ಸಾರಾಂಶ
ಆರೋಗ್ಯ ಶಿಕ್ಷಣ, ಆಹಾರ ಸರಬರಾಜು ಸೇರಿದಂತೆ ಎತ್ತಿನಹೊಳೆ ಯೋಜನೆ ಬಗ್ಗೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಿಮಿಡಿಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ
ಹಾಸನ : ಆರೋಗ್ಯ ಶಿಕ್ಷಣ, ಆಹಾರ ಸರಬರಾಜು ಸೇರಿದಂತೆ ಎತ್ತಿನಹೊಳೆ ಯೋಜನೆ ಬಗ್ಗೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಿಮಿಡಿಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅಧಿಕಾರಿಗಳ ಮೇಲೆ ಕಿಡಿಕಾರಿದರು.
ನಗರದ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ನಡೆದ ೩ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಗೈರಾಗಿದ್ದ ನಗರಸಭೆ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಗಮನಹರಿಸಿ, ಸಮಸ್ಯೆಗಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಂದಾಗ ಕೂಡಲೇ ಗಮನಿಸಬೇಕು. ಜನರಿಗೆ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ವಿಶ್ವಾಸ ಹಾಳಾಗಬಾರದು, ಸರ್ಕಾರಿ ಆಸ್ಪತ್ರೆಯಲ್ಲಿ ಇರೋ ಸೌಲಭ್ಯ ಎಲ್ಲಿಯೂ ಇಲ್ಲ. ಇದು ಜನರಿಗೆ ಉಪಯೋಗ ಆಗಬೇಕು ಎಂದು ಗರಂ ಆದ ಪ್ರಸಂಗ ನಡೆಯಿತು. ಇದೇ ವೇಳೆ ಕೆಡಿಪಿ ಸಭೆಗೆ ಬಾರದ ನಗರಸಭೆ ಆಯುಕ್ತರ ವಿರುದ್ಧ ಸಚಿವರು ಗರಂ ಆದರು. ನಗರಸಭೆ ಆಯುಕ್ತರಾಗಿ ಪ್ರಭಾರಿ ಜವಾಬ್ದಾರಿ ಹೊಂದಿರುವ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್, ಹುಡಾ ಸಭೆ ಇದೆ ಎಂದು ಬೆಂಗಳೂರಿಗೆ ಹೋಗಿದ್ದಾರೆ ಎಂದು ನಗರಸಭೆ ಎಂಜಿನಿಯರ್ ಮಾಹಿತಿ ನೀಡಿದರು. ಇದನ್ನು ಕೇಳಿ ಸಿಟ್ಟಾದ ಸಚಿವರು, ಅವರಿಗೆ ಕೆಡಿಪಿ ಸಭೆ ಮುಖ್ಯವೋ, ಅವರ ಸಭೆ ಮುಖ್ಯವೋ, ಕೂಡಲೇ ಅವರನ್ನು ಸಭೆಗೆ ಬರಲು ಹೇಳಿ ಎಂದು ಸೂಚಿಸಿದರು.
ಮೊದಲು ಶಾಲೆ ದುರಸ್ತಿ ಮಾಡಿಸಿ:
ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದು ಪ್ರಭಾರಿ ಡಿಡಿಪಿಐ ಅವರಿಗೆ ಪ್ರಶ್ನೆ ಮಾಡಿದರು. ನಾನು ಪ್ರಭಾರಿಯಾಗಿ ಬಂದು ಮೂರು ತಿಂಗಳಾಗಿದೆ ಎಂದಾಗ ಸಚಿವರು ಮಾತನಾಡಿ, ಡಿಡಿಪಿಐ ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದಾಗ ಪಕ್ಕದಲ್ಲೆ ಇದ್ದ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳಿಗೆ ಡ್ರಾಪ್ ಆದ ಬಗ್ಗೆ ಮೆಲ್ಲಗೆ ಹೇಳಿದ ವೇಳೆ ಸಚಿವರಿಗೆ ಮುಜುಗರವನ್ನುಂಟು ಮಾಡಿತು. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಸಿಗಬೇಕು. ಕೆಲ ಶಾಲೆಗಳ ಕಟ್ಟಡ ಶಿಥಿಲವಾಗಿ ಕೂರಲು ಭಯಪಡುವ ಸ್ಥಿತಿ ಇದೆ. ಹೀಗಾದ್ರೆ ಪೋಷಕರು, ಮಕ್ಕಳು ಭಯ ಪಡುವ ವಾತಾವರಣ ನಿರ್ಮಾಣ ಆಗಲಿದೆ. ಹಾಗಾಗಿ ಆದ್ಯತೆ ಮೇಲೆ ಕಟ್ಟಡ ದುರಸ್ತಿ ಮಾಡಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಹಾಗೆಯೇ ಕುಡಿಯುವ ನೀರು, ಶೌಚಾಲಯ ಸ್ವಚ್ಛತೆ ಬಗ್ಗೆಯೂ ಗಮನ ಹರಿಸಬೇಕು. ಮುಂದಿನ ಬಾರಿ ಸಭೆ ಮಾಡಿದಾಗ ಈ ಬಗ್ಗೆ ನಾನೇ ಪ್ರತ್ಯೇಕವಾಗಿ ಕೇಳುವೆ. ಶಾಲೆಗಳ ಪರಿಸ್ಥಿತಿ ಸುಧಾರಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವಾರ್ನಿಂಗ್ ಮಾಡಿದರು. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿ, ಇತರೆ ಯಾವುದೇ ಕೆಲಸ ಮಾಡಲು ಆಗದಿದ್ದರೂ ಪರವಾಗಿಲ್ಲ, ಮೊದಲು ಶಾಲೆ ದುರಸ್ತಿ ಮಾಡಿಸಿ, ಬಾಗೇಶಪುರದಲ್ಲಿ ಸಂಪೂರ್ಣ ಹಾಳಾಗಿರುವ ಶಾಲಾ ಕಟ್ಟಡ ಓಪನ್ ಇದೆ. ನಮ್ಮ ತಾಲ್ಲೂಕಿನಲ್ಲಿ ೨೫೦ ಶಾಲಾ ಕಟ್ಟಡ ತೆರವು ಮಾಡಬೇಕು, ಕಟ್ಟಡ ಕೊರತೆ ಇದ್ದರೆ ಇರುವ ಕಟ್ಟಡದಲ್ಲೇ ಪಾಠ ಮಾಡಿ ಎಂದರು.
ತುರ್ತು ಕ್ರಮಕ್ಕೆ ಮುಂದಾಗಿ:
ಜಿಪಂ ಸಿಇಒ, ತಾಪಂ ಇಒ, ಬಿಇಒ, ಡಿಸಿಪಿಐ, ಎಇಇ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಸರ್ಕಾರಿ ಶಾಲೆಗಳ ಕಟ್ಟಡ ಸಮಸ್ಯೆ ಬಗ್ಗೆ ಬಂದಿರುವ ದೂರುಗಳನ್ನು ಪರಿಶೀಲನೆ ನಡೆಸಬೇಕು. ಸ್ಥಳ ಪರಿಶೀಲನೆ ನಡೆಸಿ ಅಲ್ಲೇ ನಿರ್ಧಾರಮಾಡಬೇಕು, ರಿಪೇರಿ ಮಾಡಬಹುದಾ ಅಥವಾ ಇಲ್ಲವೇ ಎಂದು ತೀರ್ಮಾನಿಸಿ ತೆರವು ಮಾಡುವುದಿದ್ದರೂ ತುರ್ತು ಕ್ರಮಕ್ಕೆ ಮುಂದಾಗಿ ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಗ್ಗೆ ತುರ್ತು ಪರಿಶೀಲನೆಗೆ ಸಚಿವರು ಕೆಡಿಪಿ ಸಭೆಯಲ್ಲೇ ಸಮಿತಿ ನೇಮಿಸಿದರು. ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಗ್ಗೆ ಗಂಭೀರ ಚರ್ಚೆ ನಡೆದ ಬಳಿಕ ತುರ್ತಾಗಿ ಸಮಿತಿ ರಚನೆ ಮಾಡಿ ಇದರಲ್ಲಿ ಇರುವವರು ಶೀಘ್ರವೇ ಕಾರ್ಯೋನ್ಮುಖರಾಗಿ ಎಂದು ತಾಕೀತು ಮಾಡಿದರು.
ಒಬ್ಬೊಬ್ಬರು ಒಂದೊಂದು ಕಾನೂನು ಹೇಳ್ತಾರೆ:
ಎತ್ತಿನಹೊಳೆ ಯೋಜನೆ ಸಾಕಾರಗೊಳ್ಳಲು ಇಲಾಖೆಯಿಂದ ತೊಂದರೆ ನೀಡಲಾಗುತ್ತಿದೆ ಎಂದು ಕೆಎಂ ಶಿವಲಿಂಗೇಗೌಡರು ಸಭೆಯ ಗಮನಕ್ಕೆ ತಂದರು.ಈ ವೇಳೆ ಮಾತನಾಡಿದ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಎತ್ತಿನಹೊಳೆ ಯೋಜನೆ ಈಗಾಗಲೇ 20 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಆದರೆ ಕೆಲವೆಡೆ ಅರಣ್ಯ ಇಲಾಖೆ ಕೇವಲ ನಾಲ್ಕು ಕಿಲೋ ಮೀಟರ್ ನಾಲೆ ನಿರ್ಮಿಸಲು ತೊಂದರೆ ನೀಡುತ್ತಿದ್ದಾರೆ. ನಾವು ಪಾಕಿಸ್ತಾನದಲ್ಲಿದ್ದೆವೊ ಅಥವಾ ಭಾರತದಲ್ಲಿದ್ದೆವೊ, ಏಕೆ ನಮಗೆ ನೀರು ಹರಿಸಲು ತೊಂದರೆ ನೀಡುತ್ತಿದ್ದೀರಿ ಎಂದು ಸ್ಥಳದಲ್ಲೇ ಇದ್ದ ಡಿಸಿಎಫ್ ಸೌರಭ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಕಾಮಗಾರಿಗೆ ಅರಣ್ಯ ಇಲಾಖೆಯಿಂದ ತೊಂದರೆ ಕೇವಲ ನಾಲೆ ಮಾಡೋಕೆ ಬಿಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು .ಈ ವೇಳೆ ಪ್ರತಿಕ್ರಿಯೆ ನೀಡಿದ ಡಿಸಿಎಫ್ ಅವರು ಕೇಂದ್ರ ಅರಣ್ಯ ನೀತಿ ಕಾರಣ ವಿಳಂಬವಾಗುತ್ತಿದೆ ಎಂದು ಹೇಳಿದರು. ಈ ಸಮಸ್ಯೆ ಸಂಬಂಧ ಕಡತವನ್ನು ದೆಹಲಿ ಮಟ್ಟಕ್ಕೆತೆಗೆದುಕೊಂಡು ಹೋಗಿ ಸಮಸ್ಯೆ ಬಗೆಹರಿಸುವುದು ಒಂದೇ ಸ್ಮಶಾನಕ್ಕೆ ಹೋಗುವುದು ಒಂದೇ ಎಂದು ಸಭೆಯಲ್ಲಿ ಕೆ.ಎಂ. ಶಿವಲಿಂಗೇಗೌಡರು ಖಾರವಾಗಿ ಪ್ರತಿಕ್ರಿಯೆ ನೀಡಿದರು. ಒಬ್ಬೊಬ್ಬ ಡಿಸಿಎಫ್ ಬಂದಾಗ ಒಂದೊಂದು ಕಾನೂನು ಹೇಳುತ್ತಾರೆ.
ಇದನ್ನು ಬಗೆಹರಿಸುವುದೇ ದೊಡ್ಡತಲೆ ನೋವಾಗಿದೆ ಎಂದರು. ಶನಿವಾರ ನಡೆದ ಕೆಡಿಪಿ ಸಭೆಗೆ ಶಾಸಕ ಎಚ್.ಪಿ. ಸ್ವರೂಪ್ ಹಾಗೂ ಸಿ.ಎನ್. ಬಾಲಕೃಷ್ಣ ಒಟ್ಟಿಗೆ ಒಂದೇ ಬಣ್ಣದ ಶರ್ಟ್ ಹಾಕಿಕೊಂಡು ಆಗಮಿಸುತ್ತಿದ್ದಂತೆ ಸಚಿವ ರಾಜಣ್ಣ ಅವರು ಇಬ್ಬರೂ ಒಟ್ಟಿಗೇ ಬಂದ್ರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ಸ್ವರೂಪ್ ಪ್ರಕಾಶ್ ಇಲ್ಲ ಬೇರೆ ಬೇರೆ ಬಂದಿದ್ದೇವೆ ಎಂದರು.
ಆದರೆ ಇಬ್ಬರೂ ಒಂದೇ ತರಹದ ಶರ್ಟ್ ಧರಿಸಿದ್ದನ್ನು ಗಮನಿಸಿದ ಸಚಿವರು, ಒಂದೇ ತರದ ಶರ್ಟ್ ಹಾಕಿಕೊಂಡು ಬಂದಿದೀರಲ್ಲಾ ಅದಕ್ಕೆ ಕೇಳ್ದೆ ಎಂದು ಹಾಸ್ಯವಾಗಿ ಮಾತನಾಡಿದರು. ನಂತರ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಕೂಡ ಹಾಸ್ಯವಾಗಿ ಮಾತನಾಡುತ್ತಾ, ಸಚಿವ ರಾಜಣ್ಣ ಅವರು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮುಂದುವರಿಯುವಂತೆ ಮನವಿ ಮಾಡಿದರು.
ಮಾಧ್ಯಮಗಳಲ್ಲಿ ನೀವು ಬದಲಾಗುತ್ತಾರೆ ಅಂಥ ಸುದ್ದಿ ಬರುತ್ತಿದೆ. ನೀವೇ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆ ಕೆಲಸಗಳಾಗುತ್ತವೆ ಎಂದು ಅವರು ಹೇಳಿದರು. ಈ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಕೆ.ಎನ್. ರಾಜಣ್ಣ ನಾನು ಹಾಸನ ಬೇಡ ಎಂದು ಬರೆದು ಕೊಟ್ಟು ಒಂದೂವರೆ ತಿಂಗಳಾಗಿದೆ ಎಂದರು. ಇದನ್ನು ಕೇಳಿದ ಶಾಸಕ ಬಾಲಕೃಷ್ಣ ನಮ್ಮ ಜಿಲ್ಲೆಯಲ್ಲಿ ನೀವೇ ಮುಂದುವರಿಯಿರಿ ನಿಮ್ಮ ಸಹಕಾರದಿಂದ ಜಿಲ್ಲೆಯ ಜನರಿಗೆ ಅನುಕೂಲ ಆಗುತ್ತೆ ನೀವೆ ಮುಂದುವರೆಯಿರಿ ಎಂದು ವಿಶ್ವಾಸದಲ್ಲಿ ಹೇಳಿದರು. ಈ ಬಗ್ಗೆ ಸಚಿವ ರಾಜಣ್ಣ ಸ್ಪಷ್ಟತೆ ನೀಡುತ್ತಾ, ನಾನು ಇದಕ್ಕೆ ಸಂಬಂಧಪಟ್ಟಂತೆ ಬರೆದು ಕೊಟ್ಟಿದ್ದೇನೆ ಎಂದು ಉತ್ತರಿಸಿದರು.
ಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಎಚ್.ಪಿ. ಸ್ವರೂಪ್ ಉಪಸ್ಥಿತರಿದ್ದರು.