ವಿದ್ಯಾರ್ಥಿಗಳೊಂದಿಗೆ ಸಚಿವ ಪ್ರಿಯಾಂಕ್‌ ಸಂವಾದ

| Published : Jan 26 2024, 01:45 AM IST

ಸಾರಾಂಶ

ಸಮಸ್ಯೆ ಆಲಿಸಲು ಬಂದಿದ್ದೇನೆ ಎಂದು ಹೇಳುತ್ತ ಲೈಬ್ರರಿ, ಶೌಚಾಲಯ, ತರಗತಿಯಲ್ಲಿ, ಮೂಲ ಸೌಲಭ್ಯದಲ್ಲಿ ಏನಾದರೂ ತೊಂದರೆ ಇದೆಯಾ? ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಏನು‌ ಮಾಡಿದರೆ ಅನುಕೂಲ ಎನ್ನುವುದನ್ನು ತಿಳಿಸಿ ಎಂದ ಸಚಿವ ಪ್ರಿಯಾಂಕ್‌ ಖರ್ಗೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದ ಆರ್‌ಟಿ‌ಓ ಬಳಿ ಇರುವ ಸರ್ಕಾರಿ ಮಹಾವಿದ್ಯಾಲಯಕ್ಕೆ (ಸ್ವಾಯತ್ತ) ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿದರು.

ಈ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಮಸ್ಯೆ ಆಲಿಸಲು ಬಂದಿದ್ದೇನೆ ಎಂದು ಹೇಳುತ್ತ ಲೈಬ್ರರಿ, ಶೌಚಾಲಯ, ತರಗತಿಯಲ್ಲಿ, ಮೂಲ ಸೌಲಭ್ಯದಲ್ಲಿ ಏನಾದರೂ ತೊಂದರೆ ಇದೆಯಾ? ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಏನು‌ ಮಾಡಿದರೆ ಅನುಕೂಲ ಎನ್ನುವುದನ್ನು ತಿಳಿಸಿ ಎಂದರು.

ಆಗ ಮಾತ‌ನಾಡಿದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ ಶೌಚಾಲಯ, ಎನ್‌ಇಪಿ ಪುಸ್ತಕಗಳು, ಸಿಟಿ ಬಸ್ ನಿಲ್ದಾಣದಿಂದ ಕಾಲೇಜಿಗೆ ನೇರವಾಗಿ ಬಸ್, ಕುಡಿಯುವ ನೀರು, ಸುಸಜ್ಜಿತ ಲೈಬ್ರರಿ, ಅಗತ್ಯ ಪುಸ್ತಕಗಳು, ಕ್ಯಾಂಪಸ್‌ನಲ್ಲಿ ಇಂದಿರಾ ಕ್ಯಾಂಟಿನ್, ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್, ಸ್ಯಾನಿಟರಿ ಪ್ಯಾಡ್, ಸಭಾಂಗಣ, ಸ್ನಾತಕೋತ್ತರ ಪದವಿ ಜೊತೆಗೆ ಪಿಎಚ್‌ಡಿ ಗೂ ಅವಕಾಶ, ಪಿಜಿ ಹಾಗೂ ಯುಜಿಗೆ ಪ್ರತ್ಯೇಕ‌ ಲ್ಯಾಬರೋಟರಿ, ಸ್ಕಾಲರ್ ಶಿಫ್, ಗ್ರಾಮಾಂತರ ಸಾರಿಗೆ ಸೌಲಭ್ಯ ಇತ್ಯಾದಿ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.

ಆಗ ಉತ್ತರಿಸಿದ ಸಚಿವರು: ಸರ್ಕಾರ ನಿಮ್ಮೆಲ್ಲರ ಸಮಸ್ಯೆ ಬಗೆಹರಿಸುತ್ತದೆ. ನಿಮ್ಮೊಂದಿಗೆ ಸರ್ಕಾರವಿದೆ. ನಿಮ್ಮೆಲ್ಲರ ಏಳಿಗೆಗಾಗಿ ನಾವು ಕೆಲಸ ಮಾಡಲಿದ್ದೇವೆ. ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ, ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಹೇಳಿದ್ದೀರಿ. ಕಲಬುರಗಿ ನಗರದಲ್ಲಿ ನೈಸ್ ಅಕಾಡೆಮಿ (ನಾಗಾವಿ ಇನಸ್ಟಿಟ್ಯೂಟ್ ಆಫ್ ಕಾಂಪಿಟೇಟಿವ್ ಸೆಂಟರ್) ಸದ್ಯದಲ್ಲೇ ಸ್ಥಾಪನೆಯಾಗಲಿದ್ದು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೇರಿ ಹಲವರಿದ್ದರು. ಈ ಸಂದರ್ಭದಲ್ಲಿ ಸಚಿವರು ಗ್ರಂಥಾಲಯ, ಉದ್ಯಾನವನ ವೀಕ್ಷಿಸಿದರು.