ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ಎಸ್.ಎಸ್. ಕೇರ್ ಟ್ರಸ್ಟ್ ಕಚೇರಿಯಲ್ಲಿ ಅಳವಡಿಸಲಾದ ಪ್ಲಾಸ್ಟಿಕ್ ಮರುಬಳಕೆ ಯಂತ್ರದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಇತ್ತೀಚೆಗೆ ನೆರವೇರಿಸಿದರು.ಈ ವೇಳೆ ಎಸ್.ಎಸ್. ಕೇರ್ ಲೈಫ್ ಟ್ರಸ್ಟಿ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಬಹುದಾದ ವಸ್ತುವಾಗಿ ಪರಿವರ್ತಿಸುವ ಈ ಆಧುನಿಕ ಸಾಧನದಿಂದ ಪರಿಸರ ಸಂರಕ್ಷಣೆ, ಸಂಪನ್ಮೂಲ ಉಳಿವು ಸಾಧ್ಯ. ಪ್ಲಾಸ್ಟಿಕ್ ಮರುಬಳಕೆಯಿಂದ ಹೊಸ ಪೆಟ್ರೋಲಿಯಂ ಆಧಾರಿತ ಮೂಲವಸ್ತುಗಳ ಅವಶ್ಯಕತೆ ಕಡಿಮೆಯಾಗುತ್ತಿದೆ. ಸಮಯದ ಉಳಿತಾಯಕ್ಕೂ ಸಹಕಾರಿಯಾಗಿದೆ. ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸುವ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಹಸಿರು ಭೂಮಿಗಾಗಿ ಇದು ನಮ್ಮ ಹೊಣೆಗಾರಿಕೆ ಆಗಬೇಕು ಎಂದರು.
ಇದೇ ವೇಳೆ ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಿನ ಆವರಣದ ಎಸ್‌ಎಸ್ ಕೇರ್ ಟ್ರಸ್ಟ್ ಕಚೇರಿಯಲ್ಲಿ ಸ್ಟೂಡೆಂಟ್ ವಿಂಗ್‌ನ ಸೃಜನಾತ್ಮಕ ಪ್ರಯತ್ನವಾದ “ವಾಲ್ ಆಫ್ ನಾಲೆಡ್ಜ್”ನ ಉದ್ಘಾಟನೆ ನೆರವೇರಿಸಲಾಯಿತು.“ಓದಿ ಹಿಂತಿರುಗಿಸಿ ಅಥವಾ ಹಂಚಿಕೊಳ್ಳಿ” ಎಂಬ ಸ್ಫೂರ್ತಿದಾಯಕ ಸಂದೇಶ ಸಾರುವ ಈ ವಿಶಿಷ್ಟ ಜ್ಞಾನದ ಗೋಡೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಓದುವ ಅಭ್ಯಾಸ ಬೆಳೆಸಲು, ಪುಸ್ತಕ ಹಂಚಿಕೆ ಸಂಸ್ಕೃತಿ ಉತ್ತೇಜಿಸಲು ಮತ್ತು ಜ್ಞಾನವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ರೂಪುಗೊಂಡಿದೆ. ಇದು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಮಾತ್ರವಲ್ಲ, ಸಮಾಜದಲ್ಲಿ ಜ್ಞಾನ ಹಂಚುವ ಮನೋಭಾವವನ್ನು ಬೆಳೆಸಲಿ. ಈ ಮೂಲಕ ಎಲ್ಲರಿಗೂ ಮಾದರಿಯಾಗಲಿ ಎಂದು ಸಂಸದರು ತಿಳಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಜಿಪಂ ಸಿಇಒ ಗಿಟ್ಟೆ ಮಾಧವ್ ವಿಠ್ಠಲ ರಾವ್, ಜೆಜೆಎಂ ಕಾಲೇಜಿ ಪ್ರಾಚಾರ್ಯೆ ಡಾ.ಶುಕ್ಲಾ ಶೆಟ್ಟಿ, ಡಾ.ಮೂಗನಗೌಡ ಇತರರಿದ್ದರು.- - -
-16ಕೆಡಿವಿಜಿ32,33:ದಾವಣಗೆರೆಯಲ್ಲಿ ಪ್ಲಾಸ್ಟಿಕ್ ಮರುಬಳಕೆ ಯಂತ್ರ ಹಾಗೂ ಜ್ಞಾನದ ಗೋಡೆಯನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸಿದರು.