ಪರಿಹಾರ ವಿತರಿಸಿದ ಸಚಿವ ಮಂಕಾಳ ವೈದ್ಯ

| Published : Jul 21 2024, 01:24 AM IST

ಸಾರಾಂಶ

ಗುಡ್ಡಕುಸಿತದಿಂದ ಹಾನಿಯಾದ ಉಳುವರೆ ಗ್ರಾಮದ ಮೀನುಗಾರರಿಗೆ ಸರ್ಕಾರದ ವತಿಯಿಂದ ಎಲ್ಲಾ ಅಗತ್ಯ ನೆರವು ಒದಗಿಸಲು ಬದ್ಧ ಎಂದು ಸಚಿವ ಮಂಕಾಳು ವೈದ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಾರವಾರ

ಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡ ಕುಸಿತದಿಂದ ಹಾನಿಯಾದ ಉಳುವರೆ ಗ್ರಾಮದ ಮೀನುಗಾರರ ಕುಟುಂಬಗಳ 59 ಜನರಿಗೆ ತಲಾ ₹25000ರಂತೆ ₹14,75,000 ಮೊತ್ತದ ಚೆಕ್‌ ಅನ್ನು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶನಿವಾರ ವಿತರಿಸಿದರು.

ಗುಡ್ಡಕುಸಿತದಿಂದ ಹಾನಿಯಾದ ಉಳುವರೆ ಗ್ರಾಮದ ಮೀನುಗಾರರಿಗೆ ಸರ್ಕಾರದ ವತಿಯಿಂದ ಎಲ್ಲಾ ಅಗತ್ಯ ನೆರವು ಒದಗಿಸಲು ಬದ್ದವಾಗಿದ್ದು, ಈಗಾಗಲೇ ಇಲ್ಲಿನ ಜನರಿಗೆ ಅಗತ್ಯ ನಿವೇಶನ ನೀಡಲು ಸ್ಥಳ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

ಪ್ರಸ್ತುತ ತುರ್ತು ಕ್ರಮವಾಗಿ ಮೀನು ಬಲೆ, ದೋಣಿ ದುರಸ್ತಿ ಮತ್ತಿತರ ಕಾರ್ಯಗಳಿಗಾಗಿ ₹25000 ಪರಿಹಾರ ವಿತರಿಸಲಾಗಿದ್ದು, ಈ ಅವಘಡದಲ್ಲಿ ಮನೆ ಕಳೆದುಕೊಂಡವರಿಗೆ ₹1.20 ಲಕ್ಷ ಮತ್ತು ಮೃತಪಟ್ಟ ಕುಟುಂಬದ ವಾರಿಸುದಾರರಿಗೆ ₹5 ಲಕ್ಷ ಚೆಕ್ ವಿತರಿಸಲಾಗಿದ್ದು, ಮೀನುಗಾರಿಕಾ ಇಲಾಖೆ ವತಿಯಿಂದ ಇನ್ನೂ ಹೆಚ್ಚಿನ ಪರಿಹಾರ ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಈ ಭಾಗದ ಸಂತ್ರಸ್ತರಿಗೆ ಶಾಸಕರು ಮತ್ತು ತಾವು ₹10000 ವೈಯಕ್ತಿಕ ನೆರವು ಸಹ ಒದಗಿಸಲಾಗಿದ್ದು, ಇಲ್ಲಿನ ಜನತೆಯ ಸಂಕಷ್ಟಕ್ಕೆ ಪಕ್ಷ ಬೇಧ ಮರೆತು ಸದಾ ಸ್ಪಂದಿಸುವುದಾಗಿ ಸಚಿವರು ತಿಳಿಸಿದರು.

ಶಾಸಕ ಸತೀಶ್ ಸೈಲ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇರ್ಶಕ ಬಬಿನ್ ಬೋಪಣ್ಣ, ಉಪ ನಿರ್ದೇಶಕ ಪ್ರತೀಕ್, ಅಂಕೋಲಾ ತಹಸೀಲ್ದಾರ್ ಅನಂತ ಶಂಕರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಮತ್ತಿತರರು ಇದ್ದರು.

ಕಣ್ಮರೆಯಾದವರ ನಿರಂತರ ಶೋಧ: ಮಂಕಾಳ ವೈದ್ಯ

ಕನ್ನಡಪ್ರಭ ವಾರ್ತೆ ಕಾರವಾರಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡ ಕುಸಿತದಲ್ಲಿ ಸಿಲುಕಿರುವವನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ವತಿಯಿಂದ ನಿರಂತರವಾಗಿ ವ್ಯಾಪಕ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಶನಿವಾರ ಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡಕುಸಿತ ಪ್ರದೇಶಕ್ಕೆ ಭೇಟಿ ನೀಡಿ, ಗುಡ್ಡ ಕುಸಿತದಿಂದ ಬಿದ್ದಿರುವ ಮಣ್ಣು ತೆರವು ಪರಿಶೀಲನಾ ಕಾರ್ಯಾಚರಣೆ ವೀಕ್ಷಿಸಿ ಮಾತನಾಡಿದರು.ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿರುವವರನ್ನು ಹುಡುಕಲು ಜಿಲ್ಲಾಡಳಿತ ವತಿಯಿಂದ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ನಿರಂತರವಾಗಿ ಗುಡ್ಡದಿಂದ ಜಾರಿರುವ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ ಸುರತ್ಕಲ್‌ನ ಎನ್.ಐ.ಟಿ.ಕೆ.ಯಿಂದ ಆಗಮಿಸಿರುವ ತಜ್ಞರ ತಂಡ ರಾಡಾರ್ ಮೂಲಕ ಪತ್ತೆ ಕಾರ್ಯಚರಣೆ ಕೈಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿಶಾಮಕ ಇಲಾಖೆ ವತಿಯಿಂದ ಸಮೀಪದ ನದಿಯಲ್ಲಿಯೂ ಪತ್ತೆ ಕಾರ್ಯ ನಡೆಯುತ್ತಿದೆ. ಹೆಲಿಕ್ಯಾಪ್ಟರ್ ಮೂಲಕ ಕಾರ್ಯಾಚರಣೆ ಮಾಡಲು ಜಿಲ್ಲಾಡಳಿತ ಈಗಾಗಲೇ ಕ್ರಮ ಕೈಗೊಂಡಿದ್ದು ಹವಾಮಾನ ವೈಪರಿತ್ಯದ ಕಾರಣದಿಂದ ವಿಳಂಬವಾಗಿದ್ದು ಆದರೂ ಜಿಲ್ಲಾಡಳಿದ ಮೂಲಕ ಸರ್ವ ರೀತಿಯಲ್ಲೂ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಗುಡ್ಡ ಕುಸಿತ ಪ್ರದೇಶದ ಮೇಲ್ಬಾಗಕ್ಕೆ ಕ್ರೇನ್ ಮೂಲಕ ತೆರಳಿದ ಸಚಿವರು ಮತ್ತು ಶಾಸಕ ಸತೀಶ್ ಸೈಲ್ ರಕ್ಷಣಾ ಕಾರ್ಯಾಚರಣೆ ವೀಕ್ಷಿಸಿ ಅಗತ್ಯ ಸೂಚನೆಗಳನ್ನು ನೀಡಿದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಭಟ್ಕಳ ಉಪ ವಿಭಾಗಾಧಿಕಾರಿ ಡಾ. ನಯನ ಮತ್ತು ವಿವಿಧ ಅಧಿಕಾರಿಗಳು ಇದ್ದರು.