ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ನಿರ್ಭಯ ಯೋಜನೆಯಡಿ 40 ದ್ವಿಚಕ್ರ ಗಸ್ತು ವಾಹನಗಳಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಂಗಳವಾರ ನಗರದ ಡಿಎಆರ್ ಮೈದಾನದಲ್ಲಿ ಚಾಲನೆ ನೀಡಿದರು.ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಮಾತನಾಡಿ, ಈ ಹಿಂದೆ ನಿರ್ಭಯ ಸ್ಕೀಮ್‌ನ ಅಡಿಯಲ್ಲಿ ನೀಡಲಾಗಿದ್ದ ಗಸ್ತು ಬೈಕ್‌ಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದ ಕಾರಣ ಎಲ್ಲಾ ಬೈಕ್ ಗಳಿಗೆ ಹೊಸರೂಪ ಕೊಟ್ಟು, ಬ್ಲಿನ್ಕ್ ಕರ್ಸ್ ಗಳು ಮತ್ತು ಸೈರನ್, ಮೈಕ್ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ ಎಂದರು.
40 ಬೈಕ್‌ಗಳನ್ನು 5 ಬೈಕ್ ಗಳಂತೆ ಗುಂಪು ವ್ಯವಸ್ಥೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಸತತವಾಗಿ ಸಂಚರಿಸಲು ಸಿದ್ಧಗೊಳಿಸಲಾಗಿದೆ. ಮಹಿಳೆಯರ ರಕ್ಷಣೆ, ಅಪರಾಧಗಳ ತಡೆ ಹಾಗೂ ಕಾನೂನು ಸುವ್ಯವಸ್ಥೆ ಹತೋಟಿಗೆ ತರುವುದು ವಾಹನಗಳ ಉದ್ದೇಶವಾಗಿದೆ ಎಂದರು.ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಗೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಅಪರಾಧ ತಡೆಯಲು, ತೊಂದರೆಗೆ ಒಳಗಾದ ಯಾವುದೇ ವ್ಯಕ್ತಿಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದಾಗ ಅವರನ್ನು ರಕ್ಷಣೆ ಮಾಡಲು ಈ ಬೈಕ್ ಸಹಕಾರಿಯಾಗಿದೆ ಎಂದರು.
ಜಿಲ್ಲೆಯ 7 ತಾಲೂಕು ಕೇಂದ್ರಗಳಲ್ಲಿ ಗಸ್ತು ವಾಹನಗಳು ಸಂಚರಿಸಿ ಮಹಿಳೆಯರ ರಕ್ಷಣೆ ಹಾಗೂ ಅಪರಾಧ ತಡೆ ಸಂಬಂಧ ಕಾರ್ಯ ನಿರ್ವಹಿಸಲಿವೆ. ಶಾಲಾ ಕಾಲೇಜುಗಳ ಪ್ರಾರಂಭ ಮತ್ತು ಮುಕ್ತಾಯದ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ಕಿರುಕುಳ, ಲೈಂಗಿಕ ಕಿರುಕುಳ ಹಾಗೂ ಚುಡಾಯಿಸುವ ಘಟನೆಗಳು ನಡೆಯದಂತೆ ಗಸ್ತು ಮಾಡಿ ರಕ್ಷಣೆ ನೀಡುತ್ತದೆ.ಮಹಿಳೆಯರು ಹೆಚ್ಚಾಗಿ ಕೆಲಸ ಮಾಡುವ ಸ್ಥಳಗಳು, ಫ್ಯಾಕ್ಟರಿಗಳು, ಇತರೆ ಸ್ಥಳಗಳ ಕಡೆಗಳಲ್ಲಿ ಮುಕ್ತ ಚಲನವಲನಕ್ಕೆ ಕ್ರಮ ವಹಿಸುವುದು, ಜನಸಂದಣಿ ಪ್ರದೇಶಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಸಂತೆ ಕಡೆಗಳಲ್ಲಿ ಗಸ್ತು, ಮಹಿಳೆಯರ ಸರಗಳ್ಳತನ, ಮಹಿಳೆಯರ ಮೇಲೆ ಕಿರುಕುಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಜರುಗದಂತೆ ನೋಡಿಕೊಳ್ಳಲಿವೆ.
ಜೊತೆಗೆ ಹಬ್ಬ- ಹರಿದಿನಗಳಲ್ಲಿ, ಜಾತ್ರೆ, ದೇವಸ್ಥಾನ, ಮಸೀದಿ, ಚರ್ಚ್ ಪ್ರದೇಶಗಳಲ್ಲಿ, ಹೆದ್ದಾರಿ, ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಕ್ರಮ, ರೌಡಿಗಳು, ಸಮಾಜಘಾತುಕರು, ದುಷ್ಕರ್ಮಿಗಳು ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ಆಸ್ಪದ ನೀಡದಂತೆ ನೋಡಿಕೊಳ್ಳುವುದು. ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಜೊತೆಗೆ ಠಾಣೆಗಳಿಗೆ ಬರುವ ದೂರುಗಳು, ಅರ್ಜಿಗಳ ಬಗ್ಗೆ ತ್ವರಿತವಾಗಿ ಕ್ರಮ ವಹಿಸಲಿದೆ ಎಂದರು.ದೂರುಗಳಿದ್ದಲ್ಲಿ 08232-224888ಗೆ ಅಥವಾ 11ಗೆ ಕರೆ ಮಾಡಿ ಮಾಹಿತಿ ತಿಳಿಸಿದರೆ ಮಾಂಡವ್ಯ ರಕ್ಷಣೆ ವಾಹನ ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ದಾವಿಸಿ ನೆರವು ನೀಡಲಿದೆ ಎಂದರು.
ಈ ವೇಳೆ ಶಾಸಕ ಎ.ಬಿ. ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವಿರ್ ಆಸೀಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.