ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮೈಸೂರಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರು, ತಮ್ಮ ಬೆಂಬಲರನ್ನು ಭೇಟಿಯಾದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಸಂಜೆ ವೇಳೆಗೆ ಸತೀಶ್ ಜಾರಕಿಹೊಳಿ ಭೇಟಿಯಾಗಿ, ದಸರಾ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿರುವ ಸತೀಶ್ ಜಾರಕಿಹೊಳಿ ಅವರು, ದೆಹಲಿ ಭೇಟಿಯ ನಂತರ ಫುಲ್ ಅಲರ್ಟ್ ಆಗಿ ರಾಜ್ಯದ ಪ್ರಮುಖ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರ ಮನೆ ಹಾಗೂ ನಮ್ಮ ಮನೆ ಅಕ್ಕ ಪಕ್ಕ ಇವೆ. ಪ್ರತಿನಿತ್ಯ ನಾವು ಭೇಟಿ ಆಗುತ್ತಿರುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಉಪಾಹಾರ- ಮಾತುಕತೆ:ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ಅವರ ಸುಣ್ಣದಕೇರಿಯಲ್ಲಿ ಮನೆಗೆ ಭೇಟಿ ನೀಡಿದ ಸಚಿವ ಸತೀಶ್ ಜಾರಕಿಹೋಳಿ ಅವರು, ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದರು.
ಇದೇ ವೇಳೆ ಎಚ್.ಡಿ. ಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಜಂಗಲ್ ಲಾಡ್ಜ್ ಅಧ್ಯಕ್ಷ ಅನಿಲ್ ಚಿಕ್ಕಮಾದು ಅವರು, ಸತೀಶ್ ಜಾರಕಿಹೋಳಿ ಭೇಟಿಯಾದರು.ಇದಾದ ನಂತರ ಕೆ.ಜಿ. ಕೊಪ್ಪಲಿನಲ್ಲಿರುವ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಹರೀಶ್ ಗೌಡ ಅವರ ಮನೆಗೆ ಭೇಟಿ ನೀಡಿದ ಸಚಿವರು, ಈ ವೇಳೆ ಕೆ. ಹರೀಶ್ ಗೌಡ, ಕೆ.ಆರ್. ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ. ರವಿಶಂಕರ್, ಮೂಡಾ ಅಧ್ಯಕ್ಷ ಕೆ. ಮರೀಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರೊಂದಿಗೆ ಮಾತುಕತೆ ನಡೆಸಿದರು.
ಅಭ್ಯರ್ಥಿ ಸರಿ ಇಲ್ಲದಿರುವುದೇ ಕಾರಣ:ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರವನ್ನು ಗೆಲ್ಲಬಹುದಿತ್ತು ಎಂದು ಸಚಿವ ಸತೀಶ್ ಜಾರಕಿಹೋಳಿ ಹೇಳಿದರು. ಇದಕ್ಕೆ ಶಾಸಕರಾದ ಡಿ. ರವಿಶಂಕರ್, ಕೆ. ಹರೀಶ್ ಗೌಡ ಅವರು, ನಮ್ಮ ಕ್ಯಾಂಡಿಡೇಟ್ ಸರಿ ಇರಲಿಲ್ಲ ಎಂದು ಪ್ರತಿಕ್ರಿಯಿಸಿದರು.
‘ಸತೀಶ್ ಜಾರಕಿಹೋಳಿ ಅವರು ಮೈಸೂರಿಗೆ ಬಂದಾಗ ಎಲ್ಲರನ್ನೂ ಭೇಟಿ ಮಾಡುವುದು ಮಾಮೂಲು. ಅದೇ ರೀತಿ ಇಂದು ಕೂಡ ನನ್ನ ಮನೆಗೆ ಬಂದಿದ್ದರು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ.’- ಕೆ. ಹರೀಶ್ ಗೌಡ, ಶಾಸಕ