ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪರಿಸರ ಎಂಜಿನಿಯರ್ ಏನು ಕತ್ತೆ ಕಾಯ್ತಾರ, ಹೆಲ್ತ್ ಇನ್‌ಸ್ಪೆಕ್ಟರ್ ಬಗ್ಗೆ ದೂರಿದೆ, ನಿಮ್ಮ ಬಗ್ಗೆ ದೂರಿಲ್ಲ. ಆದ್ದರಿಂದ ಮೊದಲಿಗೆ ಅವರುಗಳಿಂದ ಕೆಲಸ ತಗೊಂಡು, ಹೆಚ್ಚುವರಿಯಾಗಿ ಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕರನ್ನು ನೇಮಿಸಿಕೊಂಡು ಮೊದಲು ಎಲ್ಲಾ ವಾರ್ಡ್‌ಗಳನ್ನು ಶುಚಿಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಅವರಿಗೆ ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ರಾಜಣ್ಣ ಸಲಹೆ ನೀಡಿದರು.
ತಾಲೂಕು ಹಾಗೂ ಪಟ್ಟಣದ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಮನೆ ಮತ್ತು ಹಸುಗಳಿಗೆ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಹಾಗೂ ಚರಂಡಿಯ ದುಸ್ಥಿತಿ ಕಂಡು ಮಾತನಾಡಿದರು. ಪುರಸಭೆ ವ್ಯಾಪ್ತಿಯಲ್ಲಿ ಬಡವರು ವಾಸಿಸುವ ಪ್ರದೇಶದಲ್ಲಿ ಯಾವುದೇ ರಸ್ತೆ, ಚರಂಡಿ ಸರಿ ಇಲ್ಲವೆಂದು ದೂರು ಬರಬಾರದು, ಅನಾನುಕೂಲಗಳು ಇದ್ದಲ್ಲಿ ಸಮಸ್ಯೆಯನ್ನು ನೀವು ಬಗೆಹರಿಸಬೇಕು ಎಂದು ಸಲಹೆ ನೀಡಿದರು.ಕಾಲುವೆಕೇರಿ ಬೀದಿಯ ನಿವಾಸಿಗಳು ಮಾತಾಡಿ, ರಸ್ತೆ ಅಗೆದು ವರ್ಷವಾಗಿದೆ, ಇಂತಹ ಸ್ಥಿತಿಯಲ್ಲಿ ತಿರುಗಾಡಬೇಕು, ಚರಂಡಿ ಸ್ವಚ್ಛಗೊಳಿಸಲು ಪೌರಕಾರ್ಮಿಕರು ತಿಂಗಳಿಗೆ ಒಮ್ಮೆಯೂ ಬರುವುದಿಲ್ಲ, ಇಂದು ನೀವು ಬರುತ್ತೀರಿ ಎಂಬ ಕಾರಣಕ್ಕೆ ರಸ್ತೆಯನ್ನು ಸ್ವಚ್ಛ ಮಾಡಿ, ಗಿಡಗಂಟಿಗಳನ್ನು ತೆರವುಗೊಳಿಸಿದ್ದಾರೆ ಎಂದು ದೂರಿನ ಮಳೆ ಸುರಿಸಿದರು. ಆಗ ಸಚಿವರು ರಸ್ತೆಗೆ ಕಾಂಕ್ರೀಟ್ ಹಾಕಿಸಲು ತಿಳಿಸಿದ್ದೇನೆ, ಸಮಸ್ಯೆ ಕುರಿತು ಎಲ್ಲಾ ಹೇಳಿದ್ದೇನೆ, ಸರಿ ಮಾಡಿಸುತ್ತಾರೆ ಎಂದು ಸಮಾಧಾನದಿಂದ ಹೇಳುತ್ತಿದ್ದರೂ ಮಹಿಳೆಯರು ಪದೆಪದೇ ಮಾತನಾಡಿದಾಗ ಸುಮ್ಮನಿರಮ್ಮ ಎಂದು ರೇಗಿದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲಿ ಶಂಕಿತ ಡೆಂಘೀ ಕಾಯಿಲೆಗೆ ಐದು ಸಾವಾಗಿದೆ, ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದರೂ ತಾ. ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಏನು ಪ್ರಯೋಜನವಾಗಿಲ್ಲವೆಂಬ ಪ್ರಶ್ನೆಗೆ ಸಚಿವರು ಉತ್ತರಿಸಿ, ಡಿಎಚ್‌ಒ ಅವರು ಗ್ರಾಮಗಳಿಗೆ ಭೇಟಿ ನೀಡಿ, ಕ್ಯಾಂಪ್‌ಗಳನ್ನು ಮಾಡುವ ಜತೆಗೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸೂಚಿಸಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.ಕಡುವಿನಕೋಟೆ ಗ್ರಾಮದ ನಾಗಮ್ಮ ಕೋಂ ಸಿದ್ದಯ್ಯ ಎಂಬ ಮಹಿಳೆಗೆ ಮನೆ ಹಾನಿಯ ೧.೨೦ ಲಕ್ಷ ರು. ಹಾಗೂ ಹಸು ಮೃತಪಟ್ಟ ಕಾರಣಕ್ಕೆ ೬.೨೫ ಸಾವಿರ ರು. ಪರಿಹಾರ ಚೆಕ್ ವಿತರಿಸಿದರು. ಪಟ್ಟಣದ ಪುರಸಭೆ ವ್ಯಾಪ್ತಿಯ ೧೧ ನೇ ವಾರ್ಡಿನ ಕಾಲುವೆಕೇರಿ ಬೀದಿಯ ಮಂಜುಳಾ ಕೋಂ ನಾಗರಾಜು ಅವರಿಗೆ ಮನೆ ಹಾನಿಯ ೧.೨೦ ಲಕ್ಷ ರು. ಪರಿಹಾರದ ಚೆಕ್ ಮತ್ತು ರಂಗಸ್ವಾಮಿ ಬೀನ್ ತಿಮ್ಮೇಗೌಡ ಅವರ ಹಸು ಮೃತಪಟ್ಟ ಬಗ್ಗೆ ೩೭ ಸಾವಿರ ರು. ಚೆಕ್ ವಿತರಿಸಿದರು. ನಂತರ ಹಿಂದಲಹಳ್ಳಿ ಗ್ರಾಮದ ದೊರೆಸ್ವಾಮಿ ಮನೆ ಹಾನಿಯ ೧.೨೦ ಲಕ್ಷ ರು. ಪರಿಹಾರದ ಚೆಕ್ ವಿತರಿಸಿದರು.
ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸತ್ಯಭಾಮ, ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜಿತ, ಜಿ.ಪಂ. ಸಿಇಒ ಪೂರ್ಣಿಮ, ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಪುರಸಭಾ ಸದಸ್ಯ ಬೈರಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು, ಇತರರು ಇದ್ದರು.