ಚಿಮ್ಮಡ ಜಿಎಲ್ಬಿಸಿಗೆ ಕಾಲುವೆಗೆ ಸಚಿವ ಸತೀಶ ಜಾರಕಿಹೊಳಿ ಭೇಟಿ

| Published : Jan 09 2024, 02:00 AM IST

ಚಿಮ್ಮಡ ಜಿಎಲ್ಬಿಸಿಗೆ ಕಾಲುವೆಗೆ ಸಚಿವ ಸತೀಶ ಜಾರಕಿಹೊಳಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಲಿಂಗಪುರ: ಚಿಮ್ಮಡ ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆಗೆ (ಜಿಎಲ್ಬಿಸಿ) ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೀಳಗಿ ಭಾಗದಲ್ಲಿ ನೀರು ಪೂರೈಕೆಯಾಗುತ್ತಿಲ್ಲ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿದರು. ನೀರಾವರಿ ಇಲಾಖೆ ಅಧಿಕಾರಿಗಳು, ಮುಖಮಡರು, ರೈತರು ಇದ್ದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಚಿಮ್ಮಡ ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆಗೆ (ಜಿಎಲ್ಬಿಸಿ) ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತೀವ್ರ ಮಳೆ ಕೊರತೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆ, ಚೆಕ್ ಡ್ಯಾಮ್‌ ಗಳನ್ನು ತುಂಬಿಸಲು ಒಂದು ವಾರದಿಂದ ಇಲ್ಲಿನ ಜಿಎಲ್ಬಿಸಿ ಕಾಲುವೆಯ ಮೂಲಕ ನೀರು ಹರಿಸಲಾಗುತ್ತಿದ್ದು, ಬೀಳಗಿ ಭಾಗದಲ್ಲಿ ನೀರು ಪೂರೈಕೆಯಾಗುತ್ತಿಲ್ಲ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿದರು.

ಈ ಭಾಗದಲ್ಲಿ ಹಲವು ಕೆರೆಗಳು ಭರ್ತಿಯಾಗಿವೆ. ಕೆಲವು ಕೆರೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ರಾಯಬಾಗ ಭಾಗದಿಂದ ಈ ಭಾಗಕ್ಕೆ ನೀರು ಸಮರ್ಪಕವಾಗಿ ಬರುತ್ತಿಲ್ಲ. ಹೀಗಾಗಿ ಬೀಳಗಿ ಭಾಗಕ್ಕೆ ನೀರು ತಲುಪುತ್ತಿಲ್ಲವೆಂದು ಹಲವು ರೈತರು ಅಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿದರು. ನೀರು ತಲುಪಿದ ಭಾಗದಲ್ಲಿ ನೀರು ಹರಿಸುವುದನ್ನು ನಿಲ್ಲಿಸಿ, ತಲುಪದ ಕಡೆ ಮಾತ್ರ ನೀರು ಹರಿಸುವಂತೆ ಶಾಸಕ ಸಿದ್ದು ಸವದಿ ಅಧಿಕಾರಿಗಳಿಗೆ ಸೂಚಿಸಿದರು. ನೀರು ನಿಲ್ಲಿಸಿದರೆ ರೈತರು ಒಪ್ಪುವುದಿಲ್ಲ ಇದರಿಂದ ಸಮಸ್ಯೆಯಾಗಲಿದೆ ಎಂದು ಅಧಿಕಾರಿಗಳು ಮನವರಿಕೆ ಮಾಡಿದರು.

ಬೀಳಗಿ ಕೊನೆಯ ಭಾಗದವರೆಗೆ ಸಮರ್ಪಕ ನೀರು ಪೂರೈಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಳ್ಳಬೇಕು. ಅವಶ್ಯವೆನಿಸಿದರೆ ಇತರ ಇಲಾಖೆಗಳ ಸಹಕಾರ ಪಡೆದು ಎಲ್ಲ ಭಾಗಗಳ ಕೆರೆ, ಬಾಂದಾರ ಭರ್ತಿಯಾಗುವಂತೆ ನೋಡಿಕೊಳ್ಳಬೇಕೆಂದು ಸಚಿವರು ಸೂಚಿಸಿದರು.

ನೀರಾವರಿ ಇಲಾಖೆ ಬೆಳಗಾವಿ ಉತ್ತರ ಭಾಗದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಆರ್. ರಾಠೋಡ, ಜಮಖಂಡಿ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಶಾಂತ ಗಿಡದಪ್ಪನವರ, ಘಟಪ್ರಭಾ ಕಾರ್ಯ ನಿರ್ವಾಹಕ ಅಧಿಕಾರಿ ನಾಗೇಶ ಕೋಲಕರ, ಜಮಖಂಡಿಯ ಶ್ರೀಶೈಲ ಕಲ್ಯಾಣಿ, ಬೀಳಗಿಯ ಎಚ್. ಆರ್. ಮಾರಡ್ಡಿ ಹಾಗೂ ಕಾಂಗ್ರೆಸ್ ಧುರೀಣ ಸಿದ್ದು ಕೋಣ್ಣೂರ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ಉಮೇಶ ಪೂಜಾರಿ, ಅಶೋಕ ಧಡೂತಿ, ಕಿರಣ ಕರಲಟ್ಟಿ, ಸೇರಿದಂತೆ ಹಲವಾರು ಜನ ರೈತ ಪ್ರಮುಖರು ಉಪಸ್ಥಿತರಿದ್ದರು.