ಸಾರಾಂಶ
ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಸಂತ್ರಸ್ತರಾಗಿರುವ ಕುಟುಂಬ ವರ್ಗಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹನೂರು
ಸುಳ್ವಾಡಿ ವಿಷಪ್ರಾಶನ ಸಂತ್ರಸ್ತರು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಿ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದರು.ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ 6 ವರ್ಷಗಳ ಹಿಂದೆ ವಿಷ ಪ್ರಸಾದ ಸೇವಿಸಿ 17 ಜನ ಮೃತಪಟ್ಟು 150ಕ್ಕೂ ಹೆಚ್ಚು ಸಂತ್ರಸ್ತರು ವಿವಿಧ ನೂನ್ಯತೆಯಿಂದ ವಿಕಲಾಂಗರಾಗಿದ್ದು, ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರಿಗೆ ರಾಜ್ಯ ಸರ್ಕಾರದ ಮೂಲಕ ಸಚಿವರು ನೆರವು ಮತ್ತು ಅಗತ್ಯ ಚಿಕಿತ್ಸೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಸಚಿವರಿಂದ ಜಿಲ್ಲಾಧಿಕಾರಿಗೆ ಸೂಚನೆ:ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಸುಳ್ವಾಡಿ ಸಂತ್ರಸ್ತರು ಭೇಟಿ ಮಾಡಿದ್ದ ಸಂದರ್ಭದಲ್ಲಿ ಸಚಿವರು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ದೂರವಾಣಿ ಕರೆ ಮೂಲಕ ಸೂಚನೆ ನೀಡಿ ಇದುವರೆಗೂ ಸುಳ್ವಾಡಿ ವಿಷಪ್ರಸಾದದಲ್ಲಿ ಸಾವನ್ನಪ್ಪಿರುವ ಕುಟುಂಬದವರಿಗೆ ನೀಡಬೇಕಾಗಿರುವ ಸೂಕ್ತ ಪರಿಹಾರದ ಬಗ್ಗೆ ಹಾಗೂ 150ಕ್ಕೂ ಹೆಚ್ಚು ಜನ ಇನ್ನೂ ಸಹ ಹಳೆ ಮಾರ್ಟಳ್ಳಿ, ಬಿದರಳ್ಳಿ, ಹಾಗೂ ಮುತ್ತುಸ್ವಾಮಿ, ದೊರೆದೊಡ್ಡಿಯ ವಿಷ ಪ್ರಸಾದ ಸೇವನೆ ಸಂತ್ರಸ್ತರು ಗುಣಮುಖರಾಗದೆ ನಲಗುತ್ತಿದ್ದಾರೆ.
ಸಂತ್ರಸ್ತರಿಗೆ ಆರ್ಥಿಕ ಸಹಾಯ ಹಾಗೂ ಚಿಕಿತ್ಸೆಗಳ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಮತ್ತು ಅವರಿಗೆ ಬೇಕಾಗಿರುವ ಸಂಪೂರ್ಣ ಸೌಲತ್ತು ವಿತರಿಸಲು ಮತ್ತು ಪರಿಹಾರ ಹೆಚ್ಚಿನ ರೀತಿಯಲ್ಲಿ ದೊರಕುವಂತೆ ಮಾಡಲು ಕಾನೂನಿನಲ್ಲಿ ಇರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸುಳ್ವಾಡಿ ವಿಷ ಪ್ರಸಾದ ಸಂತ್ರಸ್ತರಿಗೆ ನೆರವು ನೀಡಲು ಸಂಪೂರ್ಣ ವರದಿ ನೀಡುವಂತೆ ತಿಳಿಸಿದರು. ಸಾಮಾಜಿಕ ಕಾರ್ಯಕರ್ತ ಪಿ.ಜಿ.ಮಣಿ ಹಾಗೂ ಬಿದರಳ್ಳಿ ಮತ್ತು ಸ್ವಾಮಿ ದೊಡ್ಡಿ, ಹಳೆ ಮಾರ್ಟಳ್ಳಿ ವಿವಿಧ ಗ್ರಾಮದ ಸಂತ್ರಸ್ತರು ಇದ್ದರು.