ್ರಜ್ಞೆ ತಪ್ಪಿದ ಮೇಲೆ ಅತ್ಯಾ*ರ ಎಸಗಿದ್ದಾನೆ ಎನ್ನಲಾದ ಘಟನೆ ಏ.12ರಂದು ನಡೆದಿದೆ. ಈ ಸಂಬಂಧ ಕುಟ್ಟ ಠಾಣಾ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದರು.‌

ಪ್ರಕರಣದ ಸಂತ್ರಸ್ತೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚು ದಿನಗಳ ಕಾಲ ಹೋಂಸ್ಟೇನಲ್ಲಿ ಉಳಿಯುವಂತೆ‌ ಮಾಡಿದ ಹಾಗೂ ಹೊರಗಿನವರೊಂದಿಗೆ ಸಂಪರ್ಕ ಸಾಧಿಸದಂತೆ ಮಾಡಿದ ಆರೋಪದ ಮೇಲೆ‌ ಅರ್ಜಿದಾರರನ್ನು 2026ರ ಏ‌.19ರಂದು ಬಂಧಿಸಲಾಗಿತ್ತು. ಮೇ 2ರಂದು ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ಎಫ್ ಐ ಆರ್ ರದ್ದುಪಡಿಸಲು ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು

ಇದೀಗ ಎಫ್ ಐ ಆರ್ ರದ್ದುಪಡಿಸಲು ಕೋರಿ ಹೈಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು,‌ ಯಾವುದೇ ತಪ್ಪು ಮಾಡದ ತಮ್ಮನ್ನು ಬಂಧಿಸಲಾಗಿದೆ. ಇದರಿಂದ ತಮ್ಮಮೂಲಭೂತ ಹಕ್ಕು ಆದ ವೈಯಕ್ತಿಕ ಸ್ವಾತಂತ್ರ್ಯ ಉಲ್ಲಂಘನೆಯಾಗಿದೆ. ಮತ್ತೊಂದೆಡೆ ಹೋಂ ಸ್ಟೇ ವ್ಯಾಪಾರಕ್ಕೆ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ 15 ಲಕ್ಷ ರು. ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು. ತಮ್ಮ ಬಂಧನವನ್ನು ಸಂವಿಧಾನಬಾಹಿರ ಎಂಬುದಾಗಿ ಘೋಷಿಸಬೇಕು ಕೋರಿದ್ದಾರೆ.