ಸಾರಾಂಶ
ಬೇಲೂರು: ಜಿಲ್ಲಾ ಕೆಡಿಪಿ ಸದಸ್ಯೆ ಬಿ.ಎಂ ಸೌಮ್ಯ ಆನಂದ್ ಅವರು ಸಹಕಾರ ಸಚಿವ, ಉಸ್ತುವಾರಿ ಕೆ.ಎನ್.ರಾಜಣ್ಣನವರಿಗೆ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಕೊಠಡಿಯನ್ನು ಉನ್ನತೀಕರಿಸಲು, ಈಗಿರುವ ತಾಲೂಕು ಆರೋಗ್ಯಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಮನವಿ ಪತ್ರ ಸಲ್ಲಿಸಿದರು. ಸ್ಥಳೀಯವಾಗಿಯೂ ನೂರಾರು ಜನ ಪ್ರತಿನಿತ್ಯ ರೋಗ ತಪಾಸಣೆಗೆ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಆಗಮಿಸುತ್ತಾರೆ. ಆದರೆ ಅದಕ್ಕೆ ಅನುಗುಣವಾಗಿ ತುರ್ತು ಚಿಕಿತ್ಸಾ ಕೊಠಡಿ ಇಲ್ಲದೇ ತೊಂದರೆಯಾಗುತ್ತಿದೆ. ತುರ್ತು ಚಿಕಿತ್ಸಾ ಕೊಠಡಿ ಮೇಲ್ದರ್ಜೆಗೇರಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡುವ ಬದಲು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕೊಠಡಿಯನ್ನು ಮೇಲ್ದರ್ಜೆಗೇರಿಸಲು ಆರೋಗ್ಯ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ತಾಲೂಕು ಆಡಳಿತಾಧಿಕಾರಿಗಳ ಕಚೇರಿಗೆ ಪರ್ಯಾಯವಾಗಿ 4 ವರ್ಷದ ಹಿಂದೆ ಆಸ್ಪತ್ರೆ ಕಟ್ಟಡ ಮೇಲ್ಭಾಗದಲ್ಲಿ ದೊಡ್ಡದಾಗಿ ಕಚೇರಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದರೂ ತಾಲೂಕು ಆರೋಗ್ಯಾಧಿಕಾರಿಗಳು ಸ್ಥಳಾಂತರಗೊಳ್ಳುತ್ತಿಲ್ಲ. ಇದರಿಂದಾಗಿ ತುರ್ತು ಚಿಕಿತ್ಸಾ ಕೊಠಡಿ ಮೇಲ್ದರ್ಜೆಗೆ ಏರಿಸಲು ಅಡ್ಡಿಯಾಗಿದೆ. ಆಸ್ಪತ್ರೆಯ ಮಹಡಿ ಮೇಲಿರುವ ಹೊಸ ಕೊಠಡಿಗೆ ತಾಲೂಕು ಆರೋಗ್ಯಾಧಿಕಾರಿಗಳ ಕೊಠಡಿಯನ್ನು ಸ್ಥಳಾಂತರ ಮಾಡುವಂತೆ ಸೂಚನೆ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.