ಸಾರಾಂಶ
ಬೆಳಗಾವಿ : ವಿಧಾನ ಪರಿಷತ್ತಿನಲ್ಲಿ ಗುರುವಾರ ನಡೆದ ಗದ್ದಲದ ವೇಳೆ ಸಿ.ಟಿ.ರವಿ 10 ಬಾರಿ ಅತ್ಯಂತ ಕೆಟ್ಟ ಪದ ಬಳಸಿ ನನ್ನ ತೇಜೋವಧೆ ಮಾಡಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಗದ್ಗದಿತರಾದ ಘಟನೆ ಶುಕ್ರವಾರ ನಡೆಯಿತು.
ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನೂ ಕೂಡ ಒಬ್ಬ ತಾಯಿ. ಒಬ್ಬ ಅಕ್ಕ. ನನ್ನ ನೋಡಿ ಸಾವಿರಾರು ಜನ ರಾಜಕೀಯಕ್ಕೆ ಬರಬೇಕು ಅಂದುಕೊಂಡಿದ್ದಾರೆ. ನನ್ನ ಸೊಸೆ ಫೋನ್ ಮಾಡಿ ನಿಮ್ಮ ಜೊತೆ ನಾವಿದ್ದೇವೆ ಎಂದರು. ಕ್ಷೇತ್ರದ ಜನ ನನ್ನ ಬೆಂಬಲಕ್ಕೆ ಇದ್ದಾರೆ. ಕೆಟ್ಟ ಬಳಕೆಯಿಂದ ತೀವ್ರ ನೋವಾಗಿದೆ ಎಂದು ಹೆಬ್ಬಾಳಕರ್ ದುಃಖಿತರಾದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಪರಿಷತ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭ ಸಿ.ಟಿ.ರವಿ ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಪದೆ ಪದೇ ಹೇಳಿದರು. ಆಗ ನಾನು ನೀವು ಅಪಘಾತ ಮಾಡಿ ಮೂವರನ್ನು ಕೊಲೆ ಮಾಡಿದ್ದೀರಲ್ಲ ಎಂದು ಹೇಳಿದ್ದು ನಿಜ. ನನ್ನ ಮಾತಿನಿಂದ ಹಿಂದೆ ಸರಿವ ಪ್ರಶ್ನೆಯೇ ಇಲ್ಲ. ಘಟನೆ ಕುರಿತಂತೆ ಮಾಧ್ಯಮಗಳು ಎಲ್ಲ ತೋರಿಸಿವೆ. ಈಗ ಸಿ.ಟಿ. ರವಿ ಫ್ರಸ್ಟ್ರೇಟ್ ಎಂದು ಹೇಳಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಅವರು ತಿಳಿಸಿದರು.
ಸಿ.ಟಿ. ರವಿ ಅಸಾಂವಿಧಾನಿಕ ಪದ ಬಳಸಿದ ಬಗ್ಗೆ ಎಲ್ಲರ ಬಳಿಯೂ ವಿಡಿಯೋ ದಾಖಲೆಯಿದೆ ಎಂದರು. ಈ ಘಟನೆಯಿಂದ ನಾನು ತುಂಬಾ ಶಾಕ್‌ನಲ್ಲಿದ್ದೇನೆ ಎಂದೂ ಸಚಿವರು ಹೇಳಿದರು.