ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯಲ್ಲಿ 10ನೇ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಪದೇ ಪದೇ ಕೊನೆ ಸ್ಥಾನಕ್ಕೆ ಬರುತ್ತಿರುವುದನ್ನು ತಡೆಯಲು ಜಿಲ್ಲಾದ್ಯಂತ ನಗರ ಮತ್ತು ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ, ಪ್ರತಿ ವರ್ಷ ಬೋರ್ಡ್ ಪರೀಕ್ಷೆಗಳಲ್ಲಿ ಜಿಲ್ಲೆಗೆ ಕೊನೆಯ ಸ್ಥಾನವೇ ಗತಿಯಾಗಿದ್ದು, ಇದಕ್ಕೆ ಕಾರಣಗಳೇನು ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಜಾಥಾ ಕೈಗೊಂಡಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಶಿಕ್ಷಣ ಸಚಿವರು ತಿಂಗಳಿಗೆ ಎರಡು ಬಾರಿ ಭೇಟಿ ನೀಡಬೇಕು. ಅಧಿಕಾರಿಗಳು ಸಂಘ-ಸಂಸ್ಥೆಗಳ ಶಾಲಾ ಮಕ್ಕಳ ಪೋಷಕರ ಜತೆಗೆ ಚರ್ಚಿಸಿ ಮೂಲ ಕಾರಣ ಪತ್ತೆ ಹಚ್ಚಿ ಕೆಲಸ ಮಾಡಬೇಕು. ಈ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು. ಶಾಲೆ ಆರಂಭವಾಗಿದ್ದು, ಶೀಘ್ರ ಎಲ್ಲ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಸ್ಥಾನಗಳನ್ನು ಭರ್ತಿ ಮಾಡಬೇಕು, ಅತಿಥಿ ಶಿಕ್ಷಕರನ್ನು ಹೆಚ್ಚಿನ ಪ್ರಮಾಣದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.ಶಾಲೆಗಳ ಕೊಠಡಿಗಳು ಮತ್ತು ಮೂಲಭೂತ ಸೌಕರ್ಯದಿಂದ ಪರದಾಡುವ ಸ್ಥಿತಿ ಬಂದಿದ್ದು, ಇದನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ತಿಂಗಳಿಗೊಮ್ಮೆ ಜಾಗೃತಿ ಮತ್ತು ಪಾಲಕರ ಸಭೆ ನಡೆಸಬೇಕು. ಮಕ್ಕಳ ಪ್ರಗತಿ ಪರಿಶೀಲನೆ ಮಾಡುವಂತೆ ಕ್ರಮ ವಹಿಸಬೇಕು. ಕಡ್ಡಾಯ ಹಾಜರಾತಿ ಆಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಅಭಿಯಾನವನ್ನು ನಿರಂತರವಾಗಿ ನಡೆಸಲಾಗುವುದು ಮತ್ತು ಯಾದಗಿರಿ ಜಿಲ್ಲೆ ಕೊನೆ ಸ್ಥಾನದ ಹಣೆ ಪಟ್ಟಿ ತೆಗೆಯುವವರೆಗೆ ಹೋರಾಟ ನಡೆಯಲಿದೆ ಎಂದು ತಿಳಿಸಿದರು.ಬೆಳಗೇರಾ ಮತ್ತು ಎಸ್. ಹೊಸಳ್ಳಿ ಗ್ರಾಮಸ್ಥರಾದ ಮುಕ್ತಾರ ಪಟೇಲ್, ಹಣಮಂತ, ಶರಣಪ್ಪ, ಚೆನ್ನಬಸಪ್ಪ, ಸದಾಶಿವಪ್ಪ, ಗೌಸ್, ಸಾಬಣ್ಣ, ರಫೀಕ್ ಪಟೇಲ್, ಬಾಬಾ, ಹಣಮಂತ, ಸಾಬಣ್ಣ ಕುರಕುಂದಿ, ಹೊನ್ನಪ್ಪ, ನಾಗಪ್ಪ ಗಮಗ, ಮಲ್ಲಯ್ಯ, ಮೋನೇಸ, ವೆಂಕಟೇಶ, ಆಶಪ್ಪ, ಬಸಪ್ಪ, ಆಂಜಿನೇಯ, ಭೀಮರಾಯ ಸೇರಿದಂತೆ ಇತರರಿದ್ದರು.