ಅಧಿಕಾರಿಗಳು ಲಂಚ ಕೇಳಿದರೆ ತಮ್ಮ ಗಮನಕ್ಕೆ ತರಬೇಕು, ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಮತ್ತು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಚಿವರು ಸ್ಪಷ್ಟವಾಗಿ ಹೇಳಿದ್ದರು. ಇದಾದ ಬಳಿಕ ಮಾತಿನ ಸಂದರ್ಭದಲ್ಲಿ ಸಚಿವರು, ಸಾರ್ವಜನಿಕರ ಕೆಲಸ ಮಾಡಿಕೊಟ್ಟ ಅಧಿಕಾರಿಗಳನ್ನು ಗೌರವದಿಂದ ಭೇಟಿ ಮಾಡಿ ಎಂದು ಹೇಳಿದ್ದನ್ನು ಕೆಲವರು ‘ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಿ’ ಎಂಬ ಅರ್ಥದಲ್ಲಿ ಬಿಂಬಿಸಿದ್ದಾರೆ. ಇದು ವಾಸ್ತವಕ್ಕೆ ದೂರವಾದ ಆರೋಪವಾಗಿದೆ ಎಂದು ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಕಲೇಶಪುರದಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಜನರು ತಮ್ಮ ಕೆಲಕಾರ್ಯ ಮಾಡಿಸಿಕೊಳ್ಳಲು ಅಧಿಕಾರಿಗಳಿಗೆ ‘ಗೌರವಯುತವಾಗಿ ಏನು ಕೊಡಬೇಕೋ ಅದನ್ನು ಕೊಡಿ’ ಎಂದು ಎಲ್ಲಿಯೂ ಹೇಳಿಲ್ಲ. ಅವರ ಹೇಳಿಕೆಯನ್ನು ಕೆಲವರು ರಾಜಕೀಯ ದುರುದ್ದೇಶದಿಂದ ತಿರುಚಿ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಮೂಡಿಸುತ್ತಿದ್ದಾರೆ ಎಂದು ಅರಸೀಕೆರೆ ತಾಲೂಕಿನ ನಗರಸಭಾ ಮಾಜಿ ಸದಸ್ಯ ಉಮಾಶಂಕರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಸರ್ವೆ ಇಲಾಖೆಯಲ್ಲಿ ಲಂಚದ ಬೇಡಿಕೆ ಹೆಚ್ಚಾಗಿದೆ ಎಂದು ಕಾರ್ಯಕ್ರಮದಲ್ಲಿ ರೈತರು ಹಾಗೂ ಸಾರ್ವಜನಿಕರು ಸಚಿವರ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಸ್ಥಳದಲ್ಲೇ ಎಡಿಎಲ್‌ಆರ್‌ ಅವರನ್ನು ಕರೆಸಿ, ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಡುವುದು ಗಂಭೀರ ಅಪರಾಧ ಎಂದು ಎಚ್ಚರಿಸಿದ್ದರು. ಅಧಿಕಾರಿಗಳು ಲಂಚ ಕೇಳಿದರೆ ತಮ್ಮ ಗಮನಕ್ಕೆ ತರಬೇಕು, ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಮತ್ತು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಚಿವರು ಸ್ಪಷ್ಟವಾಗಿ ಹೇಳಿದ್ದರು. ಇದಾದ ಬಳಿಕ ಮಾತಿನ ಸಂದರ್ಭದಲ್ಲಿ ಸಚಿವರು, ಸಾರ್ವಜನಿಕರ ಕೆಲಸ ಮಾಡಿಕೊಟ್ಟ ಅಧಿಕಾರಿಗಳನ್ನು ಗೌರವದಿಂದ ಭೇಟಿ ಮಾಡಿ ಎಂದು ಹೇಳಿದ್ದನ್ನು ಕೆಲವರು ‘ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಿ’ ಎಂಬ ಅರ್ಥದಲ್ಲಿ ಬಿಂಬಿಸಿದ್ದಾರೆ. ಇದು ವಾಸ್ತವಕ್ಕೆ ದೂರವಾದ ಆರೋಪವಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಡಿಪಿ ಸದಸ್ಯ ಹಾಗೂ ತಾಲೂಕು ಬೋವಿ ಕಮಿಟಿ ಅಧ್ಯಕ್ಷ ಕುಮಾರಸ್ವಾಮಿ, ಗ್ರಾಪಂ ಸದಸ್ಯ ಕಾಂತರಾಜು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಕೆಡಿಪಿ ಸದಸ್ಯ ನಾಗರಾಜ್, ಅರಸೀಕೆರೆ ತಾಲೂಕು ಬೋವಿ ಸಂಘದ ಕಾರ್ಯದರ್ಶಿ ಶಿವಣ್ಣ, ಗುತ್ತಿಗೆದಾರ ಕಾರ್ತಿಕ್ ಇತರರು ಇದ್ದರು.

===

ಫೋಟೋ:

ಪತ್ರಿಕಾಗೋಷ್ಠಿಯಲ್ಲಿ ಅರಸೀಕೆರೆಯ ನಗರಸಭಾ ಮಾಜಿ ಸದಸ್ಯ ಉಮಾಶಂಕರ್ ಮಾತನಾಡಿದರು. ಕೆಡಿಪಿ ಸದಸ್ಯ ಹಾಗೂ ತಾಲೂಕು ಬೋವಿ ಕಮಿಟಿ ಅಧ್ಯಕ್ಷ ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.