ಕೆಎಫ್‌ಡಿ ತಡೆಗೆ ಮುಂಜಾಗ್ರತೆ ವಹಿಸಲು ಸಚಿವ ಮಂಕಾಳ ವೈದ್ಯ ಸೂಚನೆ

| Published : Dec 24 2024, 12:49 AM IST

ಕೆಎಫ್‌ಡಿ ತಡೆಗೆ ಮುಂಜಾಗ್ರತೆ ವಹಿಸಲು ಸಚಿವ ಮಂಕಾಳ ವೈದ್ಯ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಮ್ಮ ಕೆಲಸ ಸರಿಯಾಗಿ ಮಾಡದಿದ್ದರೆ ಜಿಲ್ಲೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಅನುದಾನ ತರುವುದು ನಮ್ಮ ಕೆಲಸ. ಜನರ ಕೆಲಸ ಮಾಡಿಕೊಡುವುದು ನಿಮ್ಮ ಕೆಲಸ ಎಂದು ಅಧಿಕಾರಿಗಳಿಗೆ ಸಚಿವ ಮಂಕಾಳ ವೈದ್ಯ ಎಚ್ಚರಿಸಿದರು.

ಹೊನ್ನಾವರ: ಮಂಗನಕಾಯಿಲೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ, ಎಂಡೋಸಲ್ಫಾನ್ ಪೀಡಿತರ ಪಟ್ಟಿಯನ್ನು ಶೀಘ್ರವಾಗಿ ಸಿದ್ಧಪಡಿಸಿ ಮಾನವೀಯತೆ ತೋರಿ. ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಮ್ಮ ಕೆಲಸ ಸರಿಯಾಗಿ ಮಾಡದಿದ್ದರೆ ಜಿಲ್ಲೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಅನುದಾನ ತರುವುದು ನಮ್ಮ ಕೆಲಸ. ಜನರ ಕೆಲಸ ಮಾಡಿಕೊಡುವುದು ನಿಮ್ಮ ಕೆಲಸ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಬಿಇಒ ಜಿ.ಎಸ್. ನಾಯ್ಕ ಮಾತನಾಡಿ, ತಾಲೂಕಿನ 32 ಶಾಲೆಗಳಿಗೆ ಮಣ್ಣಿನ ಗೋಡೆ ಇದ್ದು, 51 ಶಾಲೆಗಳಿಗೆ ಕೊಠಡಿ ಅವಶ್ಯಕತೆ ಇದೆ. ಶಿಕ್ಷಕರ ವೈದ್ಯಕೀಯ ವೆಚ್ಚ ₹50 ಲಕ್ಷ ಬಾಕಿ ಉಳಿದಿದೆ ಎಂದರು.

ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ಫಲಿತಾಂಶ ಶೇ. 100ರಷ್ಟಾಗಬೇಕು. ಶಿಕ್ಷಣ, ಆರೋಗ್ಯಕ್ಕೆ ಯಾವುದೇ ಕೊರತೆ ಆಗದಂತೆ ಎಚ್ಚರ ವಹಿಸಿ ಎಂದರು. ಅಂಗನವಾಡಿ, ಶಾಲೆ ಕಟ್ಟಡಗಳ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸಚಿವರು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಾರಿ ಟ್ಯಾಂಕರ್‌ನಲ್ಲಿ ನೀರು ಕೊಡುವ ಪರಿಸ್ಥಿತಿ ಇರಬಾರದು. ಜೆಜೆಎಂ ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಮುಗಿಸಬೇಕೆಂದು ತಾಕೀತು ಮಾಡಿದರು.ಪಾರ್ಕಿಂಗ್ ಕಾರಣಕ್ಕೆ ವ್ಯಾಪಾರಸ್ಥರಿಗೆ, ಕಟ್ಟಡ ಮಾಲೀಕರಿಗೆ ತೊಂದರೆ ನೀಡಬೇಡಿ. ಆರ್‌ಟಿಐ ಮಾಹಿತಿ ಕೇಳಿದ್ದಾರೆ ಎಂದು ಕಾರಣವಿಟ್ಟುಕೊಂಡು ಕೆಲಸ ಮಾಡಿಕೊಡದೆ ತೊಂದರೆ ಕೊಡಬೇಡಿ ಎಂದರು. ಮಾಹಿತಿ ಕೇಳಿದವರಿಗೆ ಕಾಲಮಿತಿಯೊಳಗೆ ಸಮರ್ಪಕ ಉತ್ತರ ನೀಡಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.ತಾಲೂಕಿನಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿದ್ದಲ್ಲಿ ಅವುಗಳನ್ನು ಹುಡುಕಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಮಂಕಿ ಕಾಳಜಿ ಕೇಂದ್ರದ ವಿದ್ಯುತ್ ಬಿಲ್ ಬಾಕಿ ಇರುವ ಬಗ್ಗೆ ಅಧಿಕಾರಿಗಳು ವಿಷಯ ಪ್ರಸ್ತಾಪಿಸಿದರು. ಸಚಿವರು, ಸಂಬಂಧಪಟ್ಟ ಇಲಾಖೆಗೆ ಬಿಲ್ ಪಾವತಿಸುವಂತೆ ಸೂಚಿಸಿ. ಯಾವುದೇ ಇಲಾಖೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಕೂಡದು. ಬಿಲ್ ಬಾಕಿ ಇದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದರು.ರಸ್ತೆ, ಸೇತುವೆ, ಅಂಗನವಾಡಿ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕೆ ತೊಂದರೆ ನೀಡಬೇಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಶಾಲೆ ಮತ್ತು ಅಂಗನವಾಡಿ, ಸರ್ಕಾರಿ ಕಚೇರಿಗಳ ಆವಾರದಲ್ಲಿ ಆದಷ್ಟು ಹಣ್ಣಿನ ಗಿಡ ನೆಡುವ ಕೆಲಸ ಮಾಡಿ ಎಂದರು.ಕೃಷಿ ಇಲಾಖೆ, ಪಶುಸಂಗೋಪನೆ, ಕಟ್ಟಡ ಕಾರ್ಮಿಕ, ಪೊಲೀಸ್, ಸಾರಿಗೆ, ಅಬಕಾರಿ, ಬಂದರು ಇಲಾಖೆ ಸೇರಿದಂತೆ ವಿವಿಧ ಇಲಾಖೆ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗಧಿಕಾರಿ ಡಾ. ನಯನಾ ಎಸ್., ಜಿಪಂ ಯೋಜನಾಧಿಕಾರಿ ವಿನೋದ ಅಣ್ವೇಕರ್, ತಹಸೀಲ್ದಾರ್ ಪ್ರವೀಣ ಕರಾಂಡೆ, ತಾಲೂಕು ಪಂಚಾಯಿತಿ ಇಒ ಚೇತನಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಸದಸ್ಯರು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.