ಸಾರಾಂಶ
ರಾಣಿಬೆನ್ನೂರು: ಒಪಿಎಸ್ ಜಾರಿ ಕುರಿತು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.ನಗರದ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ, ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಮತ್ತು ಪ್ರತಿಭಾ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಇಲಾಖೆ ನಿರ್ವಹಣೆ ತುಂಬಾ ಜವಾಬ್ದಾರಿಯದ್ದಾಗಿದೆ. ಇಲಾಖೆಯಡಿ 1.16 ಕೋಟಿ ಮಕ್ಕಳು ಅಧ್ಯಯನ ನಡೆಸುತ್ತಿದ್ದು 56 ಸಾವಿರ ಸರ್ಕಾರಿ ಶಾಲಾ ಕಾಲೇಜುಗಳಿವೆ. ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವೆಬ್ ಕ್ಯಾಸ್ಟಿಂಗ್ ಜಾರಿಗೆ ತರಲಾಯಿತು. 116 ಲಕ್ಷ ಮಕ್ಕಳು ಸ್ವಂತ ಶಕ್ತಿ ಮೇಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಮ್ಮ ತಂದೆ ಬಂಗಾರಪ್ಪ ಶಿಕ್ಷಣದ ಮಹತ್ವ ಅರಿತಿದ್ದರು. ಅವರ ಹಾದಿಯಲ್ಲಿ ನಾನು ಕೂಡ ಕೆಲಸ ಮಾಡುತ್ತಿರುವೆ.ಅನುದಾನಿತ ಶಾಲೆಗಳ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಾಗುವುದು. 2016ರಿಂದ ಇಂದಿನವರೆಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ಅನುದಾನಿತ ಶಾಲೆಗಳ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ನೀಡುವ ವಿಚಾರ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ತುಂಬಲು ಸರ್ಕಾರ ಈಗಾಗಲೇ ಆದೇಶ ಮಾಡಿದೆ. ಆದರೆ ಒಳಮೀಸಲಾತಿ ಸಲುವಾಗಿ ಅದನ್ನು ತಡೆಹಿಡಿಯಲಾಗಿದೆ. ಆದ್ದರಿಂದ ಈ ಬಗ್ಗೆ ಶಿಕ್ಷಣ ಸಚಿವರು ಗಮನ ಹರಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಎಸ್ಸಿ, ಎಸ್ಟಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದ ವಿವಿಧ ಯೋಜನೆಯಡಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಸ್ಥಾಪಕ ಗೌರವಾಧ್ಯಕ್ಷೆ ಚಿತ್ರಕಲಾ ನಾಗರಾಜ್, ಅಧ್ಯಕ್ಷ ಎನ್. ರಾಜಗೋಪಾಲ್, ಡಿಡಿಪಿಐ ಮೋಹನ ದಂಡಿನ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಾಮಸುಂದರ ಅಡಿಗ, ಎನ್.ಶ್ರೀಧರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಮಾರಂಭದಲ್ಲಿ ರಾಜ್ಯ ಮಟ್ಟದ ಪ್ರತಿಭಾ ವಿದ್ಯಾರ್ಥಿ ಪ್ರಶಸ್ತಿಯನ್ನು ಹಾಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಗೌರವಾಧ್ಯಕ್ಷ ಡಾ.ಕೆ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂ.ಕೆ.ರಾಜು, ಬಿ.ಅಜಯ್, ಎಂ.ಕೆ.ರಾಜು, ಆರ್.ನಾಗರತ್ನ, ವಿಜಯಕುಮಾರ ವಪ್ಪಾರಿ, ಕರಾಅಪ್ರಾಶಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಹಲವಾಗಲ, ಮಾಲತೇಶ ಎಂ. ಎಸ್.ಎಚ್.ಪಾಟೀಲ, ಎಂ.ಎಚ್.ಪಾಟೀಲ, ಮಾಲತೇಶ ಚಲವಾದಿ, ಕಲ್ಯಾಣರಾವ ಬಿರಾದಾರ್, ಮಾರುತಿ ಲಮಾಣಿ, ಬಸವರಾಜ ನಾಯಕ, ಮಧು ಅಳಲಗೇರಿ, ಸುಧಾ ಕೋಟಿಹಾಳ, ಎಸ್.ಸಿ. ಹಿರೇಮಠ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.