ಗಂಗಾವತಿ: ಪರಿಶಿಷ್ಟ ಪಂಗಡದ ಹಣ ದುರುಪಯೋಗ ಮಾಡಿ ದಲಿತ ಜನಾಂಗಕ್ಕೆ ದ್ರೋಹ ಬಗೆದ ಸಚಿವ ನಾಗೇಂದ್ರ ಮತ್ತು ವಿಜಯನಗರ ಜಿಲ್ಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ನಿರಾಕರಿಸಿದ ಸಚಿವ ಜಮೀರ್‌ ಅಹ್ಮದ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಒತ್ತಾಯಿಸಿದ್ದಾರೆ.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ನಾಗೇಂದ್ರ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಅನುದಾನ ಕಬಳಿಕೆ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ.ಇಂತಹ ವ್ಯಕ್ತಿಗೆ ಮತ್ತೇ ಸಚಿವ ಸ್ಥಾನ ನೀಡಿದ್ದನ್ನು ಗಮನಿಸಿದರೆ ಭ್ರಷ್ಟಾಚಾರಿಗಳಿಗೆ ಅವಕಾಶ ಕಾಂಗ್ರೆಸ್ ನೀಡಿದೆ ಎನ್ನುವದು ತೋರಿಸುತ್ತದೆ ಎಂದರು.

ಸಚಿವ ಜಮೀರ್ ಅಹ್ಮದ್ ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಧ್ವಜಾರೋಹಣ ನೆರವೇರಿಸಬೇಕೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರೂ ನಿರಾಕರಣೆ ಮಾಡಿ ರಾಷ್ಟ್ರಕ್ಕೆ ದ್ರೋಹ ಬಗೆದಿದ್ದಾರೆ. ಅಲ್ಲದೇ ಪತ್ರ ಬರೆದು ಭಾಗವಹಿಸಲು ಸಾಧ್ಯ ಇಲ್ಲ ಎಂದು ತಿಳಿಸಿರುವ ಜಮೀರ್ ಅಹ್ಮದ್ ಅವರಲ್ಲಿ ರಾಷ್ಟ್ರ ಪ್ರೇಮ ಎಷ್ಟರ ಮಟ್ಟಿಗೆ ಇದೆ ಎನ್ನುವುದು ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಂಗಾವತಿ ನಗರವನ್ನು ಬಳ್ಳಾರಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಗಂಗಾವತಿ ಅಮೃತ ಸಿಟಿ ಯೋಜನೆಯಲ್ಲಿ ಕಾಮಗಾರಿ ನಡೆದಿದ್ದು, ಹೊಸ ಬಸ್ ನಿಲ್ದಾಣ, ರೈಲ್ವೆನಿಲ್ದಾಣ ನವೀಕರಣ, ₹260 ಕೋಟಿ ವೆಚ್ಚದಲ್ಲಿ 27 ಕೆರೆಗಳಿದೆ ನೀರು ಭರ್ತಿ ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.


10 ಕೋಟಿ ವೆಚ್ಚದಲ್ಲಿ ವಿಜಯನಗರ ರಾಜಧಾನಿಯಾಗಿದ್ದ ಆನೆಗೊಂದಿ ಗ್ರಾಮವನ್ನು ಪಾರಂಪರಿಕ ಗ್ರಾಮವನ್ನಾಗಿ ಪರಿವರ್ತಿಸಲಾಗುತ್ತದೆ ಎಂದರು.

ಈ ವೇಳೆ ತಹಸೀಲ್ದಾರ್‌ ವಸಂತ ಕುಮಾರಿ ಧ್ವಜಾರೋಹಣ ನೆರವೇರಿಸಿದರು. ಲಕ್ಷ್ಮೀ ಅರುಣಾ ಗಾಲಿ ಜನಾರ್ದನ ರಡ್ಡಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್,ನಗರಸಭಾ ಆಯುಕ್ತ ವಿರೂಪಾಕ್ಷಮೂರ್ತಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಇಲಿಯಾಸ್ ಖಾದ್ರಿ ಸೇರಿದಂತೆ ಪ್ರಮುಖರು ಇದ್ದರು. ಜಯಶ್ರೀ ಹಕ್ಕಂಡಿ ನಿರೂಪಿಸಿದರು, ಬಿಇಓ ನಟೇಶ್ ಸ್ವಾಗತಿಸಿದರು.