ಇತ್ತೀಚೆಗೆ ನಡೆದ ದಲಿತರ ಕೊಲೆ, ಅತ್ಯಾಚಾರ, ದೌರ್ಜನ್ಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆ ಸಿರವಾರ ತಾಲೂಕಿನ ಹೊಕ್ರಾಣಿ, ದೇವದುರ್ಗ ತಾಲೂಕಿನ ಹದ್ದಿನಾಳ ಹಾಗೂ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮಗಳಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಕೆ.ಹೆಚ್.ಮುನಿಯಪ್ಪ ಅವರು ಮೃತರಾದ ಅಶ್ವಿನಿ, ಭೂಮಾನಂದ ಹಾಗೂ ರಾಣಮ್ಮ ಅವರುಗಳ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಶುಕ್ರವಾರ ಸಾಂತ್ವನ ಹೇಳಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಇತ್ತೀಚೆಗೆ ನಡೆದ ದಲಿತರ ಕೊಲೆ, ಅತ್ಯಾಚಾರ, ದೌರ್ಜನ್ಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆ ಸಿರವಾರ ತಾಲೂಕಿನ ಹೊಕ್ರಾಣಿ, ದೇವದುರ್ಗ ತಾಲೂಕಿನ ಹದ್ದಿನಾಳ ಹಾಗೂ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮಗಳಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಕೆ.ಹೆಚ್.ಮುನಿಯಪ್ಪ ಅವರು ಮೃತರಾದ ಅಶ್ವಿನಿ, ಭೂಮಾನಂದ ಹಾಗೂ ರಾಣಮ್ಮ ಅವರುಗಳ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಶುಕ್ರವಾರ ಸಾಂತ್ವನ ಹೇಳಿದರು.ಈ ವೇಳೆ ಮಾತನಾಡಿದ ಅವರು, ಮೃತ ಅಶ್ವಿನಿ ಅವರ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುತ್ತದೆ. ಅಲ್ಲದೆ ಅವರ ಸಹೋದರನಿಗೆ ಸರ್ಕಾರಿ ನೌಕರಿ ನೀಡಲಾಗುತ್ತದೆ. ಅವರ ಜಮೀನಿಗೆ ನೀರಾವರಿ ವ್ಯವಸ್ಥೆ ಮಾಡಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಅಲ್ಲಿಂದ ಹೊಕ್ರಾಣಿ ಗ್ರಾಮದಲ್ಲಿ ಅಶ್ವಿನಿ ಕೊಲೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಮಾತನಾಡಿದ ಅಚಿವರು, ದ್ವೇಷ-ಅಸೂಯೆಗಳನ್ನು ಮರೆತು, ಎಲ್ಲರೂ ಸಾಮರಸ್ಯದಿಂದ ಬದುಕು ನಡೆಸುವ ಮೂಲಕ ಮುನ್ನಡೆಯಬೇಕು. ಎಲ್ಲಿ ನಾವು ಪ್ರೀತಿ ವಾತ್ಸಲ್ಯದ ಬದುಕನ್ನು ಮಾಡಿಕೊಂಡು ಹೋಗುತ್ತೇವೆಯೋ, ಅಲ್ಲಿ ಮಾತ್ರ ನಾವು ಮುಂದೆ ಹೋಗಲು ನಮಗೆ ಅವಕಾಶವಿದೆ ಎಂದರು.
ಬಳಿಕ ಹದ್ದಿನಾಳ ಗ್ರಾಮದಲ್ಲಿ ಹತ್ಯೆಗೀಡಾದ ದಲಿತ ಮುಖಂಡ ಭೂಮಾನಂದ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ ಮಾತನಾಡಿದ ಸಚಿವರು ಹಾಡಹಗಲೇ ನಡೆದಿರುವ ಈ ಘಟನೆ ಅತ್ಯಂತ ಖಂಡನೀಯ. ತಪ್ಪಿತಸ್ಥರ ವಿರುದ್ಧ ಈಗಾಗಲೇ ಕಾನೂನು ಕ್ರಮ ಆರಂಭವಾಗಿದ್ದು, ಮುಂದಿನ ಅಗತ್ಯ ಕ್ರಮಗಳನ್ನು ಕಾನೂನು ಪ್ರಕಾರ ಕೈಗೊಳ್ಳಲಾಗುವುದು. ಭೂಮಾನಂದ ಅವರ ಕುಟುಂಬದಲ್ಲಿ ಎಳೆಯ ಮಕ್ಕಳಿದ್ದಾರೆ. ಅವರ ಭವಿಷ್ಯ ಹಾಗೂ ಕುಟುಂಬದ ಬದುಕಿಗೆ ಸರ್ಕಾರ ಜವಾಬ್ದಾರಿಯಿಂದ ಬೆಂಬಲವಾಗಿ ನಿಲ್ಲಲಿದೆ. ಕುಟುಂಬಕ್ಕೆ ಬದುಕು ಕಟ್ಟಿಕೊಳ್ಳಲು ಅಗತ್ಯ ನೆರವು ಒದಗಿಸುವುದರ ಜೊತೆಗೆ, ಸಾಧ್ಯವಾದಲ್ಲಿ ಭೂಮಿ ಒದಗಿಸುವ ಕುರಿತು ಜಿಲ್ಲಾಡಳಿತದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಭೋಸರಾಜು, ದೇವದುರ್ಗ ಶಾಸಕಿ ಕರಿಯಮ್ಮ ಜಿ.ನಾಯಕ, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕೆ.ಪಿ. ಮೋಹನ್ ರಾಜ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್, ಜಿಲ್ಲಾಧಿಕಾರಿ ಪೂವಿತಾ ಎಸ್., ಸಿಇಒ ಈಶ್ವರ ಕುಮಾರ್ ಕಾಂದೂ, ಎಸ್ಪಿ ಅರುಣಾಂಗ್ಷು ಗಿರಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
ಕರಡಕಲ್‌ಗೆ ಸಚಿವ ಮುನಿಯಪ್ಪ ಭೇಟಿ ಸಾಂತ್ವನ: ಇತ್ತಿಚೀಗೆ ಕೊಲೆಯಾದ ದಲಿತ ಮಹಿಳೆಯ ಕುಟುಂಬದ ಮನೆಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಸಚಿವ ಕೆ.ಹೆಚ್ ಮುನಿಯಪ್ಪನವರು ಸಾಂತ್ವನ ಹೇಳಿದರು.ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದಲ್ಲಿ ಇರುವ ಕೊಲೆಯಾದ ದಲಿತ ಮಹಿಳೆ ರಾಣೆಮ್ಮ ಕುಟುಂಬ ವರ್ಗದವರನ್ನು ಸಮಾಜ ಕಲ್ಯಾಣ ಸಚಿವರು ಭೇಟಿ ಮಾಡಿದಾಗ ಸಚಿವರ ಮುಂದೆ ಮೃತ ಮಹಿಳೆ ಮಕ್ಕಳು ಘಟನೆ ಕುರಿತು ವಿವರಿಸುತ್ತಾ ‘ನಮ್ಮವ್ವ ಕಟಿಗಿ ತರಾಕ ಹೊಲಕ್ಕೆ ಹೋಗಿದ್ಲು ರೀ ಬಹಳ ಹೊತ್ತಾದಾರೂ ಮನೆಗೆ ಬರಲಿಲ್ಲ ಆಗ ಅಲ್ಲಲ್ಲಿ ಹುಡುಕಾಡಿದಾಗ ಹೊಲದಲ್ಲಿ ಕೊಲೆಯಾಗಿ ಬಿದ್ದಿದ್ದಳು ಎಂದು ಕಣ್ಣೀರು ಸುರಿಸಿದರು. ಕುಟುಂಬ ವರ್ಗದವರಿಂದ ಮಾಹಿತಿ ಪಡೆದ ಸಚಿವರು ಕೂಡಲೇ ಸರ್ಕಾರದಿಂದ ಸಿಗುವ ಸೌಲತ್ತುಗಳ ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮೃತ ಮಹಿಳೆ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ 412,500 ಪರಿಹಾರದ ಮೊತ್ತ ಒದಗಿಸಲಾಗಿದೆ. ಉಳಿದಂತೆ ಪರಿಹಾರ ಸೇರಿದಂತೆ ಇತರೇ ಸೌಲತ್ತುಗಳನ್ನು ಒದಗಿಸಲಾಗವುದುದೆಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದರು.