ಸಾರಾಂಶ
ಉಪನಗರ ರೈಲ್ವೆ ಯೋಜನೆಯ ಚಿಕ್ಕಬಾಣಾವಾರ- ಬೈಯ್ಯಪ್ಪನಹಳ್ಳಿ ‘ಮಲ್ಲಿಗೆ’ ಕಾರಿಡಾರ್ ವಿಳಂಬ ಕಾಮಗಾರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಗುತ್ತಿಗೆದಾರ ಸಂಸ್ಥೆ ಎಲ್ ಆ್ಯಂಡ್ ಟಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಉಪನಗರ ರೈಲ್ವೆ ಯೋಜನೆಯ ಚಿಕ್ಕಬಾಣಾವಾರ- ಬೈಯ್ಯಪ್ಪನಹಳ್ಳಿ ‘ಮಲ್ಲಿಗೆ’ ಕಾರಿಡಾರ್ ವಿಳಂಬ ಕಾಮಗಾರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಗುತ್ತಿಗೆದಾರ ಸಂಸ್ಥೆ ಎಲ್ ಆ್ಯಂಡ್ ಟಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಅವರು ಮಂಗಳವಾರ ಖನಿಜ ಭವನದಲ್ಲಿ ನಡೆದ ಉಪನಗರ ರೈಲ್ವೆ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗುತ್ತಿಗೆ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡರು.
ಈಗಿನ ಕಾಮಗಾರಿ ಸ್ಥಿತಿ ಗಮನಿಸಿದರೆ 2025ರ ಆಗಸ್ಟ್‌ಗೆ ಮೊದಲ ಕಾರಿಡಾರ್ ಮುಗಿಯುವುದು ಅನುಮಾನ. ಈ ಕೇವಲ ಶೇಕಡ 28ರಷ್ಟು ಭೌತಿಕ ಹಾಗೂ ಶೇ.22ರಷ್ಟು ಆರ್ಥಿಕ ಪ್ರಗತಿ ಆಗಿದೆ. ಒಟ್ಟು ₹459 ಕೋಟಿ ಆರ್ಥಿಕ ಪ್ರಗತಿ ಸಾಧಿಸಬೇಕಾಗಿತ್ತು. ಆದರೆ, ಈಗ ಕೇವಲ ₹86 ಕೋಟಿ ಕೆಲಸ ನಡೆಯುತ್ತಿದೆ. ಯೋಜನೆ ಪ್ರಕಾರ ತಿಂಗಳಿಗೆ ಕನಿಷ್ಠ 55 ‘ಯು ಗರ್ಡರ್’, 22 ಪೈಯರ್, 42 ಐ-ಗರ್ಡರ್ ನಿರ್ಮಿಸಬೇಕು. ಅಂದರೆ ತಿಂಗಳಿಗೆ ಕನಿಷ್ಠ ₹54 ಕೋಟಿ ವೆಚ್ಚ ಮಾಡಬೇಕು. ಆದರೆ, ಈಗ ಕೇವಲ ₹9 ಕೋಟಿ ಬಿಲ್ ಮಾಡುತ್ತಿದ್ದು, ಇದು ತೀರಾ ಕಡಿಮೆ ಎಂದು ಹೇಳಿದರು.ಕೆ-ರೈಡ್ ಅಧಿಕಾರಿಗಳು ವಾರ ಮತ್ತು ತಿಂಗಳ ಆಧಾರದಲ್ಲಿ ಕಾಮಗಾರಿ ಪ್ರಗತಿ ಪರಿಶೀಲಿಸಬೇಕು. ವಿಳಂಬ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ಸರ್ಕಾರದಿಂದ ಕಾಮಗಾರಿ ಅವಧಿ ವಿಸ್ತರಿಸುವುದಿಲ್ಲ. ಗುತ್ತಿಗೆದಾರ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ವಿಳಂಬದಿಂದ ಆಗುವ ನಷ್ಟವನ್ನು ಗುತ್ತಿಗೆದಾರ ಸಂಸ್ಥೆಯಿಂದಲೇ ವಸೂಲಿ ಮಾಡಬೇಕಾಗುತ್ತದೆ ಎಂದರು.
ಹೀಲಲಗಿ- ರಾಜಾನುಕುಂಟೆ ಕನಕ ಕಾರಿಡಾರ್ ಯೋಜನೆ ಕೆಲಸವನ್ನೂ ಎಲ್ ಆ್ಯಂಡ್ ಟಿ ಪಡೆದಿದೆ. ವಿದ್ಯುತ್, ಚರಂಡಿ ಪೈಪ್ ಸ್ಥಳಾಂತರಿಸುವ ಕೆಲಸ ಶೇ.65ರಷ್ಟು ಮುಗಿದಿದೆ. ಇದಲ್ಲದೆ, ಗರ್ಡರ್ ನಿರ್ಮಾಣ ಯಾರ್ಡ್ ಸ್ಥಾಪಿಸಲು ಜಾಗ ಗುರುತಿಸಲಾಗಿದೆ. ಇದರ ಕಿರು ಸೇತುವೆ ಕಾಮಗಾರಿ ಚುರುಕುಗೊಳಿಸುವಂತೆ ಸಚಿವರು ಸೂಚಿಸಿದರು.ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕಿ ಡಾ। ಎನ್.ಮಂಜುಳಾ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಇ್ದದರು.
---ಫೋಟೋ
ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಉಪನಗರ ರೈಲ್ವೆ ಯೋಜನೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.