ಸಾರಾಂಶ
ರಾಜ್ಯದಲ್ಲಿ ಪ್ರತ್ಯೇಕವಾಗಿ ಕ್ರೀಡಾ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಮಂಗಳೂರಿನಲ್ಲಿ ಹೇಳಿದ್ದಾರೆ. ಅಂತರ್ ವಿವಿ ಕಬಡ್ಡಿ ಪಂದ್ಯದಲ್ಲಿ ಚಾಂಪಿಯನ್‌ಗಳಾದ ಮಂಗಳೂರು ವಿವಿ ತಂಡವನ್ನು ಸಚಿವರು ಗೌರವಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ನಮ್ಮ ದೇಶದಲ್ಲಿ ಇಷ್ಟು ದೊಡ್ಡ ಜನಸಂಖ್ಯೆ ಇದ್ದರೂ ಬೆರಳೆಣಿಕೆಯ ಕ್ರೀಡಾ ಸಾಧಕರಿರುವುದು ಬೇಸರದ ಸಂಗತಿ. ಆದ್ದರಿಂದ ಕ್ರೀಡೆಗೆ ಹೆಚ್ಚಿನ ಅವಕಾಶ, ಭದ್ರತೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರತ್ಯೇಕ ಕ್ರೀಡಾ ವಿವಿ ಸ್ಥಾಪನೆ ಚಿಂತನೆ ಸರ್ಕಾರದ ಮುಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಹೇಳಿದರು.ಮಂಗಳೂರು ವಿವಿ ಮಂಗಳಾ ಸಭಾಂಗಣದಲ್ಲಿ ಅಂತರ್ ವಿಶ್ವವಿದ್ಯಾನಿಲಯ ಕಬಡ್ಡಿ ಚಾಂಪಿಯನ್‌ಸಿಪ್ ಪ್ರಶಸ್ತಿ ಗೆದ್ದುಕೊಂಡ ಮಂಗಳೂರು ವಿವಿ ತಂಡದ ಸದಸ್ಯರನ್ನು ಶನಿವಾರ ಸನ್ಮಾನಿಸಿ ಮಾತನಾಡಿದರು.
ವಿಶ್ವವಿದ್ಯಾಲಯಗಳು ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆಯಾದರೂ ಇದರ ನಡುವೆ ಕ್ರೀಡಾ ಸ್ಪೂರ್ತಿಯನ್ನು ಬೆಳೆಸುವ ಕಾರ್ಯ ಆಗಬೇಕಿದೆ. ಶಿಕ್ಷಕ ವೃತ್ತಿ ಎನ್ನುವುದು ಅತ್ಯಂತ ಪವಿತ್ರವಾದ್ದು. ಉತ್ತಮ ಶಿಕ್ಷಣ ಕೊಟ್ಟು ಮೌಲ್ಯಾಧಾರಿತ ವ್ಯಕ್ತಿಯನ್ನು ರೂಪಿಸುವ ಜವಬ್ಧಾರಿಯೂ ಅವರ ಮೇಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೊಫೆಸರ್, ಡೀನ್ ಯಾವಾಗ ಆಗೋದು ಎನ್ನುವ ಮನೋಭಾವನೆ ಹೆಚ್ಷಾಗುತ್ತಿದೆಯೇ ಕನಸು ವಿನಃ, ತಾನು ಕ್ರೀಡಾ, ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕಾದ ಕೊಡುಗೆಗಳ ಬಗ್ಗೆ ಚಿಂತನೆ ಕಡಿಮೆಯಾಗುತ್ತಿದೆ ಎಂದರು.ಮಂಗಳೂರು ವಿವಿಯ ಕುಲಪತಿ ಪ್ರೊ.ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು.
ವಿಧಾನಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ರಾಜು ಚಲ್ಲನ್ನನವರ್, ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ ಇದ್ದರು.ಇತ್ತೀಚೆಗೆ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾನಿಲಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡ ಮಂಗಳೂರು ವಿವಿ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.
ದೈಹಿಕ ಶಿಕ್ಷಣ ವಿಭಾಗದ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ ಪರಿಚಯಿಸಿದರು. ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ನಿರೂಪಿಸಿದರು.