ಸಾರಾಂಶ
ಹಾವೇರಿ: ಸವಣೂರು ತಾಲೂಕು ಮಾದಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮೃತಪಟ್ಟವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ವೈಯಕ್ತಿವಾಗಿ ರು. ೨ ಲಕ್ಷ ನಗದು ಪರಿಹಾರ ನೀಡಿದರು.ಶುಕ್ರವಾರ ಸಂಜೆ ಮಾದಾಪುರ ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಮನೆ ನಿರ್ಮಾಣಕ್ಕೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ರು. ೧.೨೦ ಲಕ್ಷ ಮೊತ್ತ ಹಾಗೂ ಮೃತರ ಕುಟುಂಬದವರಿಗೆ ತಲಾ ಐದು ಲಕ್ಷ ರು. ಪರಿಹಾರ ವಿತರಣೆ ಆದೇಶಪತ್ರಗಳನ್ನು ವಿತರಣೆಮಾಡಿದ ಅವರು, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.ಗ್ರಾಮದಲ್ಲಿ ೫೦ ವರ್ಷಕ್ಕಿಂತ ಹಳೆ ಮನೆಗಳ, ವಸತಿ ಹಾಗೂ ನಿವೇಶನ ರಹಿತರ ಸರ್ವೇ ಮಾಡಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.ಇಂತಹ ಅವಘಡಗಳು ಸಂಭವಿಸಿದ ತಕ್ಷಣ ಆರೋಗ್ಯ ಸೇವೆ ನೀಡಬೇಕು. ಅವಘಡ ಸಂಭವಿಸಿದ ಸ್ಥಳಕ್ಕೆ ಆಗಮಿಸಲು ವಿಳಂಬ ಮಾಡಿದ ಕುರಿತು ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡುವಂತೆ ಸೂಚನೆ ನೀಡಿದರು.ಇಂತಹ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣ ಮೊತ್ತ ಹೆಚ್ಚಿಸಲು ಹಾಗೂ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೩೫ ವರ್ಷದ ಮುತ್ತಪ್ಪ ದೊಡಬಸಪ್ಪ ಹರಕುಣಿ ಹಾಗೂ ಸುನಿತಾ ಮುತ್ತಪ್ಪ ಹರಕುಣಿ ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಮೃತ ಅವಳಿ ಮಕ್ಕಳು ಮುತ್ತಪ್ಪ ಹಾಗೂ ಸುನಿತಾ ದಂಪತಿಗಳ ಮಕ್ಕಳಾಗಿದ್ದಾರೆ ಹಾಗೂ ಮೃತ ಚನ್ನಮ್ಮ ಹರಕುಣಿ ಮುತ್ತಪ್ಪ ಅವರ ಸಹೋದರಿಯಾಗಿದ್ದಾಳೆ.೭೦ ವರ್ಷದ ವೃದ್ಧೆ ಯಲ್ಲವ್ವ ಹರಕುಣಿ ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.ತಾಲೂಕು ಆಸ್ಪತ್ರೆಗೆ ಭೇಟಿ: ನಂತರ ಸವಣೂರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆ ಮೂಲ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ, ಸವಣೂರು ಉಪವಿಭಾಗಾಧಿಕಾರಿ ಮಹ್ಮದ ಖಿಜರ್, ಡಿವೈಎಸ್‌ಪಿ ಮಂಜುನಾಥ್, ಹುಲಗೂರ ಪಿಎಸ್‌ಐ ಪರಶುರಾಮ ಕಟ್ಟಿಮನಿ, ತಹಶೀಲ್ದಾರ ಭರತರಾಜ್, ಮುಖಂಡರಾದ ಅಜ್ಜಂಪೀರ ಖಾದ್ರಿ, ಪಠಾಣ ಇತರರು ಉಪಸ್ಥಿತರಿದ್ದರು.