ಧಾರವಾಡ:

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೌಲಭ್ಯಗಳ ಹಂಚಿಕೆ ಮತ್ತು ಅನುದಾನ ಬಳಕೆ ಕುರಿತು ಉಸ್ತುವಾರಿ ಸಚಿವ ಸಂತೋಷ ಲಾಡ್ ಮತ್ತು ಕಾಂಗ್ರೆಸ್‌ ಪಕ್ಷದವರೇ ಆದ ವಿಧಾನಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಮಧ್ಯೆ ಏರುದನಿಯ ಮಾತಿನ ಚಕಮಕಿ ನಡೆಯಿತು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಎಫ್‌.ಎಚ್‌. ಜಕ್ಕಪ್ಪನವರ ಆಗಾಗ ಧ್ವನಿ ಎತ್ತುತ್ತಿದ್ದರು. ಜತೆಗೆ ಅಧಿಕಾರಿಗಳಿಗೆ ತರಾಟೆ ಸಹ ತೆಗೆದುಕೊಳ್ಳುತ್ತಿದ್ದರು. ಆದರಲ್ಲೂ ಸಮಾಜ ಕಲ್ಯಾಣ ಇಲಾಖೆ ಪ್ರಗತಿಯಲ್ಲಿ ತುಸು ಏರು ಧ್ವನಿಯಲ್ಲಿ ಜಕ್ಕಪ್ಪನವರ ಮಾತು ಆರಂಭಿಸಿದರು.

ಆಗ, ಸಂತೋಷ ಲಾಡ್‌ ನಿಧಾನವಾಗಿ ಮಾತನಾಡಿ ಎಂದು ಹೇಳುತ್ತಿದ್ದಂತೆ, ಸಹನೆ ಕಳೆದುಕೊಂಡ ಜಕ್ಕಪ್ಪನವರ, ಜಿಲ್ಲಾಡಳಿತವು ಎಸ್ಸಿ-ಎಸ್ಟಿ ಬಗ್ಗೆ ನಿಷ್ಕಾಳಜಿ ತೋರುತ್ತಿದೆ. ಸಭೆಯ ಮೊದಲಿನಿಂದಲೂ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ವೇದಿಕೆಯಲ್ಲಿಯೇ ಪರೋಕ್ಷವಾಗಿ ಲಾಡ್‌ ವಿರುದ್ಧ ಕಿಡಿಕಾರಿದರು. ಜತೆಗೆ ಅನ್ಯಾಯ ಖಂಡಿಸಿ ಉಪವಾಸ ಸತ್ಯಾಗ್ರಹಕ್ಕೆ ಇಳಿಯಬೇಕಾಗುತ್ತದೆ ಎಂದೂ ಎಚ್ಚರಿಸಿದರು.

ಹೋಗುವುದಾದರೆ ಹೋಗಿ:


ಅಧಿಕಾರಿಗಳ ಮಾತನ್ನು ತಾಳ್ಮೆಯಿಂದ ಕೇಳಿ. ಈ ರೀತಿ ಸುಮ್ಮನೇ ಆರೋಪ ಮಾಡಬೇಡಿ. ಅಧಿಕಾರಿಗಳಿಂದ ಎಲ್ಲ ಮಾಹಿತಿ ಪಡೆದುಕೊಳ್ಳಿ ಎಂದು ಲಾಡ್ ಸಮಾಧಾನ ಮಾಡಿದರೂ, ಮತ್ತಷ್ಟು ಸಿಟ್ಟಾದ ಜಕ್ಕಪ್ಪನವರ, ನನ್ನ ಧ್ವನಿಯೇ ಹೀಗಿದೆ. ನೀವು ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ಹೇಳುವುದನ್ನೂ ಕೇಳುತ್ತಿಲ್ಲ. ನಾವು ಎಸ್ಸಿ-ಎಸ್ಟಿ ಆಗಿ ಹುಟ್ಟಿದ್ದೇ ತಪ್ಪಾ? ಹೀಗಾದಲ್ಲಿ ನಾನು ಸಭೆಯಿಂದ ಹೋಗುತ್ತೇನೆ ಎಂದರು. ಆಗ ಪ್ರತ್ಯುತ್ತರ ನೀಡಿದ ಸಚಿವರು, ನಾನು ನಿಮಗೆ ಹೊರಗೆ ಹೋಗಿ ಅನ್ನುತ್ತಿಲ್ಲ. ನೀವು ಹೋಗುವುದಾದರೆ ಹೋಗಿ ಎನ್ನುತ್ತಿದ್ದಂತೆ ಜಕ್ಕಪ್ಪನವರ ಸಭೆಯಿಂದ ಎದ್ದು ಹೋಗಲು ಮುಂದಾದರು.

ಪರಿಸ್ಥಿತಿ ಕೈಮೀರುವ ಹಂತ ತಲುಪುತ್ತಿದ್ದಂತೆಯೇ ಸ್ಥಳದಲ್ಲಿದ್ದ ಬಿಜೆಪಿ ಶಾಸಕರಾದ ಎಂ.ಆರ್. ಪಾಟೀಲ, ಪ್ರದೀಪ ಶೆಟ್ಟರ್ ಅವರು ಜಕ್ಕಪ್ಪನವರ ಅವರನ್ನು ಕೂರಿಸಲು ಮುಂದಾದರು. ಮಾತು ಮುಂದುವರಿಸಿದ ಜಕ್ಕಪ್ಪನವರ, ಒಬ್ಬ ಶಾಸಕನಿಗೆ ಸಚಿವರು ಹೀಗೆ ಹೇಳುವುದು ಸರಿಯಲ್ಲ. ಸಮಾಜ ಕಲ್ಯಾಣ ಇಲಾಖೆ ಆದಿಯಾಗಿ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧವೇ ಕಿಡಿಕಾರಿದರು.

ಆಗ ಬೇಸತ್ತ ಸಚಿವ ಲಾಡ್‌, ಬೇಕಿದ್ದರೆ ನಾನು ಸಭೆಯಿಂದ ಹೊರ ನಡೆಯುತ್ತೇನೆ. ಸುಮ್ಮನೇ ಆರೋಪ ಮಾಡಬೇಡಿ. ನಿಮಗೆ ಮಾತನಾಡಲೂ ಅವಕಾಶ ನೀಡಲಾಗಿದೆ ಎಂದಾಗ ಸಭೆಯಲ್ಲಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ನನ್ನ ಧ್ವನಿಯಲ್ಲಿ ದರ್ಪ ಇದ್ದರೆ ಕ್ಷಮೆ ಕೇಳುವೆ ಎಂದು ಜಕ್ಕಪ್ಪನವರ ಹೇಳಿದರು.

ಬಾಯಿ ಇಲ್ಲದವರ ಪರವಾಗಿ ಇಂತಹ ಸಭೆಯಲ್ಲಿ ಮಾತನಾಡಬೇಕು ಎಂದು ಮಾತು ಆರಂಭಿಸಿದ ಜಕ್ಕಪ್ಪನವರ, ಗೌಳಿ ಸಮುದಾಯದ ಅನೇಕರಿಗೆ ಸಾಗುವಳಿ ಚೀಟಿ ನೀಡುತ್ತಿಲ್ಲ. ಅದೇ ಪ್ರದೇಶದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ ಮಿರ್ಜಿ ಅವರಿಗೆ 120 ಎಕರೆ ಜಮೀನಿಗೆ ಸಾಗುವಳಿ ಚೀಟಿ ನೀಡಲಾಗಿದೆ ಎಂದರು.

ಆಗ, ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಸಂತೋಷ ಲಾಡ್, ಅರಣ್ಯ ಕಾಯ್ದೆಯಡಿ ಸಾಗುವಳಿ ಚೀಟಿ ನೀಡಲು ಕೆಲ ದಾಖಲೆಗಳು ಬೇಕು. ಆದರೆ, ಹಲವರಲ್ಲಿ ಅವು ಇಲ್ಲ. ಅವರೆಲ್ಲರಿಗೂ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತಿದ್ದೇವೆ. ಜ್ಯೋತಿಪ್ರಕಾಶ ಮಿರ್ಜಿ ಅವರಿಗೆ ನೀಡಲಾದ ಜಮೀನು ಯಾವ ರೀತಿಯ ಜಮೀನು ಎಂಬುದನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.