ಇತಿಹಾಸ ಕಾಲದಲ್ಲಿ ಪ್ರತಿದಿನವೂ ರಥೋತ್ಸವಗಳು ನಡೆಯುತ್ತಿದ್ದ ಬಾರ್ಕೂರಿನಲ್ಲಿ, ಇನ್ನು ಮುಂದೆ ವರ್ಷಕ್ಕೆ ಕನಿಷ್ಠ 100 ರಥೋತ್ಸವಗಳನ್ನಾದರೂ ಆಯೋಜಿಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ ಪಾಟೀಲ್ ಹೇಳಿದರು.

ಉಡುಪಿ: ಇತಿಹಾಸ ಕಾಲದಲ್ಲಿ ಪ್ರತಿದಿನವೂ ರಥೋತ್ಸವಗಳು ನಡೆಯುತ್ತಿದ್ದ ಬಾರ್ಕೂರಿನಲ್ಲಿ, ಇನ್ನು ಮುಂದೆ ವರ್ಷಕ್ಕೆ ಕನಿಷ್ಠ 100 ರಥೋತ್ಸವಗಳನ್ನಾದರೂ ಆಯೋಜಿಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ ಪಾಟೀಲ್ ಹೇಳಿದರು.

ಅವರು ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧಿಸಿದಂತೆ ಚರ್ಚಿಸಲು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಇತಿಹಾಸ ಪ್ರಸಿದ್ಧ ಬಾರ್ಕೂರನ್ನೂ ಸುಧೀರ್ಘ ಕಾಲ ಆಳಿದ ಆಳುಪ ವಂಶದ ರಾಜಧಾನಿಯಾಗಿದ್ದು, ಇಲ್ಲಿದ್ದ 365 ದೇವಸ್ಥಾವಗಳಲ್ಲಿ ಪ್ರತಿದಿನವೂ ರಥೋತ್ಸವ ನಡೆಯುತ್ತಿದ್ದುದಾಗಿ ದಾಖಲೆಗಳಲ್ಲಿ ಉಲ್ಲೇಖಗಳಿವೆ, ಈ ಪ್ರದೇಶವನ್ನು ಪುನರುಜ್ಜೀವನಗೊಳಿಸಿ, ಇತಿಹಾಸವನ್ನು ನೆನಪಿಸಲು ವರ್ಷದಲ್ಲಿ 100 ರಥೋತ್ಸವಗಳನ್ನು ನಡೆಸಲು ಯೋಜನೆ ರೂಪಿಸಲಾಗುತ್ತದೆ ಎಂದರು. ಈ ಯೋಜನೆಯ ಪ್ರಮುಖ ಉದ್ದೇಶ ಇಲ್ಲಿನ ಜನರನ್ನು ತಮ್ಮ ಮೂಲಗಳಿಗೆ ಮತ್ತೆ ಜೋಡಿಸುವುದು, ಜೊತೆಗೆ ಬಾರ್ಕೂರನ್ನು ರಾಜ್ಯದ ಪ್ರಮುಖ ಸಾಂಸ್ಕೃತಿಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವುದು. ಇದಕ್ಕಾಗಿ ಸಮಗ್ರ ವರದಿ ಮತ್ತು ಕಾರ್ಯಯೋಜನೆ ಸಿದ್ಧಪಡಿಸಲು ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದರು.ಪುರಾತತ್ವ ಮಹತ್ವ ಹೊಂದಿರುವ ಬಾರ್ಕೂರನ್ನು ಪುನರುಜ್ಜೀವನಗೊಳಿಸುವಾಗ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಒನ್ ಸ್ಟೇಟ್, ಒನ್ ಡೆಸ್ಟಿನೇಶನ್ ಪ್ರವಾಸೋದ್ಯಮ ಇಲಾಖೆಯ ಈ ಯೋಜನೆಯಡಿಯಲ್ಲಿ ಕಾಪು ಪ್ರಸ್ತುತ ಆಯ್ಕೆಯಾಗಿದೆ. ಮುಂದಿನ ದಿನಗಳಲ್ಲಿ ಬಾರ್ಕೂರನ್ನು ಸಹ ಈ ಯೋಜನೆಗೆ ಸೇರಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಿ .ಆರ್ ಝಡ್. ನಿಯಮಗಳಿಂದ ತೊಂದರೆ ಉಂಟಾಗುತ್ತಿದೆ. ನೆರೆಯ ರಾಜ್ಯಗಳಾದ ತಮಿಳುನಾಡು ಹಾಗೂ ಕೇರಳ ಮಾದರಿಯಲ್ಲಿ ರೂಪಿಸಿರುವ ನಿಯಮಗಳನ್ನು ರಾಜ್ಯದಲ್ಲಿಯೂ ಜಾರಿಗೆ ತಂದರೆ ಕಡಲ ತೀರದಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ಚಂದು ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೂ 6,000ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಬಾಕಿ ಉಳಿದಿರುವ ಹಸ್ತ ಪ್ರತಿಗಳನ್ನು ಶೀಘ್ರದಲ್ಲಿಡಿಜಿಟಲ್ ಗಳಿಸಬೇಕು ಎಂದವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ., ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ ಗಫೂರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮತ್ತಿತರರು ಉಪಸ್ಥಿತರಿದ್ದರು.