ಮಳೆ-ನೆರೆಗೊಳಗಾದವರಿಗೆ ಸಚಿವರ ವಿಡಿಯೋ ಕಾನ್ಫ್‌ರೆನ್ಸ್‌ ಸಾಂತ್ವನ!

| Published : Aug 26 2025, 01:02 AM IST

ಮಳೆ-ನೆರೆಗೊಳಗಾದವರಿಗೆ ಸಚಿವರ ವಿಡಿಯೋ ಕಾನ್ಫ್‌ರೆನ್ಸ್‌ ಸಾಂತ್ವನ!
Share this Article
  • FB
  • TW
  • Linkdin
  • Email

ಸಾರಾಂಶ

Minister's video conference offers consolation to those affected by rain!

-ನೆರೆ ಹಾವಳಿ ಎದುರಿಸಲು ಸನ್ನದ್ಧರಾಗಿ, ವಿಳಂಬ ಮಾಡದೆ ಪರಿಹಾರ ಕೊಡಿ: ಪ್ರಿಯಾಂಕ್ ಖರ್ಗೆ

--

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಾದ್ಯಂತ ಸುರಿದ ಸತತ ಮಳೆ ಮತ್ತು ಮುಂದಿನ ದಿನದಲ್ಲಿ ಸಂಭಾವ್ಯ ನೆರೆ ಹಾವಳಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಸಿದ್‌ದರಾಗಿರುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.

ಸೋಮವಾರ ವೀಡಿಯೋ ಕಾನ್ಫೆರೆನ್ಸ್ ಮೂಲಕ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನೆರೆ ಹಾವಳಿಯಿಂದ ಯಾವುದೇ ರೀತಿಯ ಜನ-ಜಾನುವಾರು ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಬೇಕು. ಮಳೆಯಿಂದ ಮನೆ ಕುಸಿದು ಬಿದ್ದಲ್ಲಿ, ಭಾಗಶ: ಹಾನಿಯಾದಲ್ಲಿ ಎನ್.ಡಿ.ಆರ್.ಎಫ್./ನಿಯಮಾವಳಿ ಪ್ರಕಾರ ತಕ್ಷಣವೇ ಪರಿಹಾರ ಒದಗಿಸಬೇಕು. ಯಾವುದೇ ವಿಳಂಬ ಸಲ್ಲದು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸಹಾಯಕ ಆಯುಕ್ತರು, ತಹಸೀಲ್ದಾರರು ಹಾಗೂ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ನದಿ ದಂಡೆ ಪ್ರದೇಶದಲ್ಲಿ ನೆರೆ ಹಾವಳಿಗೆ ತುತ್ತಾಗುವ ಸಂಭಾವ್ಯ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರ ನಿಮ್ಮೊಂದಿಗೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಎಲ್ಲಾ ರೀತಿಯ ಸುರಕ್ಷತೆಯ ನೆರವು ಖಾತ್ರಿಪಡಿಸಬೇಕು ಎಂದರು.

ಸಮೀಕ್ಷೆ ವರದಿ ನಿಖರವಾಗಿರಲಿ: ಪ್ರವಾಹ ಪೀಡಿತ ಪ್ರದೇಶದಲ್ಲಿ ಬೆಳೆ ಹಾನಿ ಕುರಿತು ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ವರದಿ ಕೊಡಲಿ. ಸಮೀಕ್ಷೆಗೂ ಮುನ್ನ ಗ್ರಾಮದಲ್ಲಿ ಡಂಗೂರ ಸಾರಬೇಕು. ಹೆಚ್ಚಿನ ಪ್ರಚಾರ ನೀಡಿದಲ್ಲಿ ಮಾತ್ರ ರೈತರು ಪರಿಹಾರ ಪಡೆಯಲು ಸಾಧ್ಯ. ಬೆಳೆ ಹಾನಿ ವರದಿ ಕಾಟಾಚಾರವಾಗಿರದೆ ನಿಖರವಾಗಿರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಾಲೂಕಿನ ತಹಸೀಲ್ದಾರರು ತಾ.ಪಂ ಇಒ ಗಳು ಇದರ ಸಂಪೂರ್ಣ ಹೊಣೆಗಾರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಳೆಯಿಂದಾದ ಬೆಳೆ, ರಸ್ತೆ, ಮನೆ ಹಾನಿ ಕುರಿತು ವಿವರಿಸಿದರು.

67 ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, 51 ಕೆರೆಗಳು ಶೇ.90ರಷ್ಟು ಭರ್ತಿಯಾಗಿವೆ. ಜಿಲ್ಲೆಯಾದ್ಯಂತ ಪ್ರವಾಹಕ್ಕೆ ತುತ್ತಾಗುವ 153 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿದ್ದು, ಪ್ರವಾಹ ಬಂದಲ್ಲಿ ಸ್ಥಳೀಯರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು 90 ಕಾಳಜಿ ಕೇಂದ್ರ ಸಹ ಗುರುತಿಸಿದೆ. ಅದೇ ರೀತಿ ಜಾನುವಾರುಗಳಿಗೆ ತಾತ್ಕಲಿಕ 40 ಗೋಶಾಲೆ ತೆರೆಯಲು ಸಹ ಯೋಜನೆ ರೂಪಿಸಲಾಗಿದೆ. ಇನ್ನು ಗ್ರಾಮವಾರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ನೆರೆ ಹಾವಳಿ ಕಾರ್ಯಕ್ಕೆ ತಾಲೂಕಾಡಳಿತದೊಂದಿಗೆ ಸಮನ್ವಯ ಸಾಧಿಸಲು ಸೂಚಿಸಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕಲಬುರಗಿ ನಗರ ಪೊಲೀಸ್‌ ಆಯುಕ್ತ ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಒ ಭವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಲೋಕೋಪಯೋಗಿ ಇಲಾಖೆಯ ಇ.ಇ. ಸುಭಾಷ ಬಿರಾದಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲಾ, ಸಹಾಯಕ ಆಯುಕ್ತರಾದ ಸಾಹಿತ್ಯ, ಪ್ರಭುರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕಿನ ತಹಸೀಲ್ದಾರರು, ತಾಲೂಕಾ ಪಂಚಾಯತ್ ಇ.ಒ ಗಳು ಭಾಗವಹಿಸಿದ್ದರು.

ಫೋಟೋ- ಖರ್ಗೆ ಮೀಟಿಂಗ್‌ ಮತ್ತು ಮೀಟಿಂಗ್‌ 1