ಸಚಿವ ಮಧು ಬಂಗಾರಪ್ಪ ಹೇರ್‌ ಕಟಿಂಗ್‌ ಖರ್ಚನ್ನ ಯುವ ಮೋರ್ಚಾದಿಂದ ಕೊಡಿಸುತ್ತೇವೆ: ಬಿವೈ ವಿಜಯೇಂದ್ರ

| Published : May 29 2024, 12:46 AM IST

ಸಚಿವ ಮಧು ಬಂಗಾರಪ್ಪ ಹೇರ್‌ ಕಟಿಂಗ್‌ ಖರ್ಚನ್ನ ಯುವ ಮೋರ್ಚಾದಿಂದ ಕೊಡಿಸುತ್ತೇವೆ: ಬಿವೈ ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಡುವಿನ ಹೇರ್‌ ಕಟಿಂಗ್‌ ಹೇಳಿಕೆ ಸಮರ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಡುವಿನ ಹೇರ್‌ ಕಟಿಂಗ್‌ ಹೇಳಿಕೆ ಸಮರ ಮುಂದುವರಿದಿದೆ.

ಎಲ್ಲ ಸಚಿವರೇ ಮಾದರಿಯಾಗಿರಬೇಕು, ಅದರಲ್ಲೂ ಶಿಕ್ಷಣ ಸಚಿವರು ಮಾದರಿಯಾಗಿರಲೇಬೇಕು, ಸಚಿವರ ಕೇಶ ವಿನ್ಯಾಸದ ಬಗ್ಗೆ ನಾನು ಹೇಳಿದ್ದಲ್ಲ, ಅವರ ಅಡ್ಡಾದಿಡ್ಡಿ ಕೇಶ ವಿನ್ಯಾಸದ ಬಗ್ಗೆ ದಾಣಗೆರೆಯಲ್ಲಿ ಶಿಕ್ಷಕರೇ ಹೇಳಿದ್ದಾರೆ. ಶಿಕ್ಷಕರು ಸಚಿವರ ಕೇಶ ವಿನ್ಯಾಯದ ಬಗ್ಗೆ ಹೊಂದಿರುವ ಅಭಿಪ್ರಾಯವನ್ನೇ ನಾನು ಪ್ರಾಮಾಣಿಕವಾಗಿ ಸಚಿವರಿಗೆ ತಿಳಿಸಲು ಯತ್ನಿಸಿದ್ದೇನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಈಶಾನ್ಯ ಪದವಿಧರ ಮತಕ್ಷೇತ್ರದ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲು ಕಲಬುರಗಿಗೆ ಆಗಮಿಸಿದ್ದ ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿ, ಹೇರ್‌ ಕಟಿಂಗ್‌ ವಿಚಾರವಾಗಿ ಎದುರಾದ ಪ್ರಶ್ನೆಗಳಿಗೆ ಉತ್ತರಿಸುತ್ತ, ಸಚಿವರ ಬಳಿ ಕಟಿಂಗ್‌ಗೆ ಹಣ ಇಲ್ಲವೆಂದಾದಲ್ಲಿ ಅದರ ಖರ್ಚನ್ನೆಲ್ಲ ಯುವ ಮೋರ್ಚಾದಿಂದ ಭರಿಸೋ ವ್ಯವಸ್ಥೆ ಮಾಡುತ್ತೇವೆಂದು ಲೇವಡಿ ಮಾಡಿದರು.

ಹೇರ್‌ ಕಟಿಂಗ್‌ ಮಾಡಿಸಿಕೊಂಡು, ಕೊಬ್ಬರಿ ಎಣ್ಣೆ ಹಚ್ಚಿಕೊಂಡು, ಶಿಸ್ತಾಗಿ ಬಾಚಿಕೊಂಡು ಮಧು ಬಂಗಾರಪ್ಪ ಬರಬೇಕು ಎಂದು ವಿಜಯೇಂದ್ರ ನೀಡಿದ್ದ ಹೇಳಿಕೆಗೆ ಸಿಡಿಮಿಡಿಗೊಂಡಿದ್ದ ಶಿಕ್ಷಣ ಸಚಿವರು, ನನಗೆ ಹೇರ್‌ ಕಟಿಂಗ್‌ ಮಾಡೋರು ಬಿಜಿ ಇದ್ದಾರೆ, ವಿಜಯೇಂದ್ರ ಫ್ರೀ ಇದ್ರೆ ಬಂದು ಹೇರ್‌ ಕಟಿಂಗ್‌ ಮಾಡಲಿ ಎಂದು ಟಾಂಗ್‌ ನೀಡಿದ್ದ ಬೆನ್ನಲ್ಲೇ ವಿಜಯೇಂದ್ರ ಕಟಿಂಗ್‌ ಖರ್ಚನ್ನೆಲ್ಲ ಕೊಡೋದಾಗಿ ಹೇಳುವ ಮೂಲಕ ಮಾತಲ್ಲೇ ಕುಟುಕಿದ್ದಾರೆ.

ಎಲ್ಲಾ ಸಚಿವರು ಮಾದರಿಯಾಗಿರಬೇಕು, ಅದರಲ್ಲೂ ಶಿಕ್ಷಣ ಸಚಿವರು ತುಸು ಹೆಚ್ಚಾಗಿಯೇ ಎಲ್ಲಾ ವಿಚಾರದಲ್ಲಿ ಮಾದರಿಯಾಗಿರಬೇಕು, ಆದರೆ ಮಧು ಬಂಗಾರಪ್ಪ ಕೇಶವಿನ್ಯಾಸ ಮಾಡಿಕೊಂಡಿದ್ದಾರೆ, ಅವರ ಕೇಶ ವಿನ್ಯಾಸದ ಬಗ್ಗೆ ನಾನಲ್ಲ, ದಾವಣಗೇರೆಯಲ್ಲಿ ಶಿಕ್ಷಕರೇ ಹಳಿದ್ದಾರೆ, ಶಿಕ್ಷಕರ ಮಾತನ್ನೇ ನಾನು ಪುನರಾವರ್ತಿಸಿದ್ದೇನೆಂದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯನ್ನ ಮಧು ಬಂಗಾರಪ್ಪ ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಸಮಯದಲ್ಲಿ, ಬೋರ್ಡ್‌ ಪರೀಕ್ಷೆ ವಿಚಾರ, ಶಿಕ್ಷಕರ ನೇಮಕಾತಿಗೆ ಹೊರಗುತ್ತಿಗೆಯಲ್ಲಿ ಯಾರನ್ನೆಲ್ಲ ನೇಮಕ ಮಾಡುವ ಜವಾಬ್ದರಿ ನೀಡಿದ್ದಾರೆ ಇ‍ನ್ನೆಲ್ಲ ಗಮನಿಸಿದರೆ ಮಧು ಬಂಗಾರಪ್ಪನವರಿಗೆ ಶಿಕ್ಷಣ ಇಲಾಖೆಯ ಬಗ್ಗೆ ಅದೆಷ್ಟು ಗಂಭೀರತೆ, ಗೌರವ ಇದೆ ಅನ್ನೋದು ಗೊತ್ತಾಗುತ್ತದೆ ಎಂದರು.

ಸಚಿವರ ಹೇರ್‌ ಕಟಿಂಗ್‌ ವಿಚಾರದಲ್ಲಿ ಶಿಕ್ಷಕರು ಹೇಳಿರೋ ಮಾತನ್ನ ನಾನು ಮಧು ಬಂಗಾರಪ್ಪಗೆ ಹೇಳಿದ್ದೇನೆ. ಮಧು ಬಂಗಾರಪ್ಪಗೆ ಹಣದ ಸಮಸ್ಯೆ ಇದ್ರೆ ನಮ್ಮ ಕಾರ್ಯಕರ್ತರಿಗೆ ಹೇಳ್ತೆನೆ, ನಮ್ಮ ಯುವ ಮೋರ್ಚಾದವರಿಗೆ ತಿಂಗಳಿಗೆ ಇಂತಿಷ್ಟು ಹಣ ಕೊಡಲು ಹೇಳುತ್ತೇನೆ. ಸಚಿವರು ಎಲ್ಲರಿಗೂ ಮಾದರಿಯಾಗಿರಲಿ ಅನ್ನೋ ವಿಚಾರದಲ್ಲಿ ನಾವು ಮಧು ಬಂಗಾರಪ್ಪ ಕಟ್ಟಿಂಗ್‌ಗಾಗಿ ತಿಂಗಳಿಗೆ ಇಂತಿಷ್ಟು ಹಣ ಕೊಡಲು ಯಾವುದೇ ಬೇಸರವಿಲ್ಲ ಎಂದು ವಿಜಯೇಂದ್ರ ಕುಟುಕಿದರು.