ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಐದು ವರ್ಷದ ಪುಟ್ಟ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಹತ್ಯೆಗೈದ ಬಿಹಾರ ಮೂಲದ ಆರೋಪಿ ರಿತೇಶಕುಮಾರನನ್ನು ಎನ್ಕೌಂಟರ್ ಮಾಡಿ ದಿಟ್ಟತನ ಪ್ರದರ್ಶಿಸಿರುವ ಇಲ್ಲಿನ ಅಶೋಕನಗರ ಠಾಣೆಯ ಪಿಎಸ್‌ಐ ಅನ್ನಪೂರ್ಣಾ ಮುಕ್ಕಣ್ಣವರ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು.ಘಟನೆಯಲ್ಲಿ ಗಾಯಗೊಂಡು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಎಸ್ಐ ಅನ್ನಪೂರ್ಣಾ ಅವರನ್ನು ಭೇಟಿ ಮಾಡಲು ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರೊಂದಿಗೆ ಹೋಗಿದ್ದ ಸಚಿವ ಲಾಡ್, ಆರೋಗ್ಯ ವಿಚಾರಿಸುವ ಮುನ್ನ ಪೊಲೀಸ್ ಸ್ಟೈಲಿನಲ್ಲಿ ಸೆಲ್ಯೂಟ್ ಹೊಡೆದು, ಕೈ ಕುಲುಕಿ ಪ್ರಶಂಸೆ ವ್ಯಕ್ತಪಡಿಸಿದರು.
ನಿಮ್ಮಂತ ದಿಟ್ಟ ಅಧಿಕಾರಿಗಳಿಂದ ಇಂಥ ಪಿಡುಗುಗಳಿಗೆ ಕಡಿವಾಣ ಹಾಕಲು ಸಾಧ್ಯ. ಮತ್ತೊಬ್ಬರಿಗೆ ಪ್ರೇರಣೆಯಾಗಿದ್ದೀರಿ, ಸರ್ಕಾರ ನಿಮ್ಮ ಶೌರ್ಯ, ಸಾಹಸ, ಕರ್ತವ್ಯ ನಿಷ್ಟೆನ್ನು ಗೌರವಿಸಲಿದೆ ಎಂದು ಅಭಿಮಾನದಿಂದ ಹೇಳಿದರು.ಬಳಿಕ ಕೆಎಂಸಿಆರ್‌ಐನ ಶವಾಗಾರಕ್ಕೆ ಭೇಟಿ ನೀಡಿ ಮೃತ ಮಗುವನ್ನು ನೋಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ:ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಸಮಾಜ ತಲೆ ತಗ್ಗಿಸುವ ಘಟನೆ ಇದಾಗಿದೆ. ಮಗುವಿನ ಮುಖ ನೋಡಲು ಆಗುತ್ತಿಲ್ಲ. ಬಾಲಕಿಯನ್ನು ಹತ್ಯೆಗೈದ ಆರೋಪಿ ಡ್ರಗ್ ಸೇವಿಸಿರುವ ಕುರಿತು ಮಾಹಿತಿ ಇಲ್ಲ, ಆರೋಪಿ ಮರಣೋತ್ತರ ಪರೀಕ್ಷೆ ಬಳಿಕ ಅದು ಗೊತ್ತಾಗಲಿದೆ. ಹುಬ್ಬಳ್ಳಿಯಲ್ಲಿ ಇನ್ನು ಮುಂದೆ ಮಹಿಳಾ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಹುಬ್ಬಳ್ಳಿ ಧಾರವಾಡದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಬಾಲಕಿ ಕುಟುಂಬಕ್ಕೆ ಈಗಾಗಲೇ ಪರಿಹಾರ ಘೋಷಣೆ ಮಾಡಿದೆ. ಜಮೀರ್ ಅಹ್ಮದ್ ಕೂಡ ವಸತಿ ಇಲಾಖೆಯಿಂದ ಮೃತ ಬಾಲಕಿ ಕುಟುಂಬಸ್ಥರಿಗೆ ಮನೆ ನೀಡುವ ಭರವಸೆ ನೀಡಿದ್ದಾರೆ. ಸರ್ಕಾರದ ಜೊತೆ ಮಾತನಾಡಿ ಇನ್ನೂ ಹೆಚ್ಚಿನ ಪರಿಹಾರಕ್ಕಾಗಿ ಮನವಿ ಮಾಡುತ್ತೇನೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.ಈ ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಸೇರಿದಂತೆ ಹಲವರಿದ್ದರು.